ಕಲೆ ಎಂದರೆ ಮನಸ್ಸಿನ ಭಾವನೆಗೆ ಬಣ್ಣ ಹಚ್ಚುವ ಸುಂದರ ಅಭಿವ್ಯಕ್ತಿ
ಲತಾ ಎಲ್.ಜಿ.ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಗೊರೂರು ಅನಂತರಾಜು, ಹಾಸನ.
ಕಲೆ (Art) ಎಂದರೆ ಮನಸ್ಸಿನ ಭಾವನೆಗೆ ಬಣ್ಣ ಹಚ್ಚುವ ಸುಂದರ ಅಭಿವ್ಯಕ್ತಿ ಎಂಬ ಶೀರ್ಷಿಕೆಯಡಿ ಚಿತ್ರಕಲಾವಿದೆ ಲತಾ ಎಲ್.ಜಿ. (Latha LG) ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಹಾಸನದ (Hassan) ಸಂಸ್ಕೃತ ಭವನದಲ್ಲಿ (Samskrutha Bhavana) ನೆನ್ನೆ ಭಾನುವಾರ ಯಶಸ್ವಿಯಾಗಿ ನಡೆಯಿತು. ಲತಾ ಎಲ್.ಜಿ ಪ್ರಸ್ತುತ ಶಾಂತಲಾ ಚಿತ್ರಕಲಾ ವಿದ್ಯಾಲಯದ ಶಿಕ್ಷಕಿ. ಈಗಾಗಲೇ ಹಲವು ಗ್ರೂಪ್ ಶೋಗಳಲ್ಲಿ ಭಾಗಿಯಾಗಿರುವ ಇವರು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಚಿತ್ರಕಲೆ ಬಗ್ಗೆ ಆಸಕ್ತಿ ಮೂಡಿಸಲು ಹಲವು ಬಾರಿ ಸ್ಫರ್ಧೆ ನಡೆಸಿ ಚಂದವಾಗಿ ಬರೆದ ಮಕ್ಕಳಿಗೆ ಅಂದದ ಬಹುಮಾನ ನೀಡಿದ್ದಾರೆ. ಈ ಬಾರಿಯೂ ಬೆಳಿಗ್ಗೆ 1 ರಿಂದ 10ನೇ ತರಗತಿ ಮಕ್ಕಳಿಗೆ ಒಂದೊ0ದು ತರಗತಿಯ ಮಕ್ಕಳಿಗೂ ಒಂದೊ0ದು ವಿಷಯ ಕೊಟ್ಟು ಚಿತ್ರ ಬರೆಸಿ ಗೆದ್ದ ಮಕ್ಕಳಿಗೆ ನಮ್ಮಿಂದ ಬಹುಮಾನ ಕೊಡಿಸಿ, ಪ್ರದರ್ಶನಕ್ಕೆ ಇರಿಸಿದ್ದ ತಮ್ಮ ಕಲಾಕೃತಿಗಳನ್ನು ತೋರಿಸಿ ವರ್ಣಿಸಿದರು.
ಇವರು ಪ್ರದರ್ಶನಕ್ಕೆ ಇರಿಸಿದ್ದ ಕಲಾಕೃತಿಗಳು ಒಂದು ಬುದ್ದ ಸೀರೀಸ್ ಚಿತ್ರಗಳಾದರೆ ಮತ್ತೊಂದು ಹೆಣ್ಣಿನ ಮನೋಭಾವನೆಗಳ ಚಿಂತನೆಗೆ ಹಚ್ಚುವ ಕಲಾಕೃತಿಗಳು. ಜೊತೆಗೆ ಕೆಲವು ಕ್ರಾಪ್ಟ್ ವರ್ಕ್ಸ್ಗಳು. ಕಲಾಕೃತಿ ವೀಕ್ಷಿಸುತ್ತಾ ಊರು ಯಾವುದು ಕೇಳಿದೆ.
ಸಾರ್, ನಮ್ಮೂರು ಹಾಸನ ತಾ. ಕಟ್ಟಾಯ ಹೋ. ಕಿತ್ತಾನೆ ಅಂಚೆ ಲಕ್ಕನಾಯಕನಹಳ್ಳಿ ಎಂದರು. ತಂದೆ ಗುರುವೇಗೌಡ, ತಾಯಿ ಕಮಲ. ಚಿತ್ರಕಲೆ ಯಲ್ಲಿ ಇವರು ಅರಳಿದ ಕಮಲ. ತಮ್ಮ ವ್ಯಾಸಂಗಕ್ಕೆ ಚಿತ್ರಕಲೆಯನ್ನೇ ಆರಿಸಿಕೊಂಡು ಡಿಪ್ಲೋಮ ನಂತರ 5 ವರ್ಷ ಚಿತ್ರಕಲೆ ಶಿಕ್ಷಕರ ತರಬೇತಿಯನ್ನು ಹಾಸನದ 32 ವರ್ಷ ಹಳೆಯದಾದ ಶಾಂತಲಾ ಚಿತ್ರಕಲಾ ಕಾಲೇಜಿನಲ್ಲಿ ಕಲಿತು ಈಗ ಅಲ್ಲಿಯೇ ಶಿಕ್ಷಕಿಯಾಗಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ.

ತಮ್ಮ ವ್ಯಾಸಂಗ ಅವಧಿ 1998-2004ವರೆಗೆ ಪ್ರತಿ ವರ್ಷ ಹಾಸನದಲ್ಲಿ ಸಮೂಹ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದು 2000-2004 ರಲ್ಲಿ ಪ್ರತಿ ವರ್ಷ ಮೈಸೂರು ದಸರಾದಲ್ಲಿ ಭಾಗವಹಿಸಿದ್ದಾg. 2003 ಹಾಗೂ 2004ರಲ್ಲಿ ಹಾಸನದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮೂಹ ಚಿತ್ರಕಲಾ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. 2001-2003 ಶಾಂತಿವನ ಟ್ರಸ್ಟ್, ಧರ್ಮಸ್ಥಳ ಇವರ ಚಿತ್ರಕಲಾ ಸ್ಫರ್ಧೆಯಲ್ಲಿ 3 ವರ್ಷ ಭಾಗವಹಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ 7ನೇ ಕಲಾಮೇಳದಲ್ಲಿ ಸ್ಫರ್ಧಿಸಿದ್ದರು. 2005-2017 ನಿರಂತರ ಬೆಂಗಳೂರಿನ ಚಿತ್ರಸಂತೆಯಲ್ಲಿ ತಮ್ಮ ಕಲಾಕೃತಿ ಪ್ರದರ್ಶಿಸಿದ್ದಾರೆ.

ಸದ್ಯ ಇವರ ಪ್ರದರ್ಶಿತ ಕಲಾಕೃತಿಗಳಲ್ಲಿ ಬುದ್ದ ಸೀರೀಸ್ ಕಲಾಕೃತಿಗಳು ತಪಸ್ವಿ ಭಾವದಲ್ಲಿ ಪಡಿಮೂಡಿವೆ. ಬುದ್ದ ಎಂದರೆ ಶಾಂತಿ ಎಂಬರ್ಥ ಸೂಚಿಸಿವೆ. ತಮ್ಮ ಕಲಾಕೃತಿಗಳಲ್ಲಿ ತುಂಬಾ ನೈಜವಾಗಿ ಬಣ್ಣ ಹಾಕುವ ಇವರು ಬುದ್ಧನ ಸರಳತೆ ಮುಗ್ಧತೆ ಸೌಮ್ಯ ಸ್ವಭಾವ ಇಷ್ಟಪಟ್ಟು ಬುದ್ದನ ಕಲಾಕೃತಿ ರಚಿಸುವಲ್ಲಿ ಸಿದ್ಧಹಸ್ತರು. ಶಾಂತಿ ಸಂಕೇತದ ಪಾರಿವಾಳ ಕಮಲದ ಹೂವು ಕೂಡ ಸಾಂಕೇತಿಸಿವೆ. ಆಫ್ರಿಕನ್ ಮಹಿಳೆಯರ ಟ್ರೆಡಿಷನಲ್ ಪೇ0ಟಿ0ಗ್ ಕಲಾತ್ಮಕವಾಗಿವೆ. ಪಕ್ಷಿಗಳ ಚಿತ್ರಗಳು ಮಕ್ಕಳನ್ನು ಆಕರ್ಷಿಸುತ್ತವೆ. ನೀಲಿ ಕೆಂಪು ಹಳದಿ ಬಣ್ಣಗಳ ಜೊತೆ ತಮ್ಮದೇ ಆದಂತಹ ವಿಶೇಷ ರೀತಿಯ ಆಕ್ರಲಿಕ್ ಬಣ್ಣಗಳಿಂದ ಕ್ಯಾನ್ವಾಸ್ ಪೂರ್ಣಗೊಂಡಿವೆ. ಸ್ತಿ ಚಿಂತನೆಯ ಚಿತ್ರಗಳು ಶಾಂತಚಿತ್ತದ ಲತಾ ಮೇಡಂ ಅವರ ಒಳತೋಟಿಯ ಭಾವನೆಗಳನ್ನು ಪ್ರತಿಬಿಂಬಿಸಿವೆ.
ಗೊರೂರು ಅನಂತರಾಜು, ಹಾಸನ.
ಮೊ: 9449462879.

