ಬೆಂಗಳೂರು: ಬರಗಾಲ ಸಮಸ್ಯೆಯು ಕೇವಲ ಒಂದು ಪಕ್ಷದ ಸಮಸ್ಯೆ ಅಲ್ಲ. ಇದು ನಾಡಿನ ರೈತನ ಸಮಸ್ಯೆ. ಬರಗಾಲ ಮಾರ್ಗಸೂಚಿಗಳಲ್ಲಿ ಬದಲಾವಣೆ ತರಲು ಸರ್ವಪಕ್ಷ ನಿಯೋಗ ಕೇಂದ್ರ ಸರ್ಕಾರವನ್ನು ಕೋರಬೇಕು. ಪಕ್ಷಾತೀತವಾಗಿ ರೈತನ ಸಮಸ್ಯೆ ಕುರಿತು ಕೇಂದ್ರ ಸರ್ಕಾರಕ್ಕೆ ಮನವೊಲಿಸಬೇಕು ಎಂದು ಯಾದಗಿರಿ ಶಾಸಕ ಚನ್ನಾರೆಡ್ಡಿ(Yadagiri MLA Channareddy) ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಬರಗಾಲ ಕುರಿತು ಮಾತನಾಡಿದ ಶಾಸಕರು ರಾಜ್ಯಸರ್ಕಾರದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಶೇಕಡಾ 50ರಷ್ಟು ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲು ಸರ್ವಪಕ್ಷಗಳು ಒತ್ತಾಯ ಮಾಡಬೇಕಿದೆ ಎಂದರು.
ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ನಿಯಮಗಳನ್ನು ಸಡಿಲಿಸಬೇಕು. ಮಳೆ ಹಾಗೂ ಸ್ಥಳೀಯ ವಾಸ್ತವಾಂಶ ಪರಿಶೀಲಿಸಬೇಕು. ರೈತರ ಸಂಕಷ್ಟಗಳನ್ನು ಪರಿಗಣಿಸಬೇಕು. ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ಶಾಸಕರು ಒತ್ತಾಯ ಪಡಿಸಿದರು.
ರಾಜ್ಯದ ಪಾಲಿನ ಜಿ.ಎಸ್.ಟಿ ಹಣ ಬಂದಿಲ್ಲ. ರಾಜ್ಯದ ಪಾಲಿನ ಹಣವನ್ನು ಕೂಡಲೇ ಬಿಡುಗಡೆ ಮಾಡಲು ವಿರೋಧಪಕ್ಷದ ನಾಯಕರು ಕೇಂದ್ರ ಸರ್ಕಾರಕ್ಕೆ ಮನವೊಲಿಸಬೇಕು ಎಂದು ಶಾಸಕರು ವಿಧಾನಸಭೆಯ ಚರ್ಚೆಯ ವೇಳೆ ಮನವಿ ಮಾಡಿದರು.

