ಕ್ರೀಡೆಗಳು (Sports) ವ್ಯಕ್ತಿತ್ವ ವಿಕಸನಕ್ಕೆ ಪ್ರಬಲ ಮಾಧ್ಯಮವಾಗಿದ್ದು, ನಾಯಕತ್ವ ಕೌಶಲ್ಯಗಳನ್ನು ಬೆಳೆಸುವ ಜೊತೆಗೆ ಆತ್ಮವಿಶ್ವಾಸ (Confidence) ಮತ್ತು ತಂಡದ ಮನೋಭಾವವನ್ನು ಬಲಪಡಿಸುತ್ತವೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ (Gehlot) ಅವರು ಹೇಳಿದರು. ಬೆಂಗಳೂರು ಗಾಲ್ಫ್ ಕ್ಲಬ್ನಲ್ಲಿ ಆಯೋಜಿಸಲಾದ “ಗವರ್ನರ್ಸ್ ಕಪ್–2026” (Governors Cup 2026) ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಗವರ್ನರ್ಸ್ ಕಪ್ ಕೇವಲ ಕ್ರೀಡಾಕೂಟವಲ್ಲ, ಶಿಸ್ತು, ತಾಳ್ಮೆ, ನಾಗರಿಕತೆ ಹಾಗೂ ಶ್ರೇಷ್ಠತೆಯ ಮೌಲ್ಯಗಳನ್ನು ಪ್ರತಿಬಿಂಬಿಸುವ ವೇದಿಕೆಯಾಗಿದೆ ಎಂದು ಅವರು ಹೇಳಿದರು. ಈ ಯಶಸ್ವಿ ಆಯೋಜನೆಗಾಗಿ ಬೆಂಗಳೂರು ಗಾಲ್ಫ್ ಕ್ಲಬ್ನ ಅಧಿಕಾರಿಗಳು, ಸದಸ್ಯರು, ಸಂಘಟನಾ ಸಮಿತಿ, ಆಟಗಾರರು ಹಾಗೂ ಸಹಯೋಗಿಗಳನ್ನು ಅಭಿನಂದಿಸಿದರು.
“1876ರಲ್ಲಿ ಸ್ಥಾಪನೆಯಾದ ಬೆಂಗಳೂರು ಗಾಲ್ಫ್ ಕ್ಲಬ್ ಸಮೃದ್ಧ ಇತಿಹಾಸವನ್ನು ಹೊಂದಿದ್ದು, ಗಾಲ್ಫ್ ಕ್ರೀಡೆಯು ತಾಳ್ಮೆ, ಏಕಾಗ್ರತೆ, ಆತ್ಮನಿಯಂತ್ರಣ ಹಾಗೂ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಗುಣಗಳನ್ನು ಬೆಳೆಸುತ್ತದೆ ಎಂದು ರಾಜ್ಯಪಾಲರು ತಿಳಿಸಿದರು. ಜೀವನದಲ್ಲಿ ಹೇಗೆ ಪ್ರತಿಯೊಂದು ನಿರ್ಧಾರ ಮಹತ್ವದ್ದಾಗಿದೆಯೋ, ಗಾಲ್ಫ್ನಲ್ಲಿಯೂ ಪ್ರತಿಯೊಂದು ಹೊಡೆತ ನಿರ್ಣಾಯಕವಾಗಿರುತ್ತದೆ” ಎಂದು ಅವರು ಹೇಳಿದರು.
“ನಿರಂತರ ಅಭ್ಯಾಸ, ಸಕಾರಾತ್ಮಕ ಚಿಂತನೆ ಮತ್ತು ಆತ್ಮಶಿಸ್ತು ಯಶಸ್ಸಿನ ಮೂಲಮಂತ್ರಗಳಾಗಿವೆ. ಈ ಮೌಲ್ಯಗಳನ್ನು ಮೈಗೂಡಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲ ಆಟಗಾರರನ್ನು ಅವರು ಅಭಿನಂದಿಸಿದರು.
“ವಿಜೇತರು ಗೌರವಕ್ಕೆ ಅರ್ಹರಾಗಿದ್ದರೂ, ಕೊನೆಯವರೆಗೂ ಸಮರ್ಪಣೆ ಮತ್ತು ಬದ್ಧತೆಯಿಂದ ಸ್ಪರ್ಧಿಸಿದ ಎಲ್ಲ ಸ್ಪರ್ಧಿಗಳೂ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಅವರು ಹೇಳಿದರು. ಗೆಲುವಿನಲ್ಲಿ ವಿನಮ್ರತೆ ಮತ್ತು ಸೋಲಿನಲ್ಲಿ ಸಂಯಮ ಪ್ರದರ್ಶಿಸುವುದು ಉತ್ತಮ ಕ್ರೀಡಾಪಟುವಿನ ಲಕ್ಷಣ” ಎಂದು ಅಭಿಪ್ರಾಯಪಟ್ಟರು.
“ಗವರ್ನರ್ಸ್ ಕಪ್ ಸ್ಪರ್ಧೆಯ ಯಶಸ್ಸು ತಂಡದ ಕಾರ್ಯಪಟುತ್ವ, ಪರಸ್ಪರ ಗೌರವ ಮತ್ತು ಸ್ನೇಹಭಾವದ ಪ್ರತೀಕವಾಗಿದೆ. ಈ ಸ್ಪರ್ಧೆಯು ಅನೇಕ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸಿದ್ದು, ಯುವ ಆಟಗಾರರ ಉತ್ಸಾಹವನ್ನು ಕಂಡಾಗ ಭಾರತವು ಗಾಲ್ಫ್ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ಹೊಂದಿದೆ ಎಂಬ ವಿಶ್ವಾಸ ಮೂಡುತ್ತದೆ” ಎಂದು ಹೇಳಿದರು.
“ಭಾರತ ಸರ್ಕಾರದ ಖೇಲೋ ಇಂಡಿಯಾ ಮತ್ತು ಫಿಟ್ ಇಂಡಿಯಾ ಕಾರ್ಯಕ್ರಮಗಳು ದೇಶದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದ್ದು, ಅದರ ಪರಿಣಾಮವಾಗಿ ಭಾರತೀಯ ಯುವಕರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದ್ದಾರೆ” ಎಂದು ರಾಜ್ಯಪಾಲರು ತಿಳಿಸಿದರು.
“ಕರ್ನಾಟಕವು ಕ್ರಿಕೆಟ್, ಬ್ಯಾಡ್ಮಿಂಟನ್, ಹಾಕಿ, ಅಥ್ಲೆಟಿಕ್ಸ್ ಹಾಗೂ ಗಾಲ್ಫ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ದೇಶಕ್ಕೆ ಹೆಮ್ಮೆಯ ಕೊಡುಗೆ ನೀಡಿದೆ. ನಮ್ಮ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹಾಗೂ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ” ಎಂದು ಅವರು ಹೇಳಿದರು.
“ಅಭಿವೃದ್ಧಿ ಹೊಂದಿದ ಭಾರತ–2047” ಗುರಿ ಸಾಧಿಸುವಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ವಹಿಸಲಿವೆ. ಆರೋಗ್ಯವಂತ, ಶಿಸ್ತುಬದ್ಧ ಮತ್ತು ಆತ್ಮವಿಶ್ವಾಸವುಳ್ಳ ಸಮಾಜವೇ ಬಲಿಷ್ಠ ರಾಷ್ಟ್ರ ನಿರ್ಮಾಣದ ಆಧಾರವಾಗಿದ್ದು, ಶಾಲೆಗಳು, ವಿಶ್ವವಿದ್ಯಾಲಯಗಳು ಹಾಗೂ ಸಮಾಜದ ಎಲ್ಲ ಹಂತಗಳಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಬೇಕಾಗಿದೆ” ಎಂದು ಅವರು ಕರೆ ನೀಡಿದರು.

ಗಾಲ್ಫ್ನಂತಹ ಕ್ರೀಡೆಗಳು ಕಾರ್ಪೊರೇಟ್ ವಲಯ, ಆಡಳಿತ ಸೇವೆಗಳು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಜನರನ್ನು ಒಗ್ಗೂಡಿಸುವ ವೇದಿಕೆಯಾಗಿವೆ. ಇವು ಸೌಹಾರ್ದತೆ, ಸಂವಾದ ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತವೆ. ಮುಂದಿನ ವರ್ಷಗಳಲ್ಲಿ ಗವರ್ನರ್ಸ್ ಕಪ್ ಇನ್ನಷ್ಟು ಪ್ರತಿಷ್ಠಿತ ವೇದಿಕೆಯಾಗಿ ಬೆಳೆದು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಬೆಂಗಳೂರು ಗಾಲ್ಫ್ ಕ್ಲಬ್ನ ಈ ಶ್ರೇಷ್ಠ ಪರಂಪರೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಎತ್ತರಕ್ಕೇರಲಿ ಹಾಗೂ ಇಲ್ಲಿಂದ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಗಾಲ್ಫ್ ಆಟಗಾರರು ಹೊರಹೊಮ್ಮಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಗಾಲ್ಫ್ ಕ್ಲಬ್ನ ನಾಯಕ ಶ್ರೀ ರವಿಕುಮಾರ್ ರಾಜು, ಗೌರವ ಕಾರ್ಯದರ್ಶಿ ಆನಂದ್ ಶ್ರೀನಿವಾಸನ್, ಗೌರವ ಖಜಾಂಚಿ ಬಿ.ಕೆ. ಸುಬ್ಬಯ್ಯ, ಗವರ್ನರ್ಸ್ ಕಪ್ ಟೂರ್ನಮೆಂಟ್ ಅಧ್ಯಕ್ಷ ಅರ್ಜುನ್ ತಲ್ಲಮ್, ಕ್ಲಬ್ನ ಪದಾಧಿಕಾರಿಗಳು, ಸದಸ್ಯರು, ಪ್ರಶಸ್ತಿ ವಿಜೇತ ಗಾಲ್ಫ್ ಆಟಗಾರರು ಹಾಗೂ ಗಣ್ಯರು ಉಪಸ್ಥಿತರಿದ್ದರು.