ಬೆಂಗಳೂರು: ಪ್ರಾಣಿಗಳ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ಸಾಗಿಸಿ ಸಂಸ್ಕರಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೊರಡಿಸಿದ್ದ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ (Karnataka High Court) ಮಧ್ಯಂತರ ತಡೆ ನೀಡಿದೆ. ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ (Karnataka Poultry Traders Association) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.
GBA ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಕೋಳಿ, ಮೀನು, ಹಂದಿ ಹಾಗೂ ಇತರೆ ಪ್ರಾಣಿಗಳ ತ್ಯಾಜ್ಯವನ್ನು ಅಧಿಕೃತವಾಗಿ ನೇಮಕಗೊಂಡ ಸೇವಾ ಪೂರೈಕೆದಾರರ ಮೂಲಕವೇ ಸಂಗ್ರಹಿಸಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸೂಚಿಸಲಾಗಿತ್ತು. ಈ ವ್ಯವಸ್ಥೆಯಡಿ ಪ್ರತಿ ಕೆ.ಜಿ. ಪ್ರಾಣಿಗಳ ತ್ಯಾಜ್ಯಕ್ಕೆ 5 ಹಾಗೂ ಮೂಳೆ ತ್ಯಾಜ್ಯಕ್ಕೆ 3 ಸೇವಾ ಶುಲ್ಕ ನಿಗದಿಪಡಿಸಲಾಗಿತ್ತು.
ನೋಟಿಸ್‌ನಂತೆ, ತ್ಯಾಜ್ಯವನ್ನು ಅಧಿಕೃತ ಸೇವಾ ಪೂರೈಕೆದಾರರಿಗೆ ಮಾತ್ರ ಹಸ್ತಾಂತರಿಸಬೇಕು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದರ ಜೊತೆಗೆ, ಪುನರಾವರ್ತಿತ ಉಲ್ಲಂಘನೆ ಸಂದರ್ಭದಲ್ಲಿ ವ್ಯಾಪಾರ ಪರವಾನಗಿಯನ್ನು ರದ್ದುಪಡಿಸುವ ಎಚ್ಚರಿಕೆಯನ್ನೂ ನೀಡಲಾಗಿತ್ತು.
ಈ ಶುಲ್ಕವನ್ನು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ವಿರೋಧಿಸಿತ್ತು. ಕೋಳಿ ತ್ಯಾಜ್ಯದಲ್ಲಿ ವಾಣಿಜ್ಯ ಮೌಲ್ಯವಿದ್ದು, ಅದನ್ನು ಸಂಗ್ರಹಿಸುವುದಕ್ಕೆ ವ್ಯಾಪಾರಿಗಳಿಂದ ಶುಲ್ಕ ಪಡೆಯುವ ಬದಲು, ತ್ಯಾಜ್ಯಕ್ಕೆ ಕನಿಷ್ಠ ಬೆಂಬಲ ದರ ನಿಗದಿಪಡಿಸಿ ಖರೀದಿಸಬೇಕು ಎಂಬುದು ಸಂಘದ ವಾದವಾಗಿದೆ.
ಸಂಘದ ಪ್ರಕಾರ, ಕೋಳಿ ಅಂಗಡಿಗಳಿಂದ ದೊರೆಯುವ ಕರುಳು, ಚರ್ಮ, ರೆಕ್ಕೆ ಮತ್ತು ಮೂಳೆಗಳಂತಹ ತ್ಯಾಜ್ಯವನ್ನು ಸಂಸ್ಕರಿಸಿ ವಿವಿಧ ಉತ್ಪನ್ನಗಳಿಗೆ ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯಕ್ಕೆ ಶುಲ್ಕ ವಿಧಿಸುವ ಬದಲು ಅದರ ವಾಣಿಜ್ಯ ಮೌಲ್ಯವನ್ನು ಪರಿಗಣಿಸಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
ನೋಟಿಸ್ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, GBA ನೋಟಿಸ್‌ಗೆ ಮಧ್ಯಂತರ ತಡೆ ನೀಡಿದೆ. ಅರ್ಜಿದಾರರು ತಮ್ಮ ತ್ಯಾಜ್ಯವನ್ನು ಈಗಾಗಲೇ ಹೇಗೆ ವೈಜ್ಞಾನಿಕವಾಗಿ ಸಂಸ್ಕರಿಸುತ್ತಿದ್ದಾರೆ ಎಂಬುದನ್ನು ವಿವರಿಸಲು ಅವರಿಗೆ ಅವಕಾಶ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಲಾಗಿದೆ ಎಂದು ವರದಿಯಾಗಿದೆ.

