ಮಲ್ಲೇಶ್ವರಂನಲ್ಲಿ 10ನೇ ವರ್ಷದ ರೈತ ಸ್ನೇಹಿ ಕಡಲೆಕಾಯಿ ಪರಿಷೆ: ಉಡುಪಿಯ ವನಜ ಪಿ. ಪೂರ್ಣಾರ್ತಿ ಬಿಟ್ಪಾಡಿಗೆ ವಾರ್ಷಿಕ ಪ್ರಶಸ್ತಿ

ಪ್ರತಿದಿನ 2 ಲಕ್ಷಕ್ಕೂ ಅಧಿಕ ಜನರ ನಿರೀಕ್ಷೆ – 500 ಸ್ವಯಂಸೇವಕರಿಂದ ಭದ್ರತೆ, ಮಹಿಳೆಯರ ಸುರಕ್ಷತೆಗೆ 100 ಸಿಸಿಟಿವಿ ಕ್ಯಾಮರ ಅಳವಡಿಕೆ

ಬೆಂಗಳೂರು: ನೆಲ, ಜಲ, ಹಸಿರು, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಬೆಂಗಳೂರಿನ ಮಲ್ಲೇಶ್ವರಂನ ಐತಿಹಾಸಿಕ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ(Sree Kaadumallikarjuna Swamy) ದೇವಾಲಯದ ಆವರಣದಲ್ಲಿ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಸಹಯೋಗದಲ್ಲಿ 10ನೇ ರೈತ ಸ್ನೇಹಿ ಕಡಲೆಕಾಯಿ ಪರಿಷೆಯನ್ನು(Groundnut Fair) ನವೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ.

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ, ಕಡಲೆಕಾಯಿ ಪರಿಷೆ ಇದೀಗ 10ನೇ ವರ್ಷದ ಸಂಭ್ರಮಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷ ಗಣ್ಯ ವ್ಯಕ್ತಿಯೊಬ್ಬರಿಗೆ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಅನಾಥ ಶವಗಳನ್ನು ಅಂತ್ಯ ಸಂಸ್ಕಾರ ಮಾಡಿ ಮಾನವೀಯ ಕಾರ್ಯದಲ್ಲಿ ತೊಡಗುತ್ತಿರುವ ಉಡುಪಿಯ ವನಜ ಪಿ. ಪೂರ್ಣಾರ್ತಿ ಬಿಟ್ಪಾಡಿ ಅವರಿಗೆ ಬಾರಿ ಕಡಲೆಕಾಯಿ ಪರಿಷೆಯಲ್ಲಿ “ಹುಣ್ಣಿಮೆ ಹಾಡು 2026 ರ ರಾಜ್ಯೋತ್ಸವ ವಾರ್ಷಿಕ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ. ದಶಕಗಳ ಕಾಲದಿಂದ ಅನಾಥ ಶವಗಳಿಗೆ ಮುಕ್ತಿ ದೊರಕಿಸುತ್ತಿರುವ ವನಜಕ್ಕ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು.

ಬರ ಪರಿಸ್ಥಿತಿ ನಡುವೆಯೂ ರೈತರ ಬದುಕಿಗೆ ಉತ್ತೇಜನ ನೀಡುವುದು, ರೈತರು ಬೆಳೆದ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಒದಗಿಸುವುದು ಈ ಬಾರಿಯ ವಿಶೇಷತೆಯಾಗಿದೆ. ಕರ್ನಾಟಕದಲ್ಲಿ ಅಭಾವ ಪರಿಸ್ಥಿತಿಯಿಂದಾಗಿ ಕಡಲೆಕಾಯಿ ಇಳುವರಿ ಕುಂಠಿತಗೊಂಡಿದ್ದು, ಆಂ‍ಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದ ಹೆಚ್ಚಿನ ಪ್ರಮಾಣದಲ್ಲಿ ರೈತರು ಕಡಲೆಕಾಯಿ ತರುತ್ತಿದ್ದಾರೆ. ಈ ಬಾರಿಯ ಪರಿಷೆಯ ಪ್ರಮುಖ ವಿಶೇಷವೆಂದರೆ ಸುಮಾರು 600 ಮಳಿಗೆಗಳನ್ನು ರೈತರು ಹಾಗೂ ವ್ಯಾಪಾರಿಗಳಿಗೆ ಉಚಿತವಾಗಿ ಒದಗಿಸಲಾಗುತ್ತಿದೆ. ರೈತರು ಬೆಳೆದ ಕಡಲೆಕಾಯಿಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಉತ್ತಮ ವೇದಿಕೆ ಕಲ್ಪಿಸಲಾಗಿದೆ. ರೈತರ ಶ್ರಮಕ್ಕೆ ಗೌರವ ನೀಡುವ ಹಾಗೂ ಮಧ್ಯವರ್ತಿಗಳ ಹಾವಳಿಯಿಲ್ಲದೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಈ ಉಚಿತ ಮಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಮೂರು ದಿನಗಳ ಕಾಲ ನಡೆಯುವ ಈ ಪರಿಷೆಗೆ ಪ್ರತಿದಿನ 2 ಲಕ್ಷಕ್ಕೂ ಅಧಿಕ ಭಕ್ತರು, ಸಾರ್ವಜನಿಕರು ಹಾಗೂ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ಪರಿಷೆಗೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಸರತಿ ಸಾಲಿನ ಮೂಲಕ ದೇವರ ದರ್ಶನಕ್ಕೆ ಅವಕಾಶ, ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರು, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಜನಸಂದಣಿಯನ್ನು ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಿ.ಕೆ. ಶಿವರಾಂ ತಿಳಿಸಿದರು.

ಲಕ್ಷಾಂತರ ಜನರು ಸೇರುವ ಬೃಹತ್ ಪರಿಷೆಯಲ್ಲಿ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನೂರಕ್ಕೂ ಅಧಿಕ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ. 500 ಸ್ವಯಂಸೇವಕರನ್ನು ವಿವಿಧ ಸ್ಥಳಗಳಲ್ಲಿ ನಿಯೋಜಿಸಿ ಜನಸಂದಣಿ ನಿಯಂತ್ರಣ, ಭಕ್ತರಿಗೆ ಮಾರ್ಗದರ್ಶನ ಹಾಗೂ ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡಲು ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗಿದ್ದು, ಮಹಿಳೆಯರು ಯಾವುದೇ ಆತಂಕವಿಲ್ಲದೆ ಪರಿಷೆಯಲ್ಲಿ ಭಾಗವಹಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರ ಸುರಕ್ಷತೆ, ಕಳ್ಳತನ ತಡೆ, ಮಹಿಳೆಯರ ರಕ್ಷಣೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಸ್ವಯಂಸೇವಕರು ಸಾರ್ವಜನಿಕರ ನೆರವಿಗೆ ಸಿದ್ಧರಿರಲಿದ್ದಾರೆ ಎಂದರು.

ಪ್ಲಾಸ್ಟಿಕ್ ಮುಕ್ತ ಪರಿಸರ ಸ್ನೇಹಿ ಪರಿಷೆ

ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಬಾರಿಯ ಕಡಲೆಕಾಯಿ ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಸೇವಾ ಸಂಘಟನೆಗಳ ಸಹಯೋಗದಲ್ಲಿ ಮಳಿಗೆದಾರರು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಬಟ್ಟೆ ಚೀಲ ಮತ್ತು ಕಾಗದದ ಚೀಲಗಳನ್ನು ವಿತರಿಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್‌ ಚೀಲ ಕಂಡು ಬಂದಲ್ಲಿ ಅದನ್ನು ವಶಕ್ಕೆ ಪಡೆದು ಪೇಪರ್‌ ಚೀಲಗಳನ್ನು ವಿತರಿಸಲಾಗುವುದು. ಈ ಬಾರಿ ದೇವಾಲಯದ ಆವೃಣದಲ್ಲಿ ಬೆಳೆದ ಬಿದರು ಬಳಸಿ ಮಕ್ಕಳು ತಯಾರಿಸಿದ ಉಡುಗೊರೆಗಳನ್ನು ಗಣ್ಯರಿಗೆ ವಿತರಿಸಲಾಗುತ್ತಿದ್ದು, ಬಿದರಿನಿಂದ ಕಾರ್ಯಕ್ರಮದ ವಿಶೇಷ ವೇದಿಕೆಯನ್ನೂ ಸಹ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ನವೆಂಬರ್ 28ರಂದು ಉದ್ಘಾಟನೆ – 30ರಂದು ಬೃಹತ್ ರಥೋತ್ಸವ

ನವೆಂಬರ್ 28ರಂದು ಸಚಿವರು ಹಾಗೂ ಗಣ್ಯರು ಪರಿಷೆಯನ್ನು ಉದ್ಘಾಟಿಸಲಿದ್ದು, ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನವೆಂಬರ್ 30ರಂದು ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿಯ ಬೃಹತ್ ರಥೋತ್ಸವ ನಡೆಯಲಿದ್ದು, ನೂರಾರು ಕಲಾತಂಡಗಳು ಹಾಗೂ ಭಕ್ತರ ಸಮ್ಮುಖದಲ್ಲಿ ರಾಜಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ಸಾಗಲಿದೆ. ಪರಿಷೆಯ ಬೆನ್ನಲ್ಲೇ ಅನ್ನದಾಸೋಹ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ದೇವಸ್ಥಾನದ 48 ಕೋಟಿ ರೂ ಮೌಲ್ಯದ ದೇವಸ್ಥಾನಕ್ಕೆ ಸೇರಿದ ಭೂಮಿಯನ್ನು ಕಬಳಿಸುವ ಸಂಚು ವಿಫಲಗೊಳಿಸಿದ್ದು, ಇದರಿಂದ ದೇವಸ್ಥಾನಕ್ಕೆ 4.5 ಲಕ್ಷ ರೂ ಬಾಡಿಗೆ ದೊರೆಯುತ್ತಿದೆ. ಜಾತಿಬೇಧವಿಲ್ಲದೇ ಎಲ್ಲರೂ ದೇವಾಲಯದ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರೆ ಎಂದರು.

ಕಾಡುಮಲ್ಲೇಶ್ವರ ಗೆಳೆಯರ ಬಳಗದ ಸಂಚಾಲಕರಾದ ಅನೂಪ್ ಅಯ್ಯಂಗಾರ್ ಮಾತನಾಡಿ, “ರೈತರನ್ನು ಪ್ರೋತ್ಸಾಹಿಸುವುದು, ಪರಿಸರವನ್ನು ಉಳಿಸುವುದು ಮತ್ತು ನಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಆಶಯವಾಗಿದೆ. ಪ್ಲಾಸ್ಟಿಕ್ ಮುಕ್ತ ಪರಿಷೆ ನಡೆಸಲು ಎಲ್ಲರೂ ಸಹಕರಿಸಬೇಕು. ಸ್ವಚ್ಛ ಸುಂದರ ಬೆಂಗಳೂರು ನಿರ್ಮಾಣಕ್ಕೆ ಕಾಡುಮಲ್ಲೇಶ್ವರ ಕಡಲೆಕಾಯಿ ಪರಿಷೆ ಮಹತ್ವದ ಪಾತ್ರ ವಹಿಸುತ್ತಿದೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಡುಮಲ್ಲೇಶ್ವರ ಬಳಗದ ಮುಖಂಡರಾದ ಚಂದ್ರಶೇಖರ್ ನಾಯ್ಡು, ಡಾ. ಲೀಲಾ ಸಂಪಿಗೆ, ಎನ್. ಶ್ರೀನಿವಾಸ್, ಪಿ.ಜಿ. ಮನು, ದೇವಾಲಯದ ಅರ್ಚಕರಾದ ಗಂಗಾಧರ್ ದೀಕ್ಷಿತ್, ಶಶಿಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸ್ಥಳ: ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಮಲ್ಲೇಶ್ವರಂ, ಬೆಂಗಳೂರು.
ದಿನಾಂಕ: ನವೆಂಬರ್ 28, 29 ಮತ್ತು 30.
ಆಯೋಜಕರು: ಕಾಡುಮಲ್ಲೇಶ್ವರ ಗೆಳೆಯರ ಬಳಗ.

 

Hot this week

ಅಂಕಣಕಾರ್ತಿ, ಲೇಖಕಿ ಮಾಧುರಿ ದೇಶಪಾಂಡೆ ಅವರಿಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ(Sree Krishna Raja)...

ಶಿಕ್ಷಣ ತಜ್ಞೆ ಪದ್ಮಾವತಿ ಕೆ.ವಿ. ಅವರಿಗೆ ‘ಟೀಚರ್ಸ್ ಟ್ರೋವ್–2026’ ಪ್ರಶಸ್ತಿ

ಬೆಂಗಳೂರು: ಕಾಡುಗೋಡಿಯ ಜನನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪದ್ಮಾವತಿ...

ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಕ್ರಿಕೆಟ್ ದಾಖಲೆಗಳೇ ಪುಡಿಪುಡಿ: ಕೇವಲ 28 ಎಸೆತಗಳಲ್ಲಿ ಶತಕ, 53 ಎಸೆತಗಳಲ್ಲಿ 204 ರನ್!

ದೋಹಾ: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ(Vaibhav Suryavamsi) ಮತ್ತೊಮ್ಮೆ...

ಬೆಂಗಳೂರಿನಲ್ಲಿ ದಿಲ್ಜಿತ್ ದೋಸಾಂಜ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ

ಬೆಂಗಳೂರು: ಪಂಜಾಬಿ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh's) ಅವರ...

Topics

ಅಂಕಣಕಾರ್ತಿ, ಲೇಖಕಿ ಮಾಧುರಿ ದೇಶಪಾಂಡೆ ಅವರಿಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ(Sree Krishna Raja)...

ಶಿಕ್ಷಣ ತಜ್ಞೆ ಪದ್ಮಾವತಿ ಕೆ.ವಿ. ಅವರಿಗೆ ‘ಟೀಚರ್ಸ್ ಟ್ರೋವ್–2026’ ಪ್ರಶಸ್ತಿ

ಬೆಂಗಳೂರು: ಕಾಡುಗೋಡಿಯ ಜನನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪದ್ಮಾವತಿ...

ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಕ್ರಿಕೆಟ್ ದಾಖಲೆಗಳೇ ಪುಡಿಪುಡಿ: ಕೇವಲ 28 ಎಸೆತಗಳಲ್ಲಿ ಶತಕ, 53 ಎಸೆತಗಳಲ್ಲಿ 204 ರನ್!

ದೋಹಾ: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ(Vaibhav Suryavamsi) ಮತ್ತೊಮ್ಮೆ...

ಬೆಂಗಳೂರಿನಲ್ಲಿ ದಿಲ್ಜಿತ್ ದೋಸಾಂಜ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ

ಬೆಂಗಳೂರು: ಪಂಜಾಬಿ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh's) ಅವರ...

ಪಶ್ಚಿಮ ಬಂಗಾಳದ ಹೆಸರು ಬದಲಾವಣೆಗೆ ಸಿದ್ಧತೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯದ ಹೆಸರನ್ನು ಬದಲಾಯಿಸುವ ಕುರಿತು ಮಹತ್ವದ ರಾಜಕೀಯ...

Related Articles