ಬೆಂಗಳೂರು: ಕರ್ನಾಟಕ ಸರ್ಕಾರದ(Karnataka Government) ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಂದು ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಹೊಸೂರು ತಾಲ್ಲೂಕಿನಲ್ಲಿ “ಗಡಿನಾಡು ಕನ್ನಡ ಕಾರ್ಯಕ್ರಮ – ಗಡಿಯಲ್ಲಿ ಕನ್ನಡ ಕಹಳೆ” ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು(Cultural Programme) ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.
“ಗಡಿ ದಾಟಿದರೂ ಕಲೆ ದಾಟಿಲ್ಲ! ಹೊಸೂರಿನಲ್ಲಿ ಕನ್ನಡದ ಮಕ್ಕಳಿಂದ ಭುವನೇಶ್ವರಿಗೆ ನೃತ್ಯಾರ್ಚನೆ. ಇದು ಹೊಸೂರು – ಇಲ್ಲಿ ಕನ್ನಡ ಕೇವಲ ಮಾತಲ್ಲ, ನೃತ್ಯದಲ್ಲೂ ಜೀವಂತ!” ಎಂಬಂತೆ ಸಾಂಸ್ಕೃತಿಕ ಕಲಾ ಪ್ರಕಾರಗಳ ಮೂಲಕ ಗಡಿಭಾಗದಲ್ಲಿ ಕನ್ನಡದ ಸೌರಭ ಪಸರಿಸಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಆನೇಕಲ್ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಬಿ. ಶಿವಣ್ಣ, ಹೊಸೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಶ್ರೀ ಬಾಲಕೃಷ್ಣ ರೆಡ್ಡಿ, ಹೊಸೂರು ತಮಿಳುನಾಡು INTUC ಕಾರ್ಯಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಡಾ. ಕೆ.ಎ. ಮನೋಹರನ್, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ, ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್ ಮತ್ತಿಹಳ್ಳಿ ಹಾಗೂ ಪ್ರಾಧಿಕಾರದ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿವಿಧ ಕಲಾವಿದರು ಹಾಗೂ ಗಡಿ ಭಾಗದ ಜಾನಪದ ತಂಡಗಳಿಂದ ಡೊಳ್ಳು ಕುಣಿತ, ಭರತನಾಟ್ಯ, ಹಿರಿಯ ಗಾಯಕಿ ಎಸ್. ಜಾನಕಿ ಅವರಿಗೆ ಗೀತ ನಮನ, ಗೊರವರ ಕುಣಿತ, ಗುಂಪು ನೃತ್ಯ, ಪಟ ನೃತ್ಯ ಮತ್ತು ಕನ್ನಡ ವಿಚಾರ ಸಂಕಿರಣ ಸೇರಿದಂತೆ ಹಲವು ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ನೆರವೇರಿದವು.
ಇದೇ ಸಂದರ್ಭದಲ್ಲಿ ಹೊಸೂರು ಶಾಸಕರಾದ ಶ್ರೀ ಬಾಲಕೃಷ್ಣ ರೆಡ್ಡಿ ಅವರು ಅಪ್ಪಟ ಕನ್ನಡದಲ್ಲೇ ಮಾತನಾಡಿ, ಬೆಂಗಳೂರಿನ ಮೆಟ್ರೋ ಸೇವೆಯನ್ನು ಹೊಸೂರಿನವರೆಗೆ ವಿಸ್ತರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದರು.
ಮಾಜಿ ಶಾಸಕರಾದ ಡಾ. ಕೆ.ಎ. ಮನೋಹರನ್ ಅವರು ಮಾತನಾಡಿ ಸರ್ ಪುಟ್ಟಣ್ಣ ಚೆಟ್ಟಿ ಪುರಭವನದ ನಿರ್ಮಾತೃಗಳನ್ನು ಸ್ಮರಿಸಿದರು. ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳ ಸಂಗಮ ಕ್ಷೇತ್ರವಾಗಿರುವ ಹೊಸೂರಿನಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿ ತಿಂಗಳೂ ನಡೆಸುವಂತೆ ಗಡಿ ಪ್ರಾಧಿಕಾರಕ್ಕೆ ಕೋರಿದರು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

