ಬೆಂಗಳೂರು : ಸಾರ್ವಜನಿಕರ ತುರ್ತು ಪರಿಸ್ಥಿತಿ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯವನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯದ 30 ಜಿಲ್ಲೆಗಳ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ (Karnatka State Fire and Emergency Services Department)ವತಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಣಕು ತುರ್ತು ಪರಿಸ್ಥಿತಿ ಅಭ್ಯಾಸ (Mock Drill)ವನ್ನು ಬುಧವಾರ(ಜು.2) ಯಶಸ್ವಿಯಾಗಿ ನಡೆಸಲಾಯಿತು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಈ ಅಭ್ಯಾಸದಲ್ಲಿ ಸಕ್ರಿಯವಾಗಿ ಭಾಗವಹಿಸಿ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದರು.
ಈ ಅಣಕು ತುರ್ತು ಪರಿಸ್ಥಿತಿ ಅಭ್ಯಾಸವು ತುರ್ತು ಸಂದರ್ಭಗಳಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ಅಭ್ಯಾಸ ಮಾಡಲು, ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ವಾಸಿಸುವ ಕಟ್ಟಡಗಳಿಂದ ಸುರಕ್ಷಿತವಾಗಿ ನಿರ್ಗಮಿಸುವ ಮತ್ತು ಪ್ರಾಥಮಿಕ ಹಂತದಲ್ಲಿ ಅಗ್ನಿ ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಅರಿವು ಮೂಡಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸುವ ಸಲುವಾಗಿ ಆಯೋಜಿಸಲಾಗಿದ್ದು, ಈ ಆಭ್ಯಾಸದಿಂದ ತುರ್ತು ಸೇವಾ ಇಲಾಖೆಗಳ ನಡುವೆ ಸಮನ್ವಯವನ್ನು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಪರಿಣಾಮಕಾರಿ ಸಂವಹನವನ್ನು ಮಾಡಲು ಅನುವು ಮಾಡಿಕೊಡುತ್ತದೆ.
ಈ ಅಣುಕು ತುರ್ತು ಪರಿಸ್ಥಿತಿ ಪ್ರಾಥಮಿಕ ಉದ್ದೇಶ ತುರ್ತು ಪ್ರತಿಕ್ರಿಯೆ ಪ್ರೋಟೋಕಾಲ್ ಗಳ ಬಗ್ಗೆ ಜಾಗೃತಿ ಮೂಡಿಸುವುದು,; ಅಸ್ತಿತ್ವದಲ್ಲಿರುವ ಸುರಕ್ಷತಾ ಕ್ರಮಗಳ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವುದು ಸುಧಾರಣೆಗೆ ಅಗತ್ಯವಿರುವ ಕ್ಷೇತ್ರಗಳನ್ನು ಗುರುತಿಸುವುದು ಮತ್ತು ಸಾರ್ವಜನಿಕರನ್ನು ಎಲ್ಲಾ ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಲು ಸಿದ್ದರಾಗಿರುವಂತೆ ಅಣಿಗೊಳಿಸುವುದಾಗಿರುತ್ತದೆ.
ಈ ಅಣಕು ತುರ್ತು ಪರಿಸ್ಥಿತಿ ಅಭ್ಯಾಸವನ್ನು ರಾಜ್ಯದ 30 ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗಿದ್ದು ಒಟ್ಟು 17,154 ಸಾರ್ವಜನಿಕರು ಭಾಗವಹಿಸಿ ಉತ್ತಮ ಸಹಕಾರ ನೀಡಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆಯ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

