“ಅಭಿವೃದ್ಧಿ ಹೊಂದಿದ ಭಾರತ 2047ರ ಗುರಿ ಸಾಧಿಸಲು ತಾಂತ್ರಿಕ ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಕರು ಸಮಸ್ಯೆ ಪರಿಹಾರಕರು, ನಾವೀನ್ಯಕಾರರು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಬೇಕು,” ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೇಳಿದರು.
ದಾವಣಗೆರೆಯಲ್ಲಿ ನಡೆದ ವಿಶ್ವವಿದ್ಯಾಲಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರೊಂದಿಗೆ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಗೌರವಾನ್ವಿತ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ರಾಜ್ಯಪಾಲರು ಕೃತಜ್ಞತೆ ಸಲ್ಲಿಸಿದರು. “ಅವರ ಸಾರ್ವಜನಿಕ ಜೀವನ, ಆಡಳಿತಾತ್ಮಕ ಅನುಭವ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಸಮರ್ಪಣೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಅವರ ಉಪಸ್ಥಿತಿಯು ಕಾರ್ಯಕ್ರಮದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ,” ಎಂದು ಹೇಳಿದರು.
ವಿಶ್ವವಿದ್ಯಾಲಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜು ತನ್ನ 75 ವರ್ಷಗಳ ಅದ್ಭುತ ಪಯಣವನ್ನು ಆಚರಿಸುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದ ರಾಜ್ಯಪಾಲರು, ರಾಷ್ಟ್ರ ನಿರ್ಮಾಣ, ತಾಂತ್ರಿಕ ಪ್ರಗತಿ ಹಾಗೂ ಯುವ ಪ್ರತಿಭೆಗಳ ಸಬಲೀಕರಣದಲ್ಲಿ ಸಂಸ್ಥೆಯ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.
“ಕರ್ನಾಟಕವು ಶಿಕ್ಷಣ, ಮಾಹಿತಿ ತಂತ್ರಜ್ಞಾನ ಹಾಗೂ ನವೋದ್ಯಮ ಕ್ಷೇತ್ರಗಳಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಬೆಂಗಳೂರನ್ನು ಭಾರತದ ‘ಸಿಲಿಕಾನ್ ವ್ಯಾಲಿ’ ಎಂದು ಕರೆಯಲಾಗುತ್ತದೆ. ಇದಕ್ಕೆ ನಮ್ಮ ಶಿಕ್ಷಣ ಸಂಸ್ಥೆಗಳು ಮತ್ತು ಪ್ರತಿಭಾವಂತ ಯುವಕರೇ ಕಾರಣ,” ಎಂದು ಹೇಳಿದರು.
“ಎಂಜಿನಿಯರಿಂಗ್ ಸಂಸ್ಥೆಗಳು ಕೇವಲ ತಾಂತ್ರಿಕ ಶಿಕ್ಷಣ ನೀಡುವುದಲ್ಲದೆ, ನಾವೀನ್ಯತೆ, ಸಂಶೋಧನೆ, ನಾಯಕತ್ವ ಮತ್ತು ಸಾಮಾಜಿಕ ಸೇವೆಯ ಮನೋಭಾವವನ್ನು ಬೆಳೆಸುತ್ತವೆ. ಕಳೆದ 75 ವರ್ಷಗಳಿಂದ ಈ ಸಂಸ್ಥೆ ತಾಂತ್ರಿಕ ಶಿಕ್ಷಣ, ಸಂಶೋಧನೆ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಕಾರ್ಯ ನಿರ್ವಹಿಸುತ್ತಿದೆ” ಎಂದು ಅವರು ಶ್ಲಾಘಿಸಿದರು.
ಈ ಸಂಸ್ಥೆಯು ಕಳೆದ ಏಳು ದಶಕಗಳಲ್ಲಿ ಸಾವಿರಾರು ಎಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ಆಡಳಿತಗಾರರನ್ನು ರೂಪಿಸಿ ದೇಶ ಹಾಗೂ ಜಗತ್ತಿನಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
“ಇಂದು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಹಸಿರು ತಂತ್ರಜ್ಞಾನ, ಸೈಬರ್ ಭದ್ರತೆ, ಅರೆವಾಹಕಗಳು ಮತ್ತು ಡಿಜಿಟಲ್ ನಾವೀನ್ಯತೆಗಳ ಯುಗವಾಗಿದೆ. ಈ ಕ್ಷೇತ್ರಗಳಲ್ಲಿ ಭಾರತವು ವಿಶ್ವ ನಾಯಕತ್ವ ಸಾಧಿಸುವ ಸಾಮರ್ಥ್ಯ ಹೊಂದಿದೆ” ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.
ಪ್ರಧಾನಮಂತ್ರಿ ನರೇಂದ್ರ ಅವರ ನೇತೃತ್ವದಲ್ಲಿ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ನಂತರ ಯೋಜನೆಗಳು ಯುವಕರಿಗೆ ಅಪಾರ ಅವಕಾಶಗಳನ್ನು ಒದಗಿಸಿವೆ ಎಂದು ಹೇಳಿದರು.
“ವಿದ್ಯಾರ್ಥಿಗಳಲ್ಲಿ ನಾಯಕತ್ವ, ನೀತಿಶಾಸ್ತ್ರ, ಸಂಶೋಧನಾ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವ ಶಿಕ್ಷಣ ವ್ಯವಸ್ಥೆ ಅಗತ್ಯವಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣವನ್ನು ಹೆಚ್ಚು ಪ್ರಾಯೋಗಿಕ, ಬಹುಶಿಸ್ತೀಯ ಮತ್ತು ಸಂಶೋಧನಾ ಆಧಾರಿತವಾಗಿಸಲು ದಾರಿ ಮಾಡಿಕೊಟ್ಟಿದೆ. “ಪ್ರಿಯ ವಿದ್ಯಾರ್ಥಿಗಳೇ, ನೀವು ಭಾರತದ ಅತಿದೊಡ್ಡ ಶಕ್ತಿ. ದೊಡ್ಡ ಕನಸು ಕಾಣಿರಿ, ನಿರಂತರವಾಗಿ ಕಲಿಯಿರಿ ಮತ್ತು ನಿಮ್ಮ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿರಿ. ಆಗ ಭಾರತವನ್ನು ವಿಶ್ವ ನಾಯಕನಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ,” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಸ್ಥೆಯ ಅಮೃತ ಮಹೋತ್ಸವ ಯಶಸ್ವಿಯಾಗಲಿ ಎಂದು ಹಾರೈಸಿದ ರಾಜ್ಯಪಾಲರು, ಮುಂದಿನ ದಿನಗಳಲ್ಲಿ ಈ ಸಂಸ್ಥೆ ಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಇನ್ನಷ್ಟು ಎತ್ತರಕ್ಕೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಎಂ.ಸಿ. ಸುಧಾಕರ್, ಮಲ್ಲಿಕಾರ್ಜುನ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

