ಬೆಂಗಳೂರು: ಕರ್ನಾಟಕದಲ್ಲಿ ಪೊಲೀಸ್ ಸ್ಟೇಷನ್ ಗಳೆಲ್ಲಾ ಕಾಂಗ್ರೆಸ್ ಸ್ಟೇಷನ್(Congress Station) ಆಗಿದೆ ಎಂದು ಮಾನ್ಯ ರಾಜ್ಯಪಾಲರ ಗಮನಕ್ಕೆ ತಂದಿರುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್(R.Ashok) ಅವರು ತಿಳಿಸಿದ್ದಾರೆ.
ಇಂದು ಗೌರವಾನ್ವಿತ ರಾಜ್ಯಪಾಲರ ಭೇಟಿಯ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಗೌರವಾನ್ವಿತ ರಾಜ್ಯಪಾಲರನ್ನು ನಾನು, ಕುಮಾರಸ್ವಾಮಿ, ಅರಗ ಜ್ಞಾನೇಂದ್ರ, ಪಿ.ಸಿ.ಮೋಹನ್, ಸಿ.ಟಿ. ರವಿ, ಭೋಜೇಗೌಡ, ಮುನಿರಾಜು, ಮತ್ತು ಛಲವಾದಿ ನಾರಾಯಣಸ್ವಾಮಿ ಮತ್ತಿತರ ಪ್ರಮುಖರು ಭೇಟಿ ಮಾಡಿದ್ದೇವೆ ಎಂದು ವಿವರಿಸಿದರು.
ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಮೇಲೆ ಸುಮ್ಮನೆ ಕೇಸುಗಳನ್ನು ಹಾಕಿ ತಿರುಕುಳ ಕೊಡುತ್ತಿದ್ದಾರೆ ಎಂದು ಗಮನ ಸೆಳೆದರು. ನಿನ್ನೆ ಕೂಡ ಚುನಾವಣಾ ಆಯೋಗಕ್ಕೆ ಭೇಟಿ ಮಾಡಿ ಫಾರ್ಮ್ ಸೆವೆನ್ ಬಗ್ಗೆ ಸ್ಪಷ್ಟನೆ ಕೇಳಿದ್ದೇವೆ. ಫಾರ್ಮ್ ಸೆವೆನ್ ನ ಯಾರು ಬೇಕಾದರೂ ಕೊಡಬಹುದು; ಎಷ್ಟು ಬೇಕಾದರೂ ಕೊಡಬಹುದು ಎಂದಿದ್ದು, ಇದು ಕಾನೂನು. ಪೊಲೀಸರಿಗೆ ನೀವೇನಾದರೂ ಕೇಸ್ ಹಾಕಲು ಕೇಳಿದ್ದೀರಾ ಅಂತ ಕೇಳಿದರೆ, ನಾವು ಯಾರಿಗೂ ಹೇಳಿಲ್ಲ ಎಂದಿದ್ದಾಗಿ ತಿಳಿಸಿದರು.
ನಮ್ಮ ಜಯನಗರ ಶಾಸಕರ ಮೇಲೆಯೂ ದೂರು ನೀಡಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲ ಕಡೆನೂ ಟಾರ್ಗೆಟ್ ಮಾಡಿಕೊಂಡು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕ್ರಿಮಿನಲ್ ಕೇಸುಗಳನ್ನು ಹಾಕುತ್ತಿದ್ದಾರೆ. ಇದು ಕಾಂಗ್ರೆಸ್ಸಿನ ಗುಂಡಾಗಿರಿ ಸಂಸ್ಕøತಿಯನ್ನ ತೋರಿಸುತ್ತದೆ ಎಂದು ಟೀಕಿಸಿದರು.
ಬಿಜೆಪಿ ಕಾರ್ಯಕರ್ತರನ್ನು ಗುರಿ ಮಾಡುವ ಈ ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕು; ಕಾನೂನನ್ನು ಕೈಗೆ ತೆಗೆದುಕೊಂಡು ಸಾಮೂಹಿಕವಾಗಿ ದೂರು ಪಡೆದು ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಆದ್ದರಿಂದ ಈ ಸರ್ಕಾರ ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ಮತ್ತು ಎನ್ ಡಿ ಎ ಶಕ್ತಿಶಾಲಿ ಆಗುವುದನ್ನು ಇವರಿಗೆ ಸಹಿಸಲು ಆಗುತ್ತಿಲ್ಲ. ಆದ್ದರಿಂದ ನಮ್ಮ ಕಾರ್ಯಕರ್ತರಿಗೆ ಕಿರುಕುಳ ಕೊಡುತ್ತಿದ್ದಾರೆ. ಈ ಎಲ್ಲಾ ದೃಷ್ಟಿಯಲ್ಲಿ ಇಟ್ಟುಕೊಂಡು ಮಾನ್ಯ ಗವರ್ನರ್ ಅವರನ್ನ ಭೇಟಿ ಮಾಡಿದ್ದೇವೆ ಎಂದು ವಿವರಿಸಿದರು.

