MALLESWARAM / BENGALURU : ಬೆಂಗಳೂರು ನಗರದ ಹೆಮ್ಮೆಯ ಸ್ಯಾಂಕಿ ಕೆರೆ (Sankey Lake) ಇಂದು ಗಂಭೀರ ಪರಿಸರ ಸಂಕಷ್ಟ ಎದುರಿಸುತ್ತಿದ್ದು, ಕೆರೆಯ ಅಸ್ತಿತ್ವವೇ ಅಪಾಯದಲ್ಲಿದೆ ಎಂದು ಸದಾಶಿವನಗರದ (Voice of Sadashivanagar) ನಾಗರಿಕರು, ಪರಿಸರ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ “ಸೇವ್ ಸ್ಯಾಂಕಿ ಟ್ಯಾಂಕ್” (Save Sankey Tank) ಅಭಿಯಾನದಡಿ ಕೆರೆ ಸಂರಕ್ಷಣೆ (Lake conservation) ಕುರಿತು ಜಾಗೃತಿ ಕಾರ್ಯಕ್ರಮದ ಜೊತೆಗೆ ಕೆರೆ ಉಳಿಸಿ (Save the Lake) ಎಂದು ಕೆರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸ್ಯಾಂಕಿ ಕೆರೆ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿದೆ. ಒಳಚರಂಡಿ ನೀರು ಹರಿಯುತ್ತಿದ್ದು, ಹಸಿರು ವಲಯದ ನಾಶ, ಕೆರೆಯ ವಿಸ್ತೀರ್ಣ ಕುಗ್ಗುತ್ತಿದೆ. ಕೆರೆಯ ಪರಿಸರ ಸಮತೋಲನ ಹದಗೆಡುತ್ತಿದೆ. ಕೆರೆಯ ಸುತ್ತಮುತ್ತ ದಶಕಗಳಷ್ಟು ಹಳೆಯ ಮರಗಳನ್ನು ಕಡಿದಿರುವುದರಿಂದ ಯಾವುದೇ ಸಮರ್ಪಕ ಅಧ್ಯಯನವಿಲ್ಲದೆ ನಡೆಯುತ್ತಿರುವ ಕಾಮಗಾರಿಯಿಂದ ಕೆರೆಯ ಮೂಲ ಸ್ವರೂಪವನ್ನೇ ಹಾಳು ಮಾಡುತ್ತಿವೆ ಎಂದು ಪರಿಸರ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.

ವಾಯ್ಸ್ ಆಫ್ ಸದಾಶಿವನಗರದ ಸಂಚಾಲಕರಾದ ಶಿಲ್ಪ ಜತ್ತಿ ಮಾತನಾಡಿ, ಸ್ಯಾಂಕಿ ಕೆರೆಯೊಳಗೆ ಹಾಗೂ ಸುತ್ತಮುತ್ತ ನಿರ್ಮಾಣ ತ್ಯಾಜ್ಯ ಸುರಿಯುತ್ತಿದ್ದು, ಪರಿಸರಕ್ಕೆ ಹಾನಿಕಾರಕವಾದ ಹೂಳು ಹೆಚ್ಚಾಗುತ್ತಿದೆ. ಬೆಂಗಳೂರು ನಗರದ ಭೂಗರ್ಭ ಜಲಮಟ್ಟ, ಪರಿಸರ ಸಮತೋಲನ ಹಾಗೂ ಸಾರ್ವಜನಿಕ ಆಸ್ತಿಯ ಭವಿಷ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತಿವೆ. ಕೆರೆ ಸಣ್ಣದಾಗುತ್ತಿದ್ದು, ಒತ್ತುವರಿ ಜೊತೆಗೆ ಪರಿಸರ ಹಾಳಾಗುತ್ತಿದೆ.

ಕೆರೆ ಸಂಪೂರ್ಣ ಕಾಂಕ್ರೀಟ್ ಕೆರೆಯಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು. ಎಲ್ಲಿಂದ ಚರಂಡಿ ನೀರು ಹರಿಯುತ್ತಿದೆ ಎಂಬುದನ್ನು ಪತ್ತೆ ಮಾಡಿ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಈ ಉದ್ದೇಶದಿಂದ “ಸೇವ್ ಸ್ಯಾಂಕಿ ಟ್ಯಾಂಕ್” ಅಭಿಯಾನ ಆಯೋಜಿಲಾಗಿದೆ ಎಂದರು. ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆಯ ಪ್ರತಿನಿಧಿಗಳು ಮಾತನಾಡಿ, ಪರಿಸರ ಮತ್ತು ನೀರಿನ ಗುಣಮಟ್ಟ ಪರಿಶೀಲನೆ ನಡೆಸಬೇಕು. ಪರಿಸರ ಸ್ನೇಹಿ ಪುನರುಜ್ಜೀವನ ಯೋಜನೆ ರೂಪಿಸಬೇಕು. ನಗರದ ನಾಗರಿಕರು, ಯುವ ಜನಾಂಗ, ಪರಿಸರ ಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಈ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಕೆರೆ ಉಳಿಸಲು ಮುಂದಾಗಬೇಕು ಎಂದರು. ವಾಯ್ಸ್ ಆಫ್ ಸದಾಶಿವನಗರ ಸಂಸ್ಥೆಯ ಶಿಲ್ಪ ಜತ್ತಿ, ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷರಾದ ಬಿ.ಕೆ.ಶಿವರಾಂ, ಡಾ.ಮನುರವರು ಮತ್ತು ಸದಾಶಿವನಗರದ ಸ್ಥಳೀಯ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

