ವರಳೀ ಕಟ್ಟಡ ಪ್ರಕರಣ : ಸುರಾಜ್ಯ ಅಭಿಯಾನವು ರಾಷ್ಟ್ರಪತಿಗಳಿಗೆ ಸಲ್ಲಿಸಿದ ದೂರಿನ ನಂತರ ಕೇಂದ್ರ ಸರ್ಕಾರ ಆ್ಯಕ್ಷನ್ ಮೋಡ್ ನಲ್ಲಿ !
2025 ರಲ್ಲೇ ನೀಡಲಾಗಿತ್ತು ಎಚ್ಚರಿಕೆ; ಈಗಲಾದರೂ ಕಠಿಣ ಭದ್ರತಾ ನಿಯಮಾವಳಿ ಜಾರಿಗೊಳಿಸಿ – ಸುರಾಜ್ಯ ಅಭಿಯಾನ
ಮುಂಬೈ : ವರಳೀಯಲ್ಲಿರುವ ಭಾರತೀಯ ನೌಕಾಪಡೆಯ ಧೋರಣಾತ್ಮಕವಾಗಿ ಅತ್ಯಂತ ಸೂಕ್ಷ್ಮವಾದ ‘ಐಎನ್ಎಸ್ ತ್ರಾಟಾ’ (INS Trata) ನೆಲೆಗೆ ಹೊಂದಿಕೊಂಡಿರುವ ‘ವೃಂದಾವನ ಸಿಎಚ್ಎಸ್’ ಕಟ್ಟಡದ ಮೂಲ ಅನುಮೋದಿತ ಎತ್ತರವನ್ನು 69.96 ಮೀಟರ್ನಿಂದ ನೇರವಾಗಿ 183.26 ಮೀಟರ್ಗೆ ಹೆಚ್ಚಿಸುವ ನಿರ್ಧಾರದಿಂದಾಗಿ ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ಉಂಟಾಗಿದೆ. ಇಷ್ಟೊಂದು ಎತ್ತರದ ಕಟ್ಟಡದಿಂದಾಗಿ ನೌಕಾಪಡೆಯ ಅತಿಸೂಕ್ಷ್ಮ ಚಟುವಟಿಕೆಗಳ ಮೇಲೆ ನೇರ ನೋಟ (Direct line of sight) ಬೀಳಲಿದ್ದು, ಕಟ್ಟಡದ ಮೇಲಿಂದ ನಡೆಯಬಹುದಾದ ಗೂಢಚಾರಿಕೆ, ದೂರಸಂವೇದಿ ಕ್ಯಾಮೆರಾಗಳು ಹಾಗೂ ಡ್ರೋನ್ಗಳ ಹೆಚ್ಚುತ್ತಿರುವ ಬಳಕೆಯಿಂದಾಗಿ ಭದ್ರತೆಗೆ ದೊಡ್ಡ ಕನ್ನ ಬೀಳುವ ಸಾಧ್ಯತೆಯಿದೆ.
ಈ ವಿಷಯವು ನ್ಯಾಯಾಲಯದ ಮೆಟ್ಟಿಲೇರುವ ಮುನ್ನವೇ, ಸುರಾಜ್ಯ ಅಭಿಯಾನದ ಮಹಾರಾಷ್ಟ್ರ ರಾಜ್ಯ ಸಂಯೋಜಕರಾದ ಶ್ರೀ. ಅಭಿಷೇಕ್ ಮುರುಕುಟೆ ಅವರು 25 ಮೇ 2025 ಮತ್ತು 20 ಫೆಬ್ರವರಿ 2026 ರಂದು ಪ್ರಧಾನ ಮಂತ್ರಿ ಕಾರ್ಯಾಲಯ, ಗೃಹ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯಕ್ಕೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು.
ನಂತರ 23 ಆಗಸ್ಟ್ 2026 ರಂದು ಅವರು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ವಿವರವಾದ ಮನವಿ ಪತ್ರ ಕಳುಹಿಸಿ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದರು:
1. ಎತ್ತರದ ಮೇಲೆ ಕಟ್ಟುನಿಟ್ಟಿನ ಮಿತಿ (Mandatory Height Caps): ಸೂಕ್ಷ್ಮ ಸೇನಾ ಮತ್ತು ಕರಾವಳಿ ರಕ್ಷಣಾ ವಲಯಗಳ 1 ರಿಂದ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹೊಸ ಕಟ್ಟಡಗಳ ಎತ್ತರದ ಮೇಲೆ ಕಟ್ಟುನಿಟ್ಟಿನ ಮಿತಿ ನಿಗದಿಪಡಿಸುವುದು.
2. ಕಡ್ಡಾಯ Defence NOC: ನಗರಾಭಿವೃದ್ಧಿ ಪ್ರಾಧಿಕಾರಗಳು ನಿರ್ಮಾಣಕ್ಕೆ ಅನುಮೋದನೆ ನೀಡುವ ಮುನ್ನ ರಕ್ಷಣಾ ಸಚಿವಾಲಯ ಹಾಗೂ ನೌಕಾಪಡೆಯಿಂದ ‘ನಿರಾಕ್ಷೇಪಣಾ ಪ್ರಮಾಣಪತ್ರ’ (NOC) ಪಡೆಯುವುದನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸುವುದು.
3. 2011 ರ ಸುತ್ತೋಲೆಯ ಅನುಷ್ಠಾನ: ಸೇನಾ ನೆಲೆಗಳ ಭದ್ರತೆಗಾಗಿ 18 ಮೇ 2011 ರ ರಕ್ಷಣಾ ಸಚಿವಾಲಯದ ನಿಯಮಾವಳಿಯನ್ನು ಎಲ್ಲಾ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಪಾಲಿಸುವುದು.
ಸುರಾಜ್ಯ ಅಭಿಯಾನದ ಈ ನಿರಂತರ ಬೆಂಬಿಡದ ಪ್ರಯತ್ನದ ನಂತರ ಈಗ ಕೇಂದ್ರ ಸರ್ಕಾರವು ಮುಂಬೈ ಹೈಕೋರ್ಟ್ನ ಮೊರೆ ಹೋಗಿದೆ. ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಹಾಗೂ ನ್ಯಾ. ಅದ್ವೈತ ಎಂ. ಸೇಠನಾ ಅವರಿದ್ದ ವಿಭಾಗೀಯ ಪೀಠದ ಮುಂದೆ ಕೇಂದ್ರ ಸರ್ಕಾರದ ಪರವಾಗಿ ಹಿರಿಯ ವಕೀಲ ಎ. ಎಸ್. ಖಾಂಡೇಪಾರಕರ್ ಅವರು ನೌಕಾಪಡೆಯ ಭದ್ರತೆಯ ಕುರಿತು ವಾದ ಮಂಡಿಸಿದರು. ಇದನ್ನು ಆಲಿಸಿದ ಹೈಕೋರ್ಟ್, ರಾಜ್ಯ ಸರ್ಕಾರ, ಬಿಎಂಸಿ ಹಾಗೂ ಮ್ಹಾಡಾಗೆ ನೋಟಿಸ್ ಜಾರಿ ಮಾಡಿ 2 ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಿದೆ. ಅಲ್ಲದೆ, ‘ಅರ್ಜಿಯ ಅಂತಿಮ ತೀರ್ಪಿನ ಮೇಲೆಯೇ ಮುಂದಿನ ನಿರ್ಮಾಣ ಕಾಮಗಾರಿ ಅವಲಂಬಿತವಾಗಿರುತ್ತದೆ,’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದಲ್ಲದೆ, ಸುಪ್ರೀಂ ಕೋರ್ಟ್ನಲ್ಲಿಯೂ ‘ಟೆಕ್ನೋ ಫ್ರೆಶ್ವರ್ಲ್ಡ್’ ಪ್ರಕರಣದಲ್ಲಿ 18 ಮೇ 2011 ರ ಸುತ್ತೋಲೆಯ ಕುರಿತು ವಿವರಣೆ ನೀಡುವಂತೆ ಮ್ಹಾಡಾಗೆ ನಿರ್ದೇಶಿಸಲಾಗಿದೆ.
“ಕಟ್ಟಡದ ಎತ್ತರವನ್ನು ದಿಢೀರನೆ ಎರಡೂವರೆ ಪಟ್ಟು ಹೆಚ್ಚಿಸುವಾಗ ಭದ್ರತಾ ನಿಯಮಗಳನ್ನು ಗಾಳಿಗೆ ತೂರಲಾಯಿತೇ ಎನ್ನುವುದೇ ನಮ್ಮ ಮುಖ್ಯ ಪ್ರಶ್ನೆಯಾಗಿತ್ತು. ನಮ್ಮ ಮನವಿಯ ನಂತರ ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ತೆರಳಿರುವುದು ಹಾಗೂ ನ್ಯಾಯಾಲಯವು ನೋಟಿಸ್ ಜಾರಿ ಮಾಡಿರುವುದು ನಮ್ಮ ಜನಹಿತ ಹೋರಾಟದ ಫಲಶ್ರುತಿಯಾಗಿದೆ. ಸುರಾಜ್ಯ ಅಭಿಯಾನವು ಈ ವಿವಾದಿತ ನಿರ್ಮಾಣ ಪರವಾನಗಿಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ದೇಶಾದ್ಯಂತ ಇರುವ ಎಲ್ಲಾ ಸೇನಾ ನೆಲೆಗಳ ಸಮೀಪದ ನಿರ್ಮಾಣ ಕಾಮಗಾರಿಗಳಿಗೆ ಏಕರೂಪದ ಮತ್ತು ಕಠಿಣ ಭದ್ರತಾ ನಿಯಮಾವಳಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತದೆ,” ಎಂದು ಶ್ರೀ. ಅಭಿಷೇಕ್ ಮುರುಕುಟೆ ಅವರು ಈ ಪ್ರಕರಣದ ಕುರಿತು ಮಾತನಾಡುತ್ತಾ ತಿಳಿಸಿದರು.

