ದೇಶದ ನೆಚ್ಚಿನ ಪ್ರಧಾನಮಂತ್ರಿ (PM) ನರೇಂದ್ರ ಮೋದಿಜೀ (Modiji) ಅವರ 76ನೇ ಜನ್ಮದಿನವನ್ನು (Birthday) ಇಡೀ ದೇಶಾದ್ಯಂತ ಇವತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅªರು ನಡೆದುಕೊಂಡ ರೀತಿ, ನಾಯಕತ್ವ, ಅಭಿವೃದ್ಧಿ ಕಾರ್ಯಗಳು ವಿಶಿಷ್ಟವಾದುದು ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಹೇಳಿದ್ದಾರೆ.
ನರೇಂದ್ರ ಮೋದಿಜಿರವರ 25 ವರ್ಷಗಳ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಗಾಗಿ ಸೇವಾ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಇಂದು ಯಶವಂತಪುರದ ಅರ್ಬನ್ ಪ್ರೈಮರಿ ಹೆಲ್ತ್ ಸೆಂಟರ್‍ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅವರಿಗೆ ಶುಭ ಕೋರಲು ಆಶೀರ್ವಾದ ದೀಪವನ್ನು ಸಂಜೆ ಬೆಳಗಿಸಲಾಗುತ್ತಿದೆ ಎಂದರು. ಇಲ್ಲಿನ ಆರೋಗ್ಯ ಕೇಂದ್ರದ ಸೌಲಭ್ಯಗಳನ್ನು ಶ್ಲಾಘಿಸಿದರು. ಪ್ರಧಾನಿಯವರು ಕಡಿಮೆ ಹಣದಲ್ಲಿ ಗುಣಮಟ್ಟದ ಔಷಧಿ ಸಿಗುವಂತೆ ಮಾಡಿದ್ದಾರೆ. ಬಡವರ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಡಾ.ಅಶ್ವತ್ಥನಾರಾಯಣ್ ಅವರ ಕಾರ್ಯವೂ ಶ್ಲಾಘನಾರ್ಹ ಎಂದು ತಿಳಿಸಿದರು.

ಕೇಸು ಮುಚ್ಚಿಹಾಕಲು ಏನೇನು ತಂತ್ರಗಾರಿಕೆ ನಡೆದಿದೆ?
ಇದೇವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ಸಿನವರು ಮತ್ತು ಅವರ ಮನೆಯವರು ಮೊದಲು ವಂದೇ ಮಾತರಂ ಕಲಿಯಲಿ. ಇವರ ಡೋಂಗಿ ನಾಟಕಗಳನ್ನು ಎಲ್ಲರೂ ನೋಡಿದ್ದಾರೆ ಎಂದು ಟೀಕಿಸಿದರು. ನನ್ನ ಇತಿಮಿತಿಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಅವರ ತಪ್ಪುಗಳನ್ನು ತಿಳಿಸಿದ್ದೇನೆ. ಅವರು ಕೆಪಿಎಸ್ಸಿ ಆಪಾದನೆಗಳಿಂದ ಮುಕ್ತರಾದರೆ ಸಾಕು ಎಂದು ತಿಳಿಸಿದರು.
ಕೆಪಿಎಸ್ಸಿ ಭ್ರಷ್ಟಾಚಾರದಲ್ಲಿ ಪಾಲೆಷ್ಟು? ಕಾರ್ಯದರ್ಶಿ ತಪ್ಪಿಸಿಕೊಂಡು ಹೋದಾಗ ಅವರು ಹೇಳಿ ಹೋಗಿದ್ದಾರೆ. ಅವರು ಎಲ್ಲಿದ್ದಾರೆಂದು ಗೊತ್ತು ಎಂದಿದ್ದರು. ಯಾವ ಗೆಸ್ಟ್ ಹೌಸಿನಲ್ಲಿ ಅವರನ್ನು ತಂದಿಟ್ಟಿದ್ದಿರಿ ಎಂದು ಕೇಳಿದರು. ಕೇಸು ಮುಚ್ಚಿಹಾಕಲು ಏನೇನು ತಂತ್ರಗಾರಿಕೆ ನಡೆದಿದೆ? ಎಲ್ಲವೂ ಗೊತ್ತಿದೆ ಎಂದು ಸವಾಲು ಹಾಕಿದರು.
ಸಿಐಡಿ, ಎಸ್‍ಐಟಿಯಿಂದ ಈ ಕೇಸ್ ಮುಚ್ಚಿ ಹೋಗಲಿದೆ. ನೀವು ನಿಷ್ಕಳಂಕರೆಂದು ಹೇಳುವುದಾದರೆ ಸಿಬಿಐ ತನಿಖೆ ಮಾಡಿಸಿ. ಆಗ ನಿಮ್ಮ ಬಂಡವಾಳ ಗೊತ್ತಾಗಲಿದೆ ಎಂದರು.
ಆರೋಗ್ಯ ಕೇಂದ್ರಗಳ ಜನಪ್ರಿಯತೆ ಹೆಚ್ಚಿಸಿ- ಡಾ.ಅಶ್ವತ್ಥನಾರಾಯಣ್

ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವಥನಾರಾಯಣ್ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ಆಶಯ ಮತ್ತು ಸೇವಾ ಮನೋಭಾವದ ಸಂಕಲ್ಪದಂತೆ ಇವತ್ತು ಅವರ ಜನ್ಮದಿನದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದ ವಿವರಿಸಿದರು. ಈ ಅಭಿಯಾನವು ಒಂದು ತಿಂಗಳ ಕಾಲ ನಡೆಯಲಿದೆ ಎಂದು ಹೇಳಿದರು.
ಇವತ್ತು ಉಚಿತ ಆರೋಗ್ಯ ಸೇವೆ ನೀಡುವ ಮೂಲಕ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು. ಸರಕಾರಿ ಆರೋಗ್ಯ ಸೇವೆ ಚೆನ್ನಾಗಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ವಸೂಲಿ ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು. ಉತ್ತಮ ಸೇವೆ ನೀಡುವ ಮೂಲಕ ಆರೋಗ್ಯ ಕೇಂದ್ರಗಳ ಜನಪ್ರಿಯತೆ ಹೆಚ್ಚಿಸಬೇಕೆಂದು ಅವರು ಸಲಹೆ ನೀಡಿದರು. ಜಿಲ್ಲಾ ಅಧ್ಯಕ್ಷ ಹರೀಶ್, ಪ್ರಮುಖರು, ಕಾರ್ಯಕರ್ತರು ಇದ್ದರು.

