ಬೆಂಗಳೂರು: ಸಮಾಜದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ವ್ಯಸನದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (KSLSA) ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಬಿನ್ನ ಸರ್ಕಾರಿ ಸಂಸ್ಥೆಗಳ (NGOs) ಸಹಯೋಗದೊಂದಿಗೆ ನವೆಂಬರ್ 14 ರಂದು ರಾಜ್ಯ ಮಟ್ಟದ ಬೃಹತ್ “ಮಾದಕ ದ್ರವ್ಯ ವಿರೋಧಿ ಜಾಗೃತಿ ಮ್ಯಾರಥಾನ್”(“Anti-Drug Awareness Marathon”) ಆಯೋಜಿಸಿದೆ.
ಅಂದು ಬೆಳಿಗ್ಗೆ 8:00 ಗಂಟೆಗೆ ಉಚ್ಚ ನ್ಯಾಯಾಲಯದ ಕೇಂದ್ರ ಪೋರ್ಟಿಕೋ (Central Portico) ಸಮೀಪ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷರಾದ ಮಾನ್ಯ ಶ್ರೀಮತಿ ನ್ಯಾಯಮೂರ್ತಿ ಅನು ಸಿವರಾಮನ್ ಅವರು ಮ್ಯಾರಥಾನ್ ಗೆ ಚಾಲನೆ ನೀಡಲಿದ್ದಾರೆ.
ಈ ಬೃಹತ್ ಮ್ಯಾರಥಾನ್ ಉಚ್ಚ ನ್ಯಾಯಾಲಯದ ಕೇಂದ್ರ ಪೋರ್ಟಿಕೋ ದಿಂದ ಆರಂಭವಾಗಿ, ಕೆ.ಆರ್. ಸರ್ಕಲ್ ಮಾರ್ಗವಾಗಿ ಹೊರಟು, ಮೈಸೂರ್ ಬ್ಯಾಂಕ್ ಸರ್ಕಲ್, ಕೆ.ಜಿ. ರಸ್ತೆ, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್ ಮಾರ್ಗವಾಗಿ ಫ್ರೀಡಂ ಪಾರ್ಕ್ಗೆ ಬಂದು ತಲುಪಲಿದೆ.
ಈ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಸುಮಾರು 1,000ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿ ಜಾಗೃತಿ ಮೂಡಿಸಲಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಈ ರಾಜ್ಯ ಮಟ್ಟದ ಕಾರ್ಯಕ್ರಮದ ಜೊತೆಗೆ, ಅದೇ ದಿನದಂದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ಸಹ ಈ ಜಾಗೃತಿ ಮ್ಯಾರಥಾನ್ ಏಕಕಾಲಕ್ಕೆ ನಡೆಯಲಿದೆ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್. ಶಶಿಧರ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

