ಬೆಂಗಳೂರು : ಕಾರ್ಗಿಲ್ ವಿಜಯೋತ್ಸವದ(Kargil Victory Celebration) 27ನೇ ವರ್ಷದ ಸ್ಮರಣಾರ್ಥ ಅಖಿಲ ಕರ್ನಾಟಕ ಮಾಜಿ ಸೈನಿಕರ ಫೌಂಡೇಶನ್ ಹಾಗೂ ಪ್ರಿಯಾಕೃಷ್ಣ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಆಯೋಜಿಸಿದ್ದ “ಕಾರ್ಗಿಲ್ ರನ್–2026”(Kargil Run-2026) (5 ಕಿ.ಮೀ. ಮ್ಯಾರಥಾನ್ ಮತ್ತು ವಾಕ್‌ಥಾನ್) ದೇಶಭಕ್ತಿ, ಶಿಸ್ತು ಹಾಗೂ ರಾಷ್ಟ್ರೀಯ ಏಕತೆಯ ಸಂಕೇತವಾಗಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ತ್ಯಾಗ, ಸಾಹಸ ಮತ್ತು ದೇಶಪ್ರೇಮವನ್ನು ಸ್ಮರಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 1,200ಕ್ಕೂ ಹೆಚ್ಚು ಮಾಜಿ ಸೈನಿಕರು, ಸೇವೆಯಲ್ಲಿರುವ ಸೈನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಗಿಲ್ ಯುದ್ಧದ ಹುತಾತ್ಮ ಯೋಧ ಶಿವಬಸಯ್ಯ ಅವರ ಧರ್ಮಪತ್ನಿ ಶ್ರೀಮತಿ ನಿರ್ಮಲಾ ಕುಲಕರ್ಣಿ ಹಾಗೂ ಕೊಪ್ಪಳದ ಶ್ರೀಮತಿ ಸರೋಜ ಮಲ್ಲಯ್ಯ ಮೇಗಲಮಠ ಅವರು ರಾಷ್ಟ್ರಧ್ವಜ ಪ್ರದರ್ಶಿಸುವ ಮೂಲಕ ಮ್ಯಾರಥಾನ್‌ಗೆ ಚಾಲನೆ ನೀಡಿದರು.
ಮ್ಯಾರಥಾನ್ ವಿಜಯನಗರದ ಬಿಜಿಎಸ್ ಮೈದಾನದಿಂದ ಆರಂಭವಾಗಿ ಗೋವಿಂದರಾಜನಗರ – ಅತ್ತಿಗುಪ್ಪೆ ವೃತ್ತದವರೆಗೆ ಸುಮಾರು 5 ಕಿಲೋಮೀಟರ್ ಸಂಚರಿಸಿ ಪುನಃ ಬಿಜಿಎಸ್ ಮೈದಾನಕ್ಕೆ ತಲುಪಿತು. ಮಾರ್ಗದುದ್ದಕ್ಕೂ ಭಾಗವಹಿಸಿದ್ದವರು ದೇಶಭಕ್ತಿ ಘೋಷಣೆಗಳನ್ನು ಕೂಗಿ ಕಾರ್ಗಿಲ್ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಸದಸ್ಯರಾದ ಪ್ರಿಯಾಕೃಷ್ಣ ಅವರು ಭಾಗವಹಿಸಿ ದೇಶ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವವನ್ನು ಅರ್ಪಿಸಿದ ಯೋಧರ ಸೇವೆಯನ್ನು ಸ್ಮರಿಸಿದರು. ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ದೇಶಭಕ್ತಿ, ಶಿಸ್ತು, ಸೇವಾ ಮನೋಭಾವ ಹಾಗೂ ರಾಷ್ಟ್ರೀಯ ಏಕತೆಯ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಫೌಂಡೇಶನ್ ಅಧ್ಯಕ್ಷ ಶಿವಣ್ಣ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ತ್ಯಾಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ರಾಷ್ಟ್ರಸೇವೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಫೌಂಡೇಶನ್ ಕಾರ್ಯದರ್ಶಿ ಉಮಾಶಂಕರ್, ಉತ್ತಪ್ಪ, ನಾಗರಾಜ್, ಕೃಷ್ಣಕುಮಾರ್, ನಾರಾಯಣ್ ಸೇರಿದಂತೆ ಮಾಜಿ ಸೈನಿಕರು, ಗಣ್ಯರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ ಪದಕ, ಟಿ-ಶರ್ಟ್ ಹಾಗೂ ಇ-ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮವು ರಾಷ್ಟ್ರಗೀತೆ ಹಾಗೂ ಭಾರತ ಮಾತೆಗೆ ಜಯಘೋಷದೊಂದಿಗೆ ದೇಶಭಕ್ತಿಯ ವಾತಾವರಣದಲ್ಲಿ ಯಶಸ್ವಿಯಾಗಿ ಸಮಾಪ್ತಿಯಾಯಿತು.

