ಬೆಂಗಳೂರು: ದೇಶದ ಹಸಿರು ಇಂಧನ, ನವೀಕರಿಸಬಹುದಾದ ಇಂಧನ ಹಾಗೂ ವಿದ್ಯುತ್ ಚಾಲಿತ ವಾಹನಗಳ (ಇ-ಮೊಬಿಲಿಟಿ) ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುವ ಉದ್ದೇಶದಿಂದ 8ನೇ ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್‌ಪೋ (Energy Expo) ಮತ್ತು ಗ್ರೀನ್ ವೆಹಿಕಲ್ ಎಕ್ಸ್‌ಪೋ (Green Vehicle Expo) ಇದೇ ಜುಲೈ 29ರಿಂದ 31ರವರೆಗೆ ಬೆಂಗಳೂರು ವಸ್ತುಪ್ರದರ್ಶನ ಕೇಂದ್ರ(ಬಿಐಇಸಿ)(BIEC) ದಲ್ಲಿ ನಡೆಯಲಿದೆ.
ಬೆಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಷನ್, ಕರ್ನಾಟಕ ರಿನ್ಯೂವಬಲ್ ಎನರ್ಜಿ ಸೋಲಾರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಹಾಗೂ ಮೀಡಿಯಾ ಡೇ ಮಾರ್ಕೆಟಿಂಗ್ ಸಂಯುಕ್ತವಾಗಿ ಆಯೋಜಿಸುತ್ತಿವೆ. ಬೆಸ್ಕಾಂ ರಾಜ್ಯ ಸಹಭಾಗಿಯಾಗಿ ಕೈಜೋಡಿಸಿದ್ದು, ದೇಶದ ವಿವಿಧ ಭಾಗಗಳಿಂದ ಕೈಗಾರಿಕೆಗಳು, ತಂತ್ರಜ್ಞಾನ ಸಂಸ್ಥೆಗಳು, ಹೂಡಿಕೆದಾರರು, ಸರ್ಕಾರಿ ಇಲಾಖೆಗಳು ಹಾಗೂ ಉದ್ಯಮಿಗಳು ಭಾಗವಹಿಸಲಿದ್ದಾರೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಐಎಎಸ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಶಿವಶಂಕರ ಎನ್., ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ದಿವ್ಯ ಪ್ರಭು ಜಿ.ಆರ್.ಜೆ ಹಾಗೂ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ ಪ್ರಸಾದ್ ಮನೋಹರ್ ವಿ., ಉದ್ಘಾಟಿಸಲಿದ್ದಾರೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿಯ ಅಧ್ಯಕ್ಷರಾದ ಉಮಾ ರೆಡ್ಡಿ, ಪೆರ್ರಿ ಅಧ್ಯಕ್ಷ ರಮೇಶ್ ಶಿವಣ್ಣ, ಕ್ರೇಶ್ಮಾ ಅಧ್ಯಕ್ಷ ಸುರೇಂದ್ರ ಕುಮಾರ್ ಕೆ.ಆರ್., ಕಾರ್ಯದರ್ಶಿ ಎ.ಸಿ. ಈಶ್ವರ್, ಫೆಡರೇಷನ್ ಆಫ್ ಆಲ್ ಇಂಡಿಯಾ ವ್ಯಾಪಾರ ಮಂಡಳಿಯ ಕರ್ನಾಟಕ ರಾಜ್ಯ ನಿರ್ದೇಶಕ ವೆಂಕಟೇಶ್ ಹಾಗೂ ಉದ್ಯಮ ವಲಯದ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ “ಭಾರತದ ಹಸಿರು ಇಂಧನ ಮತ್ತು ಇ-ಸಾಗಾಣೆ ವಲಯದ ಸಾಧ್ಯತೆ: ನೀತಿ, ತಂತ್ರಜ್ಞಾನ, ಹೂಡಿಕೆ ಮತ್ತು ಬದಲಾವಣೆಗಳು” ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ನಡೆಯಲಿದ್ದು, ಹಸಿರು ಇಂಧನ, ನವೀಕರಿಸಬಹುದಾದ ಇಂಧನ ಹಾಗೂ ವಿದ್ಯುತ್ ವಾಹನ ಕ್ಷೇತ್ರದ ಬೆಳವಣಿಗೆ, ತಂತ್ರಜ್ಞಾನ, ಹೂಡಿಕೆ ಅವಕಾಶಗಳು ಮತ್ತು ಭವಿಷ್ಯದ ಸವಾಲುಗಳ ಕುರಿತು ತಜ್ಞರು ಚರ್ಚಿಸಲಿದ್ದಾರೆ.
ಮೂರು ದಿನಗಳ ಈ ಪ್ರದರ್ಶನಕ್ಕೆ ಬೆಳಿಗ್ಗೆ 10.00ರಿಂದ ಸಂಜೆ 5.30ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಹಸಿರು ಇಂಧನ, ಸೌರಶಕ್ತಿ ಹಾಗೂ ಇ-ಮೊಬಿಲಿಟಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

