ದೇವಸ್ಥಾನ, ವಿಭೂತಿ, ನಾಮದಲ್ಲೇ ನೂರು ದಿನ: ಆರ್. ಅಶೋಕ್ ವ್ಯಂಗ್ಯ

ರಿಯಲ್ ಎಸ್ಟೇಟ್ ಏಜೆಂಟ್ ಸಿಎಂ ಡಿಕೆಶಿ, ಯೂ ಟರ್ನ್ ಸರ್ಕಾರ

ಬೆಂಗಳೂರು: ಆಧುನಿಕ ಮುಖ್ಯಮಂತ್ರಿಗಳಾಗಿ ರಾಜ್ಯದ ಜನರ ಕಣ್ಣಿಗೆ ಕಾಣುತ್ತಿರುವ ಡಿ.ಕೆ.ಶಿವಕುಮಾರ್(D. K. Shivakumar) ಅವರು ರಿಯಲ್ ಎಸ್ಟೇಟ್ ಏಜೆಂಟ್ ಸಿ ಎಂ. ದೇವಸ್ಥಾನ, ವಿಭೂತಿ, ನಾಮದಲ್ಲೇ ನೂರು ದಿನ ಮುಗಿದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R. Ashok)ಅವರು ವ್ಯಂಗ್ಯವಾಡಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳಪೆಯ ನೂರು ದಿನ ಪೂರೈಸಿದೆ. ಆದರೆ ಜನರಿಗೆ ಸಿಕ್ಕಿದ್ದು ಕೇವಲ ಮೂರು ದಿನ. ಇದೊಂದು ಯುಟರ್ನ್ ಸರ್ಕಾರ. ನೂರು ದಿನವಾಗಿರುವುದು ರಾಜ್ಯದ ಪಾಲಿಗೆ ಕರಾಳ ದಿನ ಎಂದು ಟೀಕಿಸಿದರು. ಇಡೀ ಸರ್ಕಾರದ ನೂರು ದಿನದ ಗೊಂದಲ ಗೂಡು ನಿವಾರಣೆಗೆ ಡಿಕೆಶಿ ಸತತ ದೆಹಲಿ ಯಾತ್ರೆ ಮಾಡಿದರು. ಜಾಹೀರಾತು, ಮಾಧ್ಯಮಗೋಷ್ಠಿಯಲ್ಲೇ ತೊಡಗಿದ್ದರು ಎಂದು ಹೇಳಿದರು.
ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿರುವ ಮುಖ್ಯಮಂತ್ರಿಗಳು ಲಾಲ್‍ಬಾಗ್ ನುಂಗಲು, ಸ್ಯಾಂಕಿ ಟ್ಯಾಂಕ್ ನುಂಗಲು ಹಾಗೂ ಹೆಬ್ಬಾಳ ಕೆರೆ ಜಾಗ ನುಂಗಲು ಮುಂದಾಗಿದ್ದರು. ಬಿಡದಿ ಟೌನ್‍ಶಿಪ್‍ನಲ್ಲಿ ಒಂಬತ್ತು ಸಾವಿರ ಎಕರೆ, ಆನೇಕಲ್ ನಲ್ಲಿ ಕೆಐಎಡಿಬಿ ಹೆಸರಲ್ಲಿ ಮೂರು ಸಾವಿರ ಎಕರೆ ನುಂಗಲು ಮುಂದಾದರು. ಇವೇ ಇವರ ಸಾಧನೆಗಳು ಎಂದರು.

ರೈತರು ಸತ್ತರೆ ಕ್ಯಾರೇ ಅನ್ನಲ್ಲ….

ರಾಜ್ಯದಲ್ಲಿ ಭೀಕರ ಬರವಿದೆ. ನಾಲ್ಕು ತಿಂಗಳಲ್ಲಿ ಒಬ್ಬರಿಗೂ ಬರ ಪರಿಹಾರ ನೀಡಲಿಲ್ಲ. ಈವರೆಗೆ ಬರಕ್ಕೆ ಹಣ ಬಿಡುಗಡೆ ಮಾಡಲಿಲ್ಲ. ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ 2500 ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗಲೂ ಮೌನ ವಹಿಸಿದರು. ಗುಂಡಿಗೆ ಜನ ಬಿದ್ದು ಸತ್ತರು. ಒಂದೊಂದು ಗುಂಡಿ ಮುಚ್ಚಲು ಒಂದು ಲಕ್ಷ ತಗೊಂಡಿದ್ದಾರೆ. ಅದರಲ್ಲೂ ಸಾವಿರಾರು ರೂಪಾಯಿ ಹೊಡೆದರು ಎಂದು ಆರೋಪಿಸಿದರು.

ಯೂಟರ್ನ್ ಸರ್ಕಾರ ಇದು…

ಉದ್ಯಾನ ಜಾಗದಲ್ಲಿ ಶೇಕಡಾ ಐದರಷ್ಟು ಜಾಗವನ್ನು ರಿಯಲ್ ಎಸ್ಟೇಟ್‍ಗೆ ನೀಡಲು ಮುಂದಾಗಿದ್ದರು. ಜನ ಒಪ್ಪಲಿಲ್ಲ. ಗಾರ್ಡನ್ ಸಿಟಿ ಎಂದು ಬೆಂಗಳೂರು ಕರೆಸಿಕೊಳ್ಳುತ್ತಿತ್ತು. ಅದಕ್ಕೂ ಕುತ್ತು ತಂದರು. ಎಲ್ಲದಕ್ಕೂ ಯೂಟರ್ನ್ ಹೊಡೆಯುತ್ತೆ ಸರ್ಕಾರ. ಲಾಲ್‍ಬಾಗ್‍ನಲ್ಲಿ ಹದಿನೈದು ಎಕರೆ ಅದಾನಿಗೆ ಕೊಡ್ತೇವೆ ಎಂದರು. ಅದಾನಿಗೆ ಕೆಂಪು ಹಾಸು ಹಾಕಿ ಸ್ವಾಗತಿಸಿದರು. ಈಗ ಲಾಲ್ ಬಾಗ್ ಕೊಡಲ್ಲ ಅಂತ ಯೂಟರ್ನ್ ಹೊಡೆದರು ಎಂದು ವಿವರಿಸಿದರು.
ಡಿ.ಕೆ.ಶಿ ಅವರು ಬಂದ ಮೇಲೆ ಕಾವೇರಿ ವಿಚಾರದಲ್ಲಿ ನಾಲ್ಕು ಬಾರಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಎಲ್ಲಾ ರೀತಿ ಇವರು ವಿಫಲವಾದರು. ಸುಮ್ಮನೆ ಅಭಿವೃದ್ಧಿಗೆ ಸರ್ಕಾರ ಪಣ ತೊಟ್ಟಿದೆ ಎಂದು ಪುಟಗಟ್ಟಲೆ ಜಾಹೀರಾತು ನೀಡ್ತಾರೆ. ಪಿಡಿ ಖಾತೆ ಹಣವನ್ನು ಬರಕ್ಕೆ ಬಳಸಲು ಬರುವುದಿಲ್ಲ ಎಂಬ ಜ್ಞಾನ ಈ ಸರ್ಕಾರಕ್ಕೆ ಇಲ್ಲ. ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಇಲ್ಲ ಎಂದರು.

ಕೇವಲ ಘೋಷಣೆ, ಅನುಷ್ಠಾನವಿಲ್ಲ…

ಗೃಹಲಕ್ಷ್ಮಿ ಹಣದಲ್ಲಿ ಐದು ಸಾವಿರ ಕೋಟಿ ತಿಂದರು. ಅದಕ್ಕೆ ಲೆಕ್ಕ ಇಲ್ಲ. ಆ ಖಾತೆ ಸಚಿವರು ಮನೆಗೆ ಹೋದರು. ಇವರ ಬಳಿ ಹಣ ಇದ್ದಿದ್ದರೆ ಯಾಕೆ ಕೊಡಲಲ್ಲ. ಕದ್ದಿರುವುದೇ ಇವರ ಸಾಧನೆ. ಡಿಕೆಶಿ ಅವರು ಮುಖ್ಯಮಂತ್ರಿಯಾದ ಮೇಲೆ ಕೇವಲ ಘೋಷಣೆಗಳನ್ನೂ ಭರಪೂರ ಮಾಡ್ತಾರೆ. ಬ್ರ್ಯಾಂಡ್ ಬೆಂಗಳೂರು ಎಂದರು. ಆ ಬ್ರ್ಯಾಂಡ್ ಬೆಂಗಳೂರು ಕಸದ ಬುಟ್ಟಿಗೆ ಬಿದ್ದಿದೆ. ಭಾಷಣ ಮಾಡುವಾಗ ಸಾಕ್ಷಿ ಗುಡ್ಡೆ ಹಾಕ್ತಾರೆ. ಈಗ ಕಸದ ಗುಡ್ಡೆ ಎದ್ದು ನಿಂತಿದೆ ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ರೀಲ್ಸ್ ಹಾಕಿದ್ದೇ ಹಾಕಿದ್ದು. ರೀಲ್ ಮಾಸ್ಟರ್ ಅವರು. ಬಿಡಾಡಿ ಕಾರನ್ನು ಚಂದ್ರಲೋಕ ಇಲ್ಲವೇ ಸಿಂಗಪುರಕ್ಕೆ ತಗೆದುಕೊಂಡು ಹೋಗಲಿಲ್ಲ. ಸ್ಟಿಕರ್ ಅಂಟಿಸಿದ್ದಕ್ಕೆ ಸೀಮಿತವಾಯಿತು. ಕಸದಿಂದ ಸ್ವಾತಂತ್ರ್ಯ ಎಂದರು. ಡಿಕೆಶಿ ಅವರ ಮನೆ ಮುಂದೆಯೇ ಕಸದ ರಾಶಿ ಇದೆ. ಬ್ಯಾರಿಕೇಡ್‍ಗಳು ಮುರಿದು ಬಿದ್ದಿವೆ ಎಂದರು.

ಲಯ ತಪ್ಪಿದ ಸರ್ಕಾರ…

ಎಲ್ಲದಕ್ಕೂ ತೆರಿಗೆ ಹಾಕಿದರು. ಕಸಕ್ಕೆ ಅಪಾರ್ಟ್‍ಮೆಂಟ್‍ಗಳಲ್ಲಿ 40 ರೂಪಾಯಿ ತಗೋತಿದ್ರು ಈಗ ಅದು 400 ರೂಪಾಯಿ ಆಗಿದೆ. ನೀರಿಗೆ, ಹಾಲಿಗೆ, ಮದ್ಯಕ್ಕೆ ತೆರಿಗೆ ಹಾಕಿದರು. ಮುದ್ರಾಂಕ ಸುಂಕ ದುಪ್ಪಟ್ಟಾಗಿದೆ. ಇದೊಂದು ಲಯ ತಪ್ಪಿದ ಸರ್ಕಾರ. ಡಿಕೆಶಿ ಅವರು ಬಂದ ಮೇಲೆ ಬೆಂಗಳೂರು ಗುಂಡಿಗಳ ನಗರ ಆಗಿದೆ. ಅದಕ್ಕೆ ಶಾಪ ಹಾಕ್ತಾ ಇದ್ದಾರೆ. ಅದಕ್ಕೆಂದೆ ಜಿಬಿಎ ಚುನಾವಣೆ ಮುಂದಕ್ಕೆ ಹಾಕ್ತ ಇದ್ದಾರೆ ಎಂದು ದೂರಿದರು.

ನಂಬಿಕೆಗೆ ದ್ರೋಹ ಬಗೆದ ಸರ್ಕಾರ…

ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆಯಡಿ ಆರು ಸಾವಿರ ನೀಡುತ್ತಿದ್ದರು. ಬಿಜೆಪಿ ಸರ್ಕಾರ ಅದಕ್ಕೆ ನಾಲ್ಕು ಸಾವಿರ ಸೇರಿಸಿ ಒಟ್ಟು ಹತ್ತು ಸಾವಿರ ಹಾಕ್ತಿದ್ದರು. ಅದನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿಯಿತು. ವಿದ್ಯಾನಿಧಿ ಯೋಜನೆ ಇತ್ತು. ಅದಕ್ಕೂ ಕಲ್ಲು ಹಾಕಿದರು. ಇದು ರೈತ ಪರ ಎಂದು ಹೇಳಿಕೊಳ್ಳಲು ಯೋಗ್ಯತೆ ಇಲ್ಲದ ಸರ್ಕಾರ. ಜನರ ನಂಬಿಕೆಗೆ ದ್ರೋಹ ಬಗೆದ ಸರ್ಕಾರ. ವಿಶ್ವಾಸದ್ರೋಹಿ ಸರ್ಕಾರ. ಸಾಧನೆ ಶೂನ್ಯ ಎಂದರು.
ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಬಿದ್ದಿದ್ದೇ ಸಾಧನೆ. ಎರಡು ಮಂತ್ರಿಗಳ ವಿಕೆಟ್ ಇನ್ನೂ ಬೀಳಲಿದೆ. ಸಚಿವರೊಬ್ಬರು ರಾಜೀನಾಮೆ ನೀಡಿದಾಗ ಸಂತಾಪ ಸಭೆ ಮಾಡುವ ಬದಲು ಸಾಧನಾ ಸಮಾವೇಶ ಮಾಡಿದೆ ಈ ಸರ್ಕಾರ. ಕೆಪಿಎಸ್‍ಸಿ ಹಗರಣ ಕಾಂಗ್ರೆಸ್ ಮತ್ತು ಪ್ರಿಯಾಂಕ್ ಖರ್ಗೆ ಬುಡಕ್ಕೆ ಬಂದಿದೆ. ಎಂಜಿನಿಯರ್ ನೇಮಕಾತಿಯಲ್ಲಿ ಬೋಗಸ್ ಮಾಡಿರುವುದಕ್ಕೆ ಸಾಕ್ಷಿ ಇದೆ. ಸರ್ಕಾರ ಇದರಲ್ಲೂ ಲೂಟಿ ಮಾಡಿದೆ ಎಂದು ಹೇಳಿದರು.

ಹಳೆ ಯೋಜನೆಗೆ ಹೊಸ ಹೆಸರು…

ಬಿಜೆಪಿ ಸರ್ಕಾರದ ಹಳೆ ಯೋಜನೆಗೆ ಇವರು ಹೊಸ ಹೆಸರು ಕೊಟ್ಟು ಜಾರಿ ಮಾಡ್ತಾ ಇದ್ದಾರೆ. ಲಂಬಾಣಿ ಸಮುದಾಯಕ್ಕೆ ಮೋದಿ ಅವರು ಒಂದು ಲಕ್ಷ ಹಕ್ಕು ಪತ್ರ ನೀಡಿದ್ದರು. ನಾನು ಸಚಿವನಾಗಿದ್ದಾಗ ಆಯಾ ಜಿಲ್ಲೆಯಲ್ಲಿ ಹಕ್ಕುಪತ್ರ ನೀಡಿದ್ದೆ. ಇದನ್ನೇ ಇವರು ಭೂಮಿ ಹಕ್ಕು ಅಂತ ಹೇಳಿಕೊಂಡರು. ರೈತರ ಹೊಲ ಊಳಲು ಉಳುಮೆ ಹಕ್ಕು ಜಾರಿ ಮಾಡಿದ್ದೇವೆ ಎಂದು ಹೇಳ್ತಾ ಇದ್ದಾರೆ. ಅದನ್ನೂ ನಾವು ಹಿಂದೆ ಜಾರಿ ಮಾಡಿದ್ದೆವು. ಸಕಾಲವನ್ನು ಇವರು ಪ್ರಜಾಸೇವೆ ಮಾಡಿದ್ದಾರೆ. ಅದಕ್ಕೊಂದು ಇಲಾಖೆ ಏಕೆ ಎಂದು ಪ್ರಶ್ನಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ.ಸಿ.ಎನ್.ಅಶ್ವಥನಾರಾಯಣ್, ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಸಚಿವರು ಮತ್ತು ಶಾಸಕರಾದ ಕೆ. ಗೋಪಾಲಯ್ಯ, ಬಿ.ಎ. ಬಸವರಾಜ, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಉಪಸ್ಥಿತರಿದ್ದರು.

ಹಗರಣಗಳ ಸರಕಾರ: ಛಲವಾದಿ ನಾರಾಯಣಸ್ವಾಮಿ

Hot this week

ಜಾರಕಿಹೋಳಿ ಮೇಲಿನ ಇಡಿ ದಾಳಿ ಖಂಡನೀಯ : ಕೆಹೆಚ್. ಮುನಿಯಪ್ಪ

ಬೆಂಗಳೂರು: ಸತೀಶ್ ಜಾರಕಿಹೋಳಿ(Satish Jaarakiholi) ಅವರ ಮೇಲಿನ ಇಡಿ ದಾಳಿ ಅತ್ಯಂತ...

ಹಗರಣಗಳ ಸರಕಾರ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಒಂದು ಸಿನಿಮಾ ನೂರು ದಿನ ಪೂರೈಸಿದರೆ ಬಾಕ್ಸ್ ಆಫೀಸ್ ಕಲೆಕ್ಷನ್(Box...

ಪರವಾನಗಿ ಇಲ್ಲದ ಬಂದೂಕು ಶಸ್ತ್ರಾಸ್ತ್ರಗಳನ್ನು ನ. 01 ರೊಳಗೆ ಸರ್ಕಾರಕ್ಕೆ ಒಪ್ಪಿಸಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜ್ಯದ ಜನತೆ ಪರವಾನಗಿ ಇಲ್ಲದೆ ತಮ್ಮಲ್ಲಿ ಅಕ್ರಮವಾಗಿಟ್ಟುಕೊಂಡಿರುವ ಬಂದೂಕು ಶಸ್ತ್ರಾಸ್ತ್ರಗಳನ್ನು(Firearms...

ಯಕ್ಷಗಾನ ಪರಂಪರೆಯ ಸಂರಕ್ಷಣೆಗೆ ಡಿಜಿಟಲ್‌ ಆರ್ಕೈವ್ಸ್‌ ಸ್ಥಾಪಿಸಿ: ಬಿಳಿಮಲೆ ಒತ್ತಾಯ

ಕರಾವಳಿ (Karavali) ಕರ್ನಾಟಕದ ಸಾಂಸ್ಕೃತಿಕ (Cultural) ಅಸ್ಮಿತೆಯ ಪತ್ರೀಕವಾಗಿರುವ ಯಕ್ಷಗಾನ (Yakshagana)...

Topics

ಜಾರಕಿಹೋಳಿ ಮೇಲಿನ ಇಡಿ ದಾಳಿ ಖಂಡನೀಯ : ಕೆಹೆಚ್. ಮುನಿಯಪ್ಪ

ಬೆಂಗಳೂರು: ಸತೀಶ್ ಜಾರಕಿಹೋಳಿ(Satish Jaarakiholi) ಅವರ ಮೇಲಿನ ಇಡಿ ದಾಳಿ ಅತ್ಯಂತ...

ಹಗರಣಗಳ ಸರಕಾರ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಒಂದು ಸಿನಿಮಾ ನೂರು ದಿನ ಪೂರೈಸಿದರೆ ಬಾಕ್ಸ್ ಆಫೀಸ್ ಕಲೆಕ್ಷನ್(Box...

ಪರವಾನಗಿ ಇಲ್ಲದ ಬಂದೂಕು ಶಸ್ತ್ರಾಸ್ತ್ರಗಳನ್ನು ನ. 01 ರೊಳಗೆ ಸರ್ಕಾರಕ್ಕೆ ಒಪ್ಪಿಸಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜ್ಯದ ಜನತೆ ಪರವಾನಗಿ ಇಲ್ಲದೆ ತಮ್ಮಲ್ಲಿ ಅಕ್ರಮವಾಗಿಟ್ಟುಕೊಂಡಿರುವ ಬಂದೂಕು ಶಸ್ತ್ರಾಸ್ತ್ರಗಳನ್ನು(Firearms...

ಯಕ್ಷಗಾನ ಪರಂಪರೆಯ ಸಂರಕ್ಷಣೆಗೆ ಡಿಜಿಟಲ್‌ ಆರ್ಕೈವ್ಸ್‌ ಸ್ಥಾಪಿಸಿ: ಬಿಳಿಮಲೆ ಒತ್ತಾಯ

ಕರಾವಳಿ (Karavali) ಕರ್ನಾಟಕದ ಸಾಂಸ್ಕೃತಿಕ (Cultural) ಅಸ್ಮಿತೆಯ ಪತ್ರೀಕವಾಗಿರುವ ಯಕ್ಷಗಾನ (Yakshagana)...

ಹಿರಿಯ ನಾಗರಿಕರು, ವಿಕಲಚೇತನರು, ಅನಿವಾಸಿ ಮತದಾರರ ನೋಟೀಸ್ ವಿಲೇವಾರಿಗೆ ಅವಕಾಶ: ಚುನಾವಣಾ ಆಯೋಗ

ಬೆಂಗಳೂರು: ಹಿರಿಯ ನಾಗರಿಕರು, ವಿಕಲಚೇತನರು (PWD), ಅನಾರೋಗ್ಯ ಪೀಡಿತರು ಹಾಗೂ ಅನಿವಾಸಿ...

ಸೆ.15 ರಂದು ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’

ಬೆಂಗಳೂರು: ಕರ್ನಾಟಕ ಸರ್ಕಾರದ(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬೆಂಗಳೂರಿನ...

Related Articles