ಗೊಟ್ಟಿಗೆರೆಯ ಸರ್ಕಾರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾನಸಿಕ ಆರೋಗ್ಯ ರಕ್ಷಣೆಗೆ ಹೊಸ ಹೆಜ್ಜೆ: ಸಮಾಧಾನ ಮನಚೈತನ್ಯ’ ಸಮಾಲೋಚನಾ ಕೇಂದ್ರ ಆರಂಭ ಮಾನಸಿಕ ರೋಗಿಗಳಿಗೆ ಸೂಕ್ತ ಆರೈಕೆ, ಬೆಂಬಲ ಅಗತ್ಯ: ಡಾ. ಸಿ.ಆರ್. ಚಂದ್ರಶೇಖರ್ (Dr.C.R.Chandrashekhar)
ಮಾನಸಿಕ ಆರೋಗ್ಯದ ವಲಯದಲ್ಲಿ ಸಾರ್ವಜನಿಕರಿಗೆ ಮಾನಸಿಕ ಕ್ಷೇಮ ಮತ್ತು ಸಮಾಲೋಚನಾ ಸೇವೆಗಳನ್ನು ಸುಲಭವಾಗಿ ದೊರಕಿಸುವ ಉದ್ದೇಶದಿಂದ ರೋಟರಿ ಬನ್ನೇರುಘಟ್ಟ ರೋಡ್ (ಆರ್.ಬಿ.ಬಿ.ಅರ್)ನಿಂದ (RBBR) ‘ಸಮಾಧಾನ ಮನಚೈತನ್ಯ’ ಸಮಾಲೋಚನಾ ಕೇಂದ್ರವನ್ನು ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯ (Gottigere) ಸರ್ಕಾರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರಂಭಿಸಲಾಗಿದೆ. ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೂಲಕವೇ ಮಾನಸಿಕ ಆರೋಗ್ಯ ಸೇವೆಗಳನ್ನು ಜನರ ಸಮೀಪಕ್ಕೆ ಕೊಂಡೊಯ್ಯುವ ಈ ಉಪಕ್ರಮ ಮಹತ್ವದ ಹೆಜ್ಜೆಯಾಗಿದೆ. ಮಾನಸಿಕ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಭಾವನಾತ್ಮಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಸೂಕ್ತ ಸಮಾಲೋಚನೆ ಮತ್ತು ಮಾರ್ಗದರ್ಶನ ನೀಡುವುದು ಹಾಗೂ ಅಗತ್ಯವಿದ್ದಾಗ ಯಾವುದೇ ಹಿಂಜರಿಕೆಯಿಲ್ಲದೆ ತಜ್ಞರ ನೆರವು ಪಡೆಯುವಂತೆ ಪ್ರೋತ್ಸಾಹಿಸುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ. ರೋಟರಿ ಜಿಲ್ಲೆ 3191ರ ಜಿಲ್ಲಾ ಗವರ್ನರ್ ರೋಟೇರಿಯನ್ ಅನಿಲ್ ಗುಪ್ತಾ, ಆರೋಗ್ಯಾಧಿಕಾರಿ ಡಾ. ಎ.ಎಸ್. ಬಾಲಸುಂದರ್, ಮಾನಸಿಕ ಆರೋಗ್ಯ ವಿಭಾಗದ ಉಪನಿರ್ದೇಶಕರಾದ ಡಾ. ರಜನಿ ಪಾರ್ಥಸಾರಥಿ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸಿ.ಆರ್. ಚಂದ್ರಶೇಖರ್, “ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು.
ನಸಿಕ ಸಮಸ್ಯೆ ಇರುವವರನ್ನು ಕಳಂಕದ ದೃಷ್ಟಿಯಿಂದ ನೋಡಬಾರದು. ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಸೂಕ್ತ ಸಮಯದಲ್ಲಿ ಸಮಾಲೋಚನೆ ನಡೆಸಿ ಆರೈಕೆ ಮತ್ತು ಬೆಂಬಲ ನೀಡುವುದು ಅತ್ಯಂತ ಅಗತ್ಯ” ಎಂದು ಹೇಳಿದರು. ಸರ್ಕಾರಿ ಆರೋಗ್ಯ ಕೇಂದ್ರದಲ್ಲಿಯೇ ಮಾನಸಿಕ ಕ್ಷೇಮ ಸೇವೆಗಳನ್ನು ಆರಂಭಿಸುವ ಮೂಲಕ ಸಾರ್ವಜನಿಕರಿಗೆ ನೆರವನ್ನು ಮತ್ತಷ್ಟು ಸುಲಭಗೊಳಿಸಿರುವ ರೋಟರಿ ಬನ್ನೇರುಘಟ್ಟ ರೋಡ್ ಸಂಸ್ಥೆಯ ಕಾರ್ಯವನ್ನು ಗಣ್ಯರು ಶ್ಲಾಘಿಸಿದರು. “ಸಮಾಧಾನದಿಂದ ಬಲಿಷ್ಠ ಮನಸ್ಸು, ಬಲಿಷ್ಠ ಮನಸ್ಸಿನಿಂದ ಆರೋಗ್ಯಕರ ಸಮಾಜ” ಎಂಬ ಆಶಯದೊಂದಿಗೆ ಈ ಮಾನಸಿಕ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗಿದೆ.
ಈ ಮಹತ್ವದ ಉಪಕ್ರಮಕ್ಕೆ ರೋಟರಿ ಜಿಲ್ಲಾ 3191ರ ಮಾನಸಿಕ ಕ್ಷೇಮ ವಿಭಾಗದ ಜಿಲ್ಲಾ ನಿರ್ದೇಶಕ ರೋಟೇರಿಯನ್ ರಘು ಅಲ್ಲಂ, ಆರ್.ಬಿ.ಬಿ.ಆರ್ ಅಧ್ಯಕ್ಷ ರೋಟೇರಿಯನ್ ಸುರೇಶ್ ಪ್ರಕಾಶ್, ಆರ್.ಬಿ.ಬಿ.ಆರ್ ಮಾನಸಿಕ ಕ್ಷೇಮ ವಿಭಾಗದ ನಿರ್ದೇಶಕರಾದ ರೋಟೇರಿಯನ್ ವಂದನಾ ಕುಲಕರ್ಣಿ, ನಿಕಟಪೂರ್ವ ಅಧ್ಯಕ್ಷರಾದ ಡಾ. ಕನ್ವಲ್ ಅವರ ನೇತೃತ್ವದಲ್ಲಿ ಹಾಗೂ ಗೊಟ್ಟಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆರ್.ಎನ್. ಲಕ್ಷ್ಮೀಪತಿ ಅವರ ಸಹಕಾರದಲ್ಲಿ ಈ ಚಟುವಟಿಕೆ ನಡೆಯುತ್ತಿದೆ. ‘ಸಮಾಧಾನ ಮನಚೈತನ್ಯ’ ಯೋಜನೆಯು ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ, ಮನಸ್ಸನ್ನು ಬಲಪಡಿಸಿ ಆರೋಗ್ಯಕರ ಸಮಾಜ ನಿರ್ಮಿಸುವ ಗುರಿ ಹೊಂದಿದೆ. ಮುಂದಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಹಾಗೂ ಸಮಾಲೋಚನಾ ಸೇವೆಗಳನ್ನು ಇನ್ನಷ್ಟು ವಿಸ್ತರಿಸಿ, ಅಗತ್ಯವಿರುವ ಪ್ರತಿಯೊಬ್ಬರಿಗೂ ಸರಿಯಾದ ಸಮಯದಲ್ಲಿ ನೆರವು ದೊರಕುವಂತೆ ಮಾಡುವುದಾಗಿ ರೋಟರಿ ಬನ್ನೇರುಘಟ್ಟ ರೋಡ್ ತಿಳಿಸಿದೆ.
