ಬೆಂಗಳೂರು : ಕರ್ನಾಟಕದ ಯುವಜನತೆಯಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಮತ್ತು ಅವರನ್ನು ತಳಮಟ್ಟದ ಆಡಳಿತದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡಲು ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ.
ಪ್ರತಿ ಗ್ರಾಮ ಪಂಚಾಯಿತಿ ಮತ್ತು ನಗರ ವಾರ್ಡ್‍ಗಳ ವ್ಯಾಪ್ತಿಯಲ್ಲಿ ಒಟ್ಟು 10,000 “ಭಾರತ್ ಜೋಡೋ ಯುವ ಸಂಘ”ಗಳನ್ನು(Bharat Jodo Youth Association) ಸ್ಥಾಪಿಸಲು ಅಧಿಕೃತವಾಗಿ ಸರ್ಕಾರಿ ಆದೇಶ ಹೊರಡಿಸಲಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮುಖಾಂತರ ಅನುಷ್ಠಾನಗೊಳ್ಳಲಿರುವ ಈ ಯೋಜನೆಗಾಗಿ ವಾರ್ಷಿಕವಾಗಿ ಒಟ್ಟು ರೂ. 1,000 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.
ಯೋಜನೆಯ ಪ್ರಮುಖ ಮುಖ್ಯಾಂಶಗಳು:
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸರಾಸರಿ 6,000 ಹಾಗೂ ನಗರ ಪ್ರದೇಶಗಳ ವಾರ್ಡ್‍ಗಳಲ್ಲಿ ಸರಾಸರಿ 4,000 ಸಂಘಗಳು ಸೇರಿದಂತೆ ಒಟ್ಟು 10,000 ಸಂಘಗಳನ್ನು ಸ್ಥಾಪಿಸಲಾಗುವುದು. ಇದರಿಂದ ಸುಮಾರು 50 ಲಕ್ಷಕ್ಕೂ ಹೆಚ್ಚು ಯುವಜನರು ಈ ಯೋಜನೆಯಡಿ ಸದಸ್ಯರಾಗಲಿದ್ದಾರೆ.
ಅನುದಾನ ಹಂಚಿಕೆ:
ಪ್ರತಿಯೊಂದು ಯುವ ಸಂಘಕ್ಕೆ ವಾರ್ಷಿಕವಾಗಿ ರೂ.10.00 ಲಕ್ಷಗಳ ಅನುದಾನ ಸಿಗಲಿದ್ದು, ಇದನ್ನು ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದರ ಜೊತೆಗೆ ಯೋಜನೆ ಉಸ್ತುವಾರಿಗಾಗಿ (PMU) ಪ್ರತಿ ವರ್ಷ ರೂ. 10.00 ಕೋಟಿ ಒದಗಿಸಲಾಗುವುದು.
ನೋಂದಣಿ ಮತ್ತು ವಯೋಮಿತಿ:
16 ರಿಂದ 35 ವರ್ಷದೊಳಗಿನ ಯುವಕರು ಇದರ ಸದಸ್ಯರಾಗಬಹುದು. ಸಂಘದ ರಚನೆಗೆ ಕನಿಷ್ಠ 100 ಸದಸ್ಯರಿರಬೇಕು ಮತ್ತು ಪ್ರತಿಯೊಬ್ಬರಿಗೂ ಆಧಾರ್ ಆಧಾರಿತ ನೋಂದಣಿ ಕಡ್ಡಾಯವಾಗಿದೆ. ನೋಂದಣಿ ಶುಲ್ಕ ಪ್ರತಿ ಸದಸ್ಯನಿಗೆ ರೂ.10/- ಆಗಿರುತ್ತದೆ.
ಸಮಿತಿ ರಚನೆ ಮತ್ತು ಮೀಸಲಾತಿ:
ಪ್ರತಿ ಸಂಘವು 15 ಸದಸ್ಯರ ಆಂತರಿಕ ಕಾರ್ಯಕಾರಿ ಸಮಿತಿಯನ್ನು ಹೊಂದಿರಲಿದ್ದು, ಅದರಲ್ಲಿ ಅಧ್ಯಕ್ಷರು ಅಥವಾ ಉಪಾಧ್ಯಕ್ಷರಲ್ಲಿ ಒಬ್ಬರು ಕಡ್ಡಾಯವಾಗಿ ಮಹಿಳೆಯಾಗಿರಬೇಕು. ಸಮಿತಿಯಲ್ಲಿ SC/ST (3 ಸದಸ್ಯರು), OBC + ಅಲ್ಪಸಂಖ್ಯಾತರು (4 ಸದಸ್ಯರು) ಮತ್ತು ಸಾಮಾನ್ಯ ವರ್ಗಕ್ಕೆ (8 ಸದಸ್ಯರು) ಕಡ್ಡಾಯ ಮೀಸಲಾತಿ ಇರಲಿದೆ. ಸಮಿತಿಯ ಅವಧಿ 2 ವರ್ಷಗಳು.
ತರಬೇತುದಾರರಿಗೆ ಗೌರವಧನ:
ಪ್ರತಿಯೊಂದು ಸಂಘಕ್ಕೆ ಒಬ್ಬ ತರಬೇತುದಾರರನ್ನು ನೇಮಿಸಲಾಗುತ್ತಿದ್ದು, ಅವರಿಗೆ ವಾರ್ಷಿಕ ರೂ.24,000/- ಗೌರವಧನವನ್ನು ನೀಡಲಾಗುತ್ತದೆ.
ಸಂಘಗಳ ಪ್ರಮುಖ ಚಟುವಟಿಕೆಗಳು:
ಯುವ ಸಂಘಗಳು ವಾರ್ಷಿಕ ಚಟುವಟಿಕೆಗಳ ಕ್ಯಾಲೆಂಡರ್ ಸಿದ್ಧಪಡಿಸಿ, ಕ್ರೀಡೆ ಮತ್ತು ಫಿಟ್‍ನೆಸ್, ಗ್ರಾಮೀಣ ಕ್ರೀಡಾಕೂಟಗಳು, ಯೋಗ ಶಿಬಿರಗಳು ಮತ್ತು ಸಾಂಪ್ರದಾಯಿಕ ಆಟಗಳ ಆಯೋಜನೆ.
ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ, ಕೆರೆಗಳ ಸ್ವಚ್ಛತೆ, ಸಸಿ ನೆಡುವುದು ಹಾಗೂ ಪ್ಲಾಸ್ಟಿಕ್ ಮುಕ್ತ ಜಾಗೃತಿ.
ಸಾಮಾಜಿಕ ಸಾಮರಸ್ಯ ಮತ್ತು ಸಂಸ್ಕೃತಿ, ಸಂವಿಧಾನದ ಮೌಲ್ಯಗಳ ಜಾಗೃತಿ, ಮಾದಕವಸ್ತು ವಿರೋಧಿ ಅಭಿಯಾನ, ಬಾಲ್ಯ ವಿವಾಹ ತಡೆಗಟ್ಟುವಿಕೆ ಮತ್ತು ರಾಷ್ಟ್ರೀಯ ಹಬ್ಬಗಳ ಕಡ್ಡಾಯ ಆಚರಣೆ, ಕೌಶಲ್ಯಾಭಿವೃದ್ಧಿ, ಡಿಜಿಟಲ್ ಸಾಕ್ಷರತೆ, ಉದ್ಯಮಶೀಲತೆ ಮತ್ತು ವೃತ್ತಿ ಮಾರ್ಗದರ್ಶನ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲಿದೆ.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉಸ್ತುವಾರಿ:
ಈ ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ “ರಾಜ್ಯ ಮಟ್ಟದ ಉಸ್ತುವಾರಿ ಸಮಿತಿ”ಯನ್ನು ರಚಿಸಲಾಗಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರು ಇದರ ಉಪಾಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಗಳು ಕಾರ್ಯನಿರ್ವಹಿಸಲಿವೆ.
ಯೋಜನೆಯ ನೋಂದಣಿ ಪ್ರಕ್ರಿಯೆ ಹಾಗೂ ಮೊಬೈಲ್ ಆ್ಯಪ್/ಪೋರ್ಟಲ್ (BJYS Portal) ಚಾಲನೆಗೆ ಜುಲೈ 31, 2026 ರ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯು ಕರ್ನಾಟಕದ ತಳಮಟ್ಟದ ಆಡಳಿತದಲ್ಲಿ ಯುವಕರ ನೇರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ, ಒಂದು ಬಲಿಷ್ಠ ಸಮುದಾಯ ನಿರ್ಮಿಸಲು ಮುನ್ನುಡಿ ಬರೆಯಲಿದೆ.
