ಬೆಂಗಳೂರು: ಬೆಂಗಳೂರಿನ ಗಾಂಧಿ ಭವನದಲ್ಲಿ(Gandhi Bhavan) ಗಾಂಧೀಜಿಯ ಬಾಲ್ಯದಿಂದ ಅಂತಿಮ ಯಾತ್ರೆಯವರೆಗಿನ ಜೀವನವನ್ನು ಪಯಣವನ್ನು ಭವಿಷ್ಯದ ಮಕ್ಕಳಿಗೆ ಪರಿಚಯಿಸಲು ಡಿಜಿಟಲ್ ರೂಪದಲ್ಲಿ ರೂಪುಗೊಂಡಿರುವ “ಮಹಾತ್ಮನ ಪಯಣ”(The Mahatma’s Journey).
ಡಿಜಿಟಲ್ ಮ್ಯೂಸಿಯಂ ಅನ್ನು ನಾಳೆ ಗಾಂಧಿ ಜಯಂತಿಯಂದು ಸನ್ಮಾನ್ಯ ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ಡಾ. ವೂಡೇ ಪಿ.ಕೃಷ್ಣ ಅವರು ತಿಳಿಸಿದರು.
ಇಂದು ಗಾಂಧಿ ಭವನದಲ್ಲಿ ನಾಳೆ ಲೋಕಾರ್ಪಣೆಗೊಳ್ಳಲಿರುವ ಈ ಮ್ಯೂಸಿಯಂ ಕುರಿತಂತೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗಾಂಧಿ ಜೀವನ ಪಯಣ ಕುರಿತ ರಾಜ್ಯದ ಮೊಟ್ಟ ಮೊದಲ ಡಿಜಿಟಲ್ ಮ್ಯೂಸಿಯಂ ಇದಾಗಿದ್ದು, ನವದೆಹಲಿಯ ಮಹಾತ್ಮಾ ಗಾಂಧಿ ರಾಷ್ಟ್ರೀಯ ಮ್ಯೂಸಿಯಂನ ನಿರ್ದೇಶಕರಾದ ಡಾ. ಎ. ಅಣ್ಣಾಮಲೈ ಅವರ ಪರಿಕಲ್ಪನೆಯಲ್ಲಿ ಈ ಮ್ಯೂಸಿಯಂ ಅನ್ನು ಪುನರ್ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಡಿಜಿಟಿಲ್ ಮ್ಯೂಸಿಂನಲ್ಲಿ ಗಾಂಧೀಜಿಯವರ ಬಾಲ್ಯದಿಂದ ಅಂತಿಮ ಯಾತ್ರೆಯವರೆಗಿನ ಜೀವನದ ಹಲವು ಅಪರೂಪದ ಛಾಯಾಚಿತ್ರಗಳನ್ನು, ಐತಿಹಾಸಿಕ ದಾಖಲೆಗಳನ್ನು ಪ್ರದರ್ಶಿಸಲಾಗಿದ್ದು, ಈ ಚಿತ್ರಗಳಿಗೆ ಸಂಬಂಧಿಸಿದಂತೆ ನಿರೂಪಣೆಯನ್ನು ಇಲ್ಲಿ ಬಿತ್ತರಿಸಲಾಗಿದೆ. ಇವುಗಳನ್ನು ಓದಿ ತಿಳಿದುಕೊಳ್ಳುವ ಜೊತೆಗೆ ಸ್ಮಾರ್ಟ್ ಪೋನ್‍ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಧ್ವನಿ ಮೂಲಕ ವಿಚಾರ ತಿಳಿಯುವ ಕ್ಯೂಆರ್ ಕೋಡ್ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂದ ಅಂಧರೂ ಸಹ ಮ್ಯೂಸಿಯಂನಲ್ಲಿರುವ ಎಲ್ಲಾ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.
ಮ್ಯೂಸಿಯಂನಲ್ಲಿ ಗಾಂಧೀಜಿ ಅವರು ವಿವಿಧ ಜನರೊಂದಿಗೆ ನಡೆಸಿರುವ ಪತ್ರ ವ್ಯವಹಾರಗಳ ಪ್ರತಿಗಳು, ಗಾಂಧೀಜಿಯವರು ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿದ ವಿವಿಧ ಸ್ಥಳಗಳ ಚಿತ್ರಗಳು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾಗಿದ್ದ ಆರ್. ಆರ್. ದಿವಾಕರ್ ಅವರು ಗಾಂಧೀಜಿ ಅವರಿಂದ ಕನ್ನಡದಲ್ಲೇ ಬರೆಸಿರುವ ಸಂದೇಶವಿದೆ. ಅದರಲ್ಲೂ ವಿಶೇಷವಾಗಿ ಗಾಂಧೀಜಿಯವರು ಎರಡನೇ ಮಹಾಯುದ್ಧವನ್ನು ನಿಲ್ಲಿಸುವಂತೆ ಹಿಟ್ಲರ್ ಅವರಿಗೆ ಬರೆದಿರುವ ಪತ್ರದ ವಾಚನವನ್ನು ಖ್ಯಾತ ನಟ ಅಮಿತಾಬ್ ಬಚ್ಚನ್ ಅವರ ಧ್ವಿನಿಯಲ್ಲಿ ಪ್ರಸ್ತುತ ಪಡಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದರು.
ಈ ಮ್ಯೂಸಿಯಂ ನಲ್ಲಿ ಗಾಂಧಿ ಜೀವನದ ಘಟನಾವಳಿಗಳನ್ನು ಬಿಂಬಿಸುವ ಚಿತ್ರ ಗ್ಯಾಲರಿಯನ್ನು ದೆಹಲಿ ರಾಷ್ಟ್ರೀಯ ಗ್ಯಾಲರಿ ಮಾದರಿಯಲ್ಲಿ ಅಳವಡಿಸಲಾಗಿದ್ದು, ವಿಷಯಾಧಾರಿತವಾಗಿ ರೂಪಸಿಸಲಾಗಿರುವ ಈ ಚಿತ್ರ ಗ್ಯಾಲರಿಯ ವಿಷಯವನ್ನು ಆರು ತಿಂಗಳಿಗೊಮ್ಮೆ ಬದಲಾವಣಿ ಮಾಡಲಾಗುತ್ತದೆ. ಈಗ ‘ಪತ್ರಕರ್ತರಾಗಿ ಗಾಂಧಿʼ ಎಂಬ ವಿಷಯದಲ್ಲಿ ಚಿತ್ರ ಗ್ಯಾಲರಿಯನ್ನು ರೂಪಿಸಲಾಗಿದೆ ಎಂದರು.
ಮ್ಯೂಸಿಯಂನಲ್ಲಿ ಅಳವಡಿಸಲಾಗಿರುವ 21 ಕ್ಯೂಆರ್ ಕೋಡ್ ಗಳಿರುವ ಪುಸ್ತಕವನ್ನು ನಾಳೆಯ ಕಾರ್ಯಕ್ರಮದಲ್ಲಿ ಎಲ್ಲರಿಗೂ ವಿತರಿಸಲಾಗುವುದು. ಇದರಿಂದ ಅವರು ಎಲ್ಲಿಂದ ಬೇಕಾದರೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮ್ಯೂಸಿಯಂ ಅನ್ನು ವೀಕ್ಷಿಸಬಹುದಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕೋಶಾಧ್ಯಕ್ಷರಾದ ಹೆಚ್.ಬಿ. ದಿನೇಶ್ ಅವರು ತಿಳಿಸಿದರು.
ಪ್ರತಿ ದಿನ ಮಕ್ಕಳಿಗೆ ಮ್ಯೂಸಿಯಂ ಪ್ರದರ್ಶನಕ್ಕೆ ಅವಕಾಶ :
ನಮ್ಮ ಮುಂದಿನ ಭವಿಷ್ಯದ ಮಕ್ಕಳಲ್ಲಿ ಗಾಂಧೀಜಿಯವರ ವಿಚಾರಧಾರೆಯನ್ನು ಬೆಳೆಸುವ ಸಲುವಾಗಿ ನಾವೇ ಶಾಲಾ ಕಾಲೇಜಿಗೆ ಹೋಗಿ ಗಾಂಧಿ ಕುರಿತ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೆವು. ಆದರೆ ಇನ್ನು ಮುಂದೆ ಪ್ರತಿ ದಿನ ಒಂದಲ್ಲ ಒಂದು ಶಾಲಾ ಕಾಲೇಜಿನ ಮಕ್ಕಳನ್ನು ಗಾಂಧಿ ಭವನಕ್ಕೆ ಕರೆಯಿಸಿ, ಮ್ಯೂಸಿಯಂ ತೋರಿಸುವ ಜೊತೆಗೆ, ರಸಪ್ರಶ್ನೆ ಕಾರ್ಯಕ್ರಮ, ಗಾಂಧಿ ಕುರಿತ ಸಿನಿಮಾ ತೋರಿಸಿ, ಅವರಿಗೆ ಉಪಹಾರವನ್ನು ನೀಡಿ ಕಳುಹಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಈ ಕುರಿತು ಶಿಕ್ಷಣ ಇಲಾಖೆಗೆ ಪತ್ರವನ್ನು ಬರೆಯಲಾಗುವುದೆಂದು ಡಾ. ವೂಡೇ ಪಿ.ಕೃಷ್ಣ ಅವರು ತಿಳಿಸಿದರು.
ಅಪರೂಪದ ಛಾಯಾಚಿತ್ರ:
ಬೇರೆ ಯಾವ ಮ್ಯೂಸಿಯಂನಲ್ಲೂ ಇರದ ಅಪರೂಪದ ಛಾಯಾಚಿತ್ರಗಳು ಈ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ. ಗಾಂಧೀಜಿಯವರು ತಮ್ಮ ಸಹೋದರ ಕರ್ಸನ್ ದಾಸ್ ಗಾಂಧಿ ಅವರೊಂದಿಗಿರುವ ಭಾವಚಿತ್ರ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಅವರ ಪ್ರಾಣ ಉಳಿಸಿದ ಪೊಲೀಸ್ ಸೂಪರಿಂಟೆಂಡೆಂಟ್ ಅಲೆಕ್ಸಾಂಡರ್ ಮತ್ತು ಸಾರಾ ದಂಪತಿಯವರೊಂದಿಗೆ ಇರುವ ಅಪರೂಪದ ಚಿತ್ರಗಳಿವೆ.
ಸಬರಮತಿ ಆಶ್ರಮದ ಪ್ರತಿರೂಪ:
ಮ್ಯೂಸಿಯಂ ಆವರಣದಲ್ಲಿ ಸಬರಮತಿ ಆಶ್ರಮ ಕಟ್ಟಡದ ಪ್ರತಿರೂಪವನ್ನು ನಿರ್ಮಿಸಲಾಗಿದ್ದು, ಅತ್ಯಂತ ಜನಾಕರ್ಷಿತವಾಗಿದೆ.
2026ರ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ’ಕ್ಕೆ ಡಾ. ವೂಡೇ ಪಿ. ಕೃಷ್ಣ ಆಯ್ಕೆ

