ಭಾರತದ ಸರ್ವೋಚ್ಚ ನ್ಯಾಯಾಲಯದ ಬಾಲ ನ್ಯಾಯ ಸಮಿತಿಯ ನಿರ್ದೇಶನದಂತೆ, ಕರ್ನಾಟಕ ಉಚ್ಚ ನ್ಯಾಯಾಲಯದ ಬಾಲ ನ್ಯಾಯ ಸಮಿತಿಯು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ನಿಮ್ಹಾನ್ಸ್ (NIMHANS), ಯೂನಿಸೆಫ್ (UNICEF) ಹಾಗೂ ವಿವಿಧ ಸರ್ಕಾರೇತರ ಸಂಸ್ಥೆಗಳ (NGOs) ಸಹಯೋಗದೊಂದಿಗೆ “ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, 2015: ಜಾರಿಯ ಒಂದು ದಶಕ ಮತ್ತು ಮುಂದಿನ ಹಾದಿ” ಎಂಬ ವಿಷಯದ ಕುರಿತು 2026ನೇ ಆಗಸ್ಟ್ 29 ಮತ್ತು 30 ರಂದು ಬೆಂಗಳೂರಿನ ಹೆಚ್. ಸಿದ್ದಯ್ಯ ರಸ್ತೆಯಲ್ಲಿರುವ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ವಾರ್ಷಿಕ ಪಾಲುದಾರರ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು 2026ರ ಆಗಸ್ಟ್ 29ರ ಶನಿವಾರ ಬೆಳಿಗ್ಗೆ 9:15 ಕ್ಕೆ ನೆರವೇರಲಿದ್ದು, ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಮುಖ್ಯ ಸಂರಕ್ಷಕರಾದ ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ವಿಭು ಬಖ್ರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಆಗಸ್ಟ್ 29 ಮತ್ತು 30 ರಂದು ನಡೆಯಲಿರುವ ವಿಚಾರಗೋಷ್ಠಿಗಳಲ್ಲಿ ಮಕ್ಕಳ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳು, ಬಾಲ ನ್ಯಾಯ ಮಂಡಳಿಗಳ ಪ್ರಧಾನ ಮೆಜಿಸ್ಟ್ರೇಟ್‌ಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳು, ಮಕ್ಕಳ ಕಲ್ಯಾಣ ಸಮಿತಿಯ (CWC) ಅಧ್ಯಕ್ಷರು ಹಾಗೂ ಸದಸ್ಯರು, ವಿಶೇಷ ಬಾಲ ಪೊಲೀಸ್ ಘಟಕದ (SJPU) ಸಿಬ್ಬಂದಿ, ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ವಿವಿಧ ಪಾಲುದಾರ ಇಲಾಖೆಗಳ ಪ್ರತಿನಿಧಿಗಳು ಹಾಗೂ ಪ್ರಮುಖ ಸ್ವಯಂಸೇವಾ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
