ಬೆಂಗಳೂರು: ಸೈಬರ್ ಅಪರಾಧ ಮತ್ತು ಸೈಬರ್ ಭದ್ರತೆ ಕ್ಷೇತ್ರಗಳಲ್ಲಿ(Field of Cybercrime and Cybersecurity) ಕರ್ನಾಟಕ ಪೊಲೀಸರ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಪ್ರಕಟವಾದ ಪತ್ರಿಕಾ ವರದಿ ದಾರಿತಪ್ಪಿಸುವಂತಿದ್ದು, ವಾಸ್ತವಾಂಶಗಳಿಗೆ ವಿರುದ್ಧವಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್(Dr.Shalini Rajaneesh) ಅವರು ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚಿಗೆ ಮಾಧ್ಯಮಗಳಲ್ಲಿ ಪ್ರಕಟವಾದ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ವಾಗ್ವಾದ ಎಂಬ ವಿಷಯದ ಕುರಿತು ಸ್ಪಷ್ಟನೆ ನೀಡಿರುವ ಅವರು, ನಡೆದೇ ಇಲ್ಲದ ಹೇಳಿಕೆಗಳು ಮತ್ತು ಘಟನೆಗಳನ್ನು ನಡೆದಂತೆಯೇ ಬಿಂಬಿಸಲಾಗಿದೆ. ನಡೆದಿತ್ತೆಂದು ಹೇಳಲಾಗಿರುವ ಸಭೆಯ ಚಿತ್ರಣ ಹಾಗೂ ಹಿರಿಯ ಅಧಿಕಾರಿಗಳ ನಡುವೆ ನಡೆದಿತ್ತೆಂದು ಆರೋಪಿಸಲಾಗಿರುವ ಮಾತಿನ ಚಕಮಕಿ ಸುಳ್ಳು ಮತ್ತು ದಾರಿತಪ್ಪಿಸುವಂತಿದ್ದು, ರಾಜ್ಯದ ಸೈಬರ್ ಅಪರಾಧ ವ್ಯವಸ್ಥೆಯ ಕಾರ್ಯನಿರ್ವಹಣೆಯ ಬಗ್ಗೆ ತಪ್ಪು ಕಲ್ಪನೆಯನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದ್ದಾರೆ.
ಸೈಬರ್ ಅಪರಾಧಗಳ ತನಿಖೆ, ಸೈಬರ್ ಭದ್ರತೆ, ಸಾಮಥ್ರ್ಯ ವೃದ್ಧಿ, ತಾಂತ್ರಿಕ ನಾವೀನ್ಯತೆ ಮತ್ತು ನಾಗರಿಕರ ರಕ್ಷಣೆಯ ಕ್ಷೇತ್ರಗಳಲ್ಲಿ ಕರ್ನಾಟಕವು ನಿರಂತರವಾಗಿ ಮುಂಚೂಣಿಯಲ್ಲಿದೆ. ರಾಜ್ಯದ ಸಾಂಸ್ಥಿಕ ವ್ಯವಸ್ಥೆಗಳು ಮತ್ತು ಉಪಕ್ರಮಗಳು ಇತರರು ಅನುಸರಿಸಬಹುದಾದ ಮಾದರಿಗಳೆಂದು ಗುರುತಿಸಲ್ಪಟ್ಟಿವೆ.
ವಿಶೇಷವಾಗಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (KSLSA) ಇತ್ತೀಚಿನ ವರದಿಯು ಸೈಬರ್ ಅಪರಾಧಗಳನ್ನು ಎದುರಿಸುವಲ್ಲಿ ಕರ್ನಾಟಕದ ಕಾರ್ಯಕ್ಷಮತೆಯನ್ನು ಅಗ್ರ ಶ್ರೇಣಿಯಲ್ಲಿ ಇರಿಸಿದ್ದು, ಸದರಿ ಪತ್ರಿಕಾ ವರದಿ ಸತ್ಯಕ್ಕೆ ದೂರವಾಗಿದೆ.
ಜವಾಬ್ದಾರಿಯುತ ಪತ್ರಿಕೋದ್ಯಮವು ನಿಖರತೆಯನ್ನು ಖಚಿತಪಡಿಸುವ ಸಮಾನಾಂತರ ಹೊಣೆಗಾರಿಕೆಯನ್ನು ಹೊಂದಿದೆ. ವಿಶೇಷವಾಗಿ ಹಿರಿಯ ಸಾರ್ವಜನಿಕ ಅಧಿಕಾರಿಗಳಿಗೆ ಹೇಳಿಕೆಗಳನ್ನು ಆರೋಪಿಸುವ ಮತ್ತು ಸಾರ್ವಜನಿಕ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಪ್ರಶ್ನಿಸುವ ಇಂತಹ ವರದಿಗಳನ್ನು ಪ್ರಕಟಿಸುವ ಮೊದಲು ಎಚ್ಚರಿಕೆಯಿಂದ ಪರಿಶೀಲನೆ ನಡೆಸುವುದು, ವಾಸ್ತವಾಂಶಗಳನ್ನು ದೃಢೀಕರಿಸುವುದು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸೂಕ್ತವಾಗಿ ಸತ್ಯಾಸತ್ಯತೆ ಪರಿಶೀಲಿಸುವುದು ಪತ್ರಿಕೋದ್ಯಮದ ಕನಿಷ್ಠ ಸಭ್ಯತೆ ಮತ್ತು ನೈತಿಕತೆಯ ಮಾನದಂಡಗಳಾಗಿವೆ.
ಆದ್ದರಿಂದ, ಮಾಧ್ಯಮಗಳು ಈ ದಾರಿತಪ್ಪಿಸುವ ವರದಿಯನ್ನು ಸರಿಪಡಿಸಿ, ಸೂಕ್ತ ಸ್ಪಷ್ಟೀಕರಣ/ಪ್ರತಿಕ್ರಿಯೆಯನ್ನು ಸಮರ್ಪಕ ಪ್ರಾಮುಖ್ಯತೆಯೊಂದಿಗೆ ಪ್ರಕಟಿಸುವಂತೆ ಮನವಿ ಮಾಡಿದ್ದಾರೆ.

