ಅಚ್ಚ ಶಾಸ್ತ್ರೀಯ ಕೂಚಿಪುಡಿಯ (Kuchupudi) ನೃತ್ಯಶೈಲಿಯಲ್ಲಿ ನಾಲ್ಕುದಶಕಗಳಿಂದ ಪರಿಶ್ರಮಿಸುತ್ತಿರುವ ಆಚಾರ್ಯ ದೀಪಾ ನಾರಾಯಣನ್ ಶಶೀಂದ್ರನ್ (Deepa Narayan Shashindran) ಸುಮಾರು ಐದುನೂರು ವರ್ಷಗಳ ಇತಿಹಾಸವುಳ್ಳ ಕೂಚಿಪುಡಿ ನೃತ್ಯಶೈಲಿಯ ಖ್ಯಾತ ಗುರು ಪದ್ಮಭೂಷಣ ಡಾ. ವೆಂಪಟಿ ಚಿನ್ನಸತ್ಯಂ (Dr. Venpati Chinnasathyam) ಅವರ ಎರಡನೆಯ ಪರಂಪರೆಗೆ ಸೇರಿದವರು. ಖ್ಯಾತ ಕೂಚಿಪುಡಿ ನಾಟ್ಯಗುರು-ನೃತ್ಯ ಕಲಾವಿದೆ, ಸಂಯೋಜಕಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವ ಇವರು, ‘ಕೂಚಿಪುಡಿ ಪರಂಪರ ಫೌಂಡೇಷನ್ ಟ್ರಸ್ಟ್’ನ ಲೈಫ್ ಟ್ರಸ್ಟಿಯಾಗಿದ್ದು ತಮ್ಮ ಪರಿಣಿತ ಅಭಿನಯ- ಮನೋಜ್ಞ ನೃತ್ಯಪ್ರಸ್ತುತಿಗಳಿಂದ ಕಲಾರಸಿಕರ ಗಮನ ಸೆಳೆದಿದ್ದಾರೆ.
ಭಾರತ ನೃತ್ಯೋತ್ಸವದ ಪ್ರತೀಕವಾದ ‘ನಾಟ್ಯ ಪರಂಪರ ಉತ್ಸವ’ವು ಭಾರತ ಮಾತ್ರವಲ್ಲದೆ, ಯು ಎಸ್, ರಷ್ಯಾ, ತೈವಾನ್, ಕೆನಡಾ ಮುಂತಾದೆಡೆಗಳ ಕುಚಿಪುಡಿ ಮತ್ತು ಇನ್ನಿತರ ನೃತ್ಯಶೈಲಿಗಳ ಖ್ಯಾತ ಕಲಾವಿದರ ನೃತ್ಯ ಪ್ರದರ್ಶನಗಳನ್ನು ಅರ್ಪಿಸುತ್ತ ಬಂದಿರುವುದು ಹೆಗ್ಗಳಿಕೆಯ ಸಂಗತಿ.
ಇದೀಗ ‘ನಾಟ್ಯ ಪರಂಪರ’ ಹದಿಮೂರನೆಯ ಆವೃತ್ತಿಯ ‘ನಾಟ್ಯ ಪರಂಪರಾ ಉತ್ಸವ – 2026 ರ ಸಂಭ್ರಮಾಚರಣೆ ಇದೇ ತಿಂಗಳ 29 ಗುರುವಾರ ಸಂಜೆ 6 ಗಂಟೆಯಿಂದ ಮಲ್ಲೇಶ್ವರದ ಸೇವಾಸದನದಲ್ಲಿ ಅತ್ಯಂತ ವಿಜ್ರುಂಭಣೆಯಿಂದ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಕುಚಿಪುಡಿ ಕುಟುಂಬದ ಹಿರಿಯ ಕುಚಿಪುಡಿ ಗುರುಗಳಾದ ಗುರು ಮಹಾಂಕಾಳಿ ರಾಮಚಂದ್ರ ಮೂರ್ತಿ ಮತ್ತು ಬೆಂಗಳೂರಿನ ಭರತನಾಟ್ಯ ಕಲಾವಿದ ಶ್ರೀ ಚಾರ್ಲ್ಸ್ ಎಂ ಅವರ ಕಲಾ ಸೇವೆಯನ್ನು ಗುರುತಿಸಿ ಗೌರವಿಸಲಾಗುವುದು, ನಂತರ- ದೀಪಾ ಶಶೀಂದ್ರನ್ ಅವರ ಶಿಷ್ಯೆ ಐಶ್ವರ್ಯ ಕೆ.ಆರ್. ಅವರ ಕುಚಿಪುಡಿ ಏಕವ್ಯಕ್ತಿ ಪ್ರದರ್ಶನ, ಮತ್ತು ಅಭಯ ಲಕ್ಷ್ಮಿ ಅವರಿಂದ ಒಡಿಸ್ಸಿ ಹಾಗೂ ಚೆನ್ನೈನ ಕುಚಿಪುಡಿ ಆರ್ಟ್ ಅಕಾಡೆಮಿಯಿಂದ ‘ಕಪಿಸೂತ್ರ’ ನೃತ್ಯರೂಪಕ ಪ್ರದರ್ಶನಗಳು ಕಲಾ ರಸಿಕರ ಕಣ್ಮನ ಸೂರೆಗೊಳ್ಳುವುದು. ಈ ನಯನ ಮನೋಹರವಾದ ಕಾರ್ಯಕ್ರಮವನ್ನು ಬೆಂಗಳೂರಿನ ಕೆ.ಪಿ.ಎಫ್. ಲೈಫ್ ಟ್ರಸ್ಟಿ, ಕುಚಿಪುಡಿ ನೃತ್ಯಜ್ಞೆ ಆಚಾರ್ಯ ದೀಪಾ ಶಶೀಂದ್ರನ್ ಆಯೋಜಿಸಿದ್ದಾರೆ.
ಬೆಂಗಳೂರಿನ ಈ ಕುಚಿಪುಡಿ ಪರಂಪರ ಫೌಂಡೇಷನ್ ಒಂದು ಲಾಭರಹಿತ ಪ್ರತಿಷ್ಠಾನವಾಗಿದ್ದು, ಇದರ ಲೈಫ್ ಟ್ರಸ್ಟಿಯಾದ ಕುಚಿಪುಡಿ ನೃತ್ಯಜ್ಞೆ ದೀಪಾ ಶಶೀಂದ್ರನ್ ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರತಿಭಾನ್ವಿತ ಕಲಾವಿದರನ್ನು ಒಗ್ಗೂಡಿಸಿ, ಅವರಿಗೆ ವ್ಯವಸ್ಥಿತ ಕುಚಿಪುಡಿ ನೃತ್ಯ ತರಬೇತಿ ಮತ್ತು ನೃತ್ಯ ಸಂಯೋಜನೆಯನ್ನು ಬದ್ಧತೆಯಿಂದ ಕಲಿಸಿಕೊಡುವ ಅವಿರತ ಕೈಂಕರ್ಯ ಕೈಗೊಂಡಿದ್ದಾರೆ.
ಗ್ರಾಮೀಣ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸುವುದು ಮುಖ್ಯ: ಪ್ರಕಾಶನಾಥ ಸ್ವಾಮೀಜಿ

