ಹಾಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (First Grade College) ಗಳನ್ನು ಬಲಪಡಿಸುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ದಾವಣಗೆರೆ ದಕ್ಷಿಣ (Davanagere South) ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ (Education Minister) ಬಸವರಾಜ ರಾಯರೆಡ್ಡಿ (Rayareddy) ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ, ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಕೆ. ಅಬ್ದುಲ್ ಜಬ್ಬರ್ ಅವರು ನಿಯಮ 72ರ ಅಡಿಯಲ್ಲಿ ಗಮನ ಸೆಳೆಯುವ ಸೂಚನೆಯಡಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದು, 2 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಈ ಭಾಗದಲ್ಲಿ ಅಹಿಂದ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಉನ್ನತ ಶಿಕ್ಷಣಕ್ಕಾಗಿ ದೂರದ ಪ್ರದೇಶಗಳಿಗೆ ಪ್ರಯಾಣಿಸಬೇಕಾದ ಸವಾಲು ಎದುರಿಸುತ್ತಿದ್ದಾರೆ. ಆದ್ದರಿಂದ ಈ ಕ್ಷೇತ್ರದಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಹೊಸ ಸರ್ಕಾರಿ ಕಾಲೇಜು ಸ್ಥಾಪಿಸಬೇಕೆಂದು ಜಬ್ಬರ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಉತ್ತರಿಸಿದ ಸಚಿವರು, ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಈಗಾಗಲೇ ಶೈಕ್ಷಣಿಕ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಿವೆ ಎಂದು ವಿವರಿಸಿದರು. ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಇಲಾಖಾ ವ್ಯಾಪ್ತಿಯ ಪದವಿ ಕಾಲೇಜುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಜಿಲ್ಲೆಯಲ್ಲಿ 11 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ 08 ಖಾಸಗಿ ಅನುದಾನಿತ ಪದವಿ ಕಾಲೇಜುಗಳು ಸೇರಿ ಒಟ್ಟು 19 ಪದವಿ ಕಾಲೇಜುಗಳು ಲಭ್ಯವಿವೆ. ದಾವಣಗೆರೆ ದಕ್ಷಿಣ ಕ್ಷೇತ್ರದ ವಿದ್ಯಾರ್ಥಿಗಳು ಈ ಮೂಲಭೂತ ಸೌಕರ್ಯವುಳ್ಳ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಒಟ್ಟು 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. 2026-27ನೇ ಸಾಲಿನ ಆಯವ್ಯಯ ಭಾಷಣದಂತೆ ರಾಜ್ಯದ 8 ಆಯ್ದ ವಿವಿಧ ಕ್ಷೇತ್ರ/ಸ್ಥಳಗಳಲ್ಲಿ ಹೊಸ ಸರ್ಕಾರಿ ಪ್ರಥಮ ದರ್ಜೆ ಅಥವಾ ವಸತಿಯುಕ್ತ ಪದವಿ ಕಾಲೇಜುಗಳನ್ನು ಸ್ಥಾಪಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ.
ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಪ್ರಾರಂಭಿಸುವ ಕುರಿತು ಪರಿಶೀಲಿಸಲು ಸರ್ಕಾರದ ಆದೇಶ (ಸಂಖ್ಯೆ: ಇಡಿ/1/ಹೆಚ್‌ಪಿಸಿ/2024, ದಿನಾಂಕ: 13.02.2026) ಅನ್ವಯ 5 ಜನ ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಪ್ರಸ್ತುತ ಈ ಸಮಿತಿಯನ್ನು ಪುನರ್ ರಚಿಸುವ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರು ಮಾಹಿತಿ ನೀಡಿದರು.
ಸದ್ಯಕ್ಕೆ ಹೊಸ ಕಾಲೇಜುಗಳನ್ನು ತೆರೆಯುವುದಕ್ಕಿಂತ ಹೆಚ್ಚಾಗಿ, ರಾಜ್ಯದಲ್ಲಿ ಈಗ ಅಸ್ತಿತ್ವದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಅವುಗಳನ್ನು ಶೈಕ್ಷಣಿಕವಾಗಿ ಮತ್ತು ಭೌತಿಕವಾಗಿ ಬಲವರ್ಧನೆಗೊಳಿಸುವುದೇ ಸರ್ಕಾರದ ಆದ್ಯತೆಯಾಗಿದೆ. ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸುವ ಬಗ್ಗೆ ಸದ್ಯಕ್ಕಿಲ್ಲ, ಮುಂದಿನ ದಿನಗಳಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

