ಸ್ವಚ್ಛತೆ, ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರಿನ ದಿ ನಾಲೆಡ್ಜ್ ಹ್ಯಾಬಿಟಾಟ್ ಸ್ಕೂಲ್, (The Knowledge Habitat School) ಬೆಂಗಳೂರು ಉತ್ತರ ಪಾಲಿಕೆ, ಬಿ.ಎನ್.ಸಿ.ಸಿ ಇಕೋ ಗ್ರೂಪ್ (BNCC Eco Group) ಸಹಯೋಗದಲ್ಲಿ “ಹ್ಯಾಬಿಟಾಟ್ ಅಭಿಯಾನಂ – ಉತ್ತಮ ಭವಿಷ್ಯಕ್ಕಾಗಿ ಒಂದು ಸಂಕಲ್ಪ” (Habitat Abhiyanam) ಎಂಬ ಸಮುದಾಯ ಆಧಾರಿತ ವಿಶೇಷ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿತ್ತು. ಜಕ್ಕೂರಿನ ರೈತ್ರ ಸಂತೆವರೆಗೆ ನಡೆದ ಮೆಗಾ ಪ್ಲಾಗಿಂಗ್ ಕಾರ್ಯಕ್ರಮದಲ್ಲಿ 800 ಕ್ಕೂ ಅಧಿಕ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸಮುದಾಯದ ಪ್ರತಿನಿಧಿಗಳು ಭಾಗವಹಿಸಿದ್ದರು.
ದಿ ನಾಲೆಡ್ಜ್ ಹ್ಯಾಬಿಟಾಟ್ ಸ್ಕೂಲ್ ಪ್ರಾಂಶುಪಾಲರಾದ ಪಾರ್ವತಿ ಶೇಷಾದ್ರಿ ನೇತೃತ್ವದ ಅಭಿಯಾನಕ್ಕೆ ಬೆಂಗಳೂರು ಉತ್ತರ ಪಾಲಿಕೆ ಆಯುಕ್ತರಾದ ಪೊಮ್ಮಳ ಸುನೀಲ್ ಕುಮಾರ್, ಸಾಮಾಜಿಕ ಕಾರ್ಯಕರ್ತರಾದ ಮೀನಾಕ್ಷಿ ಶೇಷಾದ್ರಿ ಚಾಲನೆ ನೀಡಿದರು. ಮೂಲದಲ್ಲೇ ತ್ಯಾಜ್ಯ ವಿಂಗಡಿಸಿ, ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಅಭಿಯಾನವನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿ ವಾರವೂ ಮುಂದುವರಿಸುವ ಉದ್ದೇಶ ಹೊಂದಲಾಗಿದೆ. ಶಾಲಾ ಮಕ್ಕಳಿಂದಲೇ ಸ್ವಚ್ಛತಾ ಜಾಗೃತಿ ಆರಂಭಿಸಿ, ಅವರ ಮೂಲಕ ಕುಟುಂಬ ಹಾಗೂ ಸಮುದಾಯದಲ್ಲಿ ಪರಿಸರ ಕಾಳಜಿ ಮತ್ತು ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನು ಹರಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ದಿ ನಾಲೆಡ್ಜ್ ಹ್ಯಾಬಿಟಾಟ್ ಶಾಲೆಯ ಈ ಉಪಕ್ರಮ ‘ತರಗತಿಯೊಳಗಿನ ಕಲಿಕೆಯನ್ನು ಸಮಾಜದೊಳಗಿನ ಕಾರ್ಯರೂಪಕ್ಕೆ ತರುವ’ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮನೋಭಾವ ಬೆಳೆಸುವ ಮಹತ್ವದ ಹೆಜ್ಜೆಯಾಗಿದೆ. ಬೆಂಗಳೂರು ಉತ್ತರ ಪಾಲಿಕೆ ಆಯುಕ್ತರಾದ ಪೊಮ್ಮಳ ಸುನೀಲ್ ಕುಮಾರ್ ಮಾತನಾಡಿ, ಪ್ರತಿ 50 ಮೀಟರ್ಗೊಮ್ಮೆ ಕಸದ ಡಬ್ಬಿ ಅಳವಡಿಸಿ ಕಸ ರಸ್ತೆಗೆ ಎಸೆಯದಂತೆ ಅಂಗಡಿ ಮಾಲೀಕರು ನೋಡಿಕೊಳ್ಳಬೇಕು. ಮಾರ್ಷಲ್ ಗಳ ಮೇಲೆ ಹಲ್ಲೆಗೈದವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಕರ್ತವ್ಯ ಲೋಪವೆಸಗಿದ ಮಾರ್ಷಗಳ ಮೇಲೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ದಿ ನಾಲೆಡ್ಜ್ ಹ್ಯಾಬಿಟಾಟ್ ಸ್ಕೂಲ್ ಪ್ರಾಂಶುಪಾಲರಾದ ಪಾರ್ವತಿ ಶೇಷಾದ್ರಿ ಮಾತನಾಡಿ, “ಒಂದು ನೆರೆಹೊರೆ. ಒಂದು ಸಂಕಲ್ಪ. ಹಲವು ಕೈಗಳು” ಎಂಬ ಸಂದೇಶದೊಂದಿಗೆ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ. ತರಗತಿ ಕಲಿಕೆ ಮೀರಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಿ ಪರಿಸರ ಸಂರಕ್ಷಣೆಯಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳುವಂತೆ ಸಬಲೀಕರಣಗೊಳಿಸಲಾಗಿದೆ. ಪುನರ್ ನಿರ್ಮಾಣದ ಮೂಲಕ ನಾವು ಕಳೆದುಕೊಂಡಿರುವುದನ್ನು ಪಡೆಯಬಹುದು. ಸಣ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಂದ ಆರಂಭವಾದ ಅಭಿಯಾನ ಇದು ಬೃಹತ್ ಸ್ವರೂಪ ಪಡೆದುಕೊಂಡಿದೆ ಎಂದರು. ದಿ ನಾಲೆಡ್ಜ್ ಹ್ಯಾಬಿಟಾಟ್ ಸ್ಕೂಲ್ ನ ಪೇರೆಂಟ್ ಪಾರ್ಟರ್ ಶಿಫ್ ಅಧಿಕಾರಿ ವಿನ್ಸಿದೇವಯ್ಯ ಮಾತನಾಡಿ, ವಿದ್ಯಾರ್ಥಿಗಳಿಂದ ಆರಂಭವಾಗಿರುವ ಅಭಿಯಾನದ ಮೂಲಕ ಸ್ವಚ್ಛ, ಸುಂದರ ಬೆಂಗಳೂರು ನಿರ್ಮಿಸಲು ಒತ್ತು ನೀಡುವುದಾಗಿ ತಿಳಿಸಿದರು.
ಶಾಲೆಯ ಮುಖ್ಯ ವಿದ್ಯಾರ್ಥಿ ಶಾಬ್ಡಿ ಸದಂಗಿ ಮಾತನಾಡಿ, ರಸ್ತೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಸಂತೆಗೆ ಆಗಮಿಸುವವವರಿಗೆ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ದಿ ನಾಲೆಡ್ಜ್ ಹ್ಯಾಬಿಟಾಟ್ ಸ್ಕೂಲ್ ನ ಶ್ರಾವ್ಯ ಅರೋರ ಮಾತನಾಡಿ, ಶಾಲೆಯಲ್ಲಿ ಪರಿಸರ ಕ್ಲಬ್ ಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮತ್ತು ತರಬೇತಿ ನೀಡಲಾಗಿದೆ ಎಂದು ಹೇಳಿದರು. ಬೆಂಗಳೂರು ಉತ್ತರ ಪಾಲಿಕೆ ಜಂಟಿ ಆಯುಕ್ತರಾದ ಪಲ್ಲಿವಿ, ಡಿಜೆಎಂ ರಶ್ಮಿ, ಎಜಿಎಂ ಪವನ್ ಮತ್ತಿತರರು ಉಪಸ್ಥಿತರಿದ್ದರು.

