ಬ್ರಾಹ್ಮಣರಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಬಿಜೆಪಿ ಮುಖಂಡ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಅಸಮಾಧಾನ
ಕರ್ನಾಟಕ ಕಾಂಗ್ರೆಸ್ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಹಾಗೂ ಮಹಿಳೆಯರಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಬಿಜೆಪಿ ಮುಖಂಡ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಹಾಗೂ ಸಾರ್ವಜನಿಕ ಜೀವನದಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆ ಮಹತ್ವದ್ದಾಗಿದ್ದರೂ, ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ಕಲ್ಪಿಸಬೇಕಾದ ಸರ್ಕಾರ, ಬ್ರಾಹ್ಮಣ ಸಮುದಾಯವನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಅವರು ಆರೋಪಿಸಿದರು. ಮುಂದಿನ ದಿನಗಳಲ್ಲಿ ಈ ತಪ್ಪನ್ನು ಸರ್ಕಾರ ಸರಿಪಡಿಸಿ, ಅರ್ಹ ಬ್ರಾಹ್ಮಣ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿಕಟ ಪೂರ್ವ ನಿರ್ದೇಶಕರಾದ ವಿ.ಪವನ್ ಕುಮಾರ್ ಮಾತನಾಡಿ ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯ ಬಳಿಕ ವಿವಿಧ ಸಮುದಾಯಗಳ ಪ್ರಾತಿನಿಧ್ಯ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಕಾಂಗ್ರೆಸ್ ಸರ್ಕಾರವು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಸಂಪುಟ ರಚನೆ ಮಾಡಿರುವುದಾಗಿ ಹೇಳಿದೆ. ಆದರೆ ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ನೀಡದೆ ಇರುವುದು ಸಮುದಾಯಕ್ಕೆ ಅಸಮಾಧಾನ ತಂದಿದೆ ಇನ್ನು ಉಳಿದ ಮೂರು ಸಚಿವ ಸ್ಥಾನಗಳಿಗೆ ಬ್ರಾಹ್ಮಣ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
