ಬೆಂಗಳೂರು: ಪ್ರತಿಷ್ಠಿತ ಐಐಟಿ-ಜೆಇಇ ಅಡ್ವಾನ್ಸ್ಡ್ (JEE Advanced) 2026ರ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆಗೈದ ರಾಜಧಾನಿ ಬೆಂಗಳೂರಿನ ಸಹಕಾರ ನಗರದಲ್ಲಿರುವ (Sahakar nagar) ನಾರಾಯಣ ಒಲಿಂಪಿಯಾಡ್ (Narayana Olympiad) ಶಾಲೆಯ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲಿ (Campus) ಅದ್ದೂರಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಅಖಿಲ ಭಾರತ ಮಟ್ಟದಲ್ಲಿ (ಓಪನ್ ಕ್ಯಾಟಗರಿ) (Open Category) ಅತ್ಯುತ್ತಮ ರ್‍ಯಾಂಕ್ ಗಳಿಸಿದ ಶಾಲೆಯ ಸಾಧಕ ವಿದ್ಯಾರ್ಥಿಗಳನ್ನು, ಪೋಷಕರನ್ನು ಹಾಗೂ ಶಿಕ್ಷಕರನ್ನು ವೇದಿಕೆಯ ಮೇಲೆ ಗೌರವಿಸಲಾಯಿತು.
ಮನು ಪರಮೇಶ್ವರನ್ ಅಖಿಲ ಭಾರತ ಮಟ್ಟದಲ್ಲಿ 13ನೇ ರ್‍ಯಾಂಕ್ (AIR 13) ಪಡೆಯುವ ಮೂಲಕ ‘ಕರ್ನಾಟಕ ಸ್ಟೇಟ್ ಟಾಪರ್’ ಆಗಿ ಹೊರಹೊಮ್ಮಿದ್ದು, ಇವರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಅದೇ ರೀತಿ ಅಖಿಲ ಭಾರತ ಮಟ್ಟದಲ್ಲಿ 54ನೇ ರ್‍ಯಾಂಕ್ (AIR 54) ಗಳಿಸಿದ ಯಶ್ವಿನ್ ಕೋಟಾ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಮನು 360 ಅಂಕಗಳಿಗೆ 310 ಅಂಕಗಳನ್ನು ಪಡೆದರೆ, ಯಶ್ವಿನ್ 286 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಇವರಲ್ಲದೆ, ಇದೇ ಕ್ಯಾಂಪಸ್‌ನಿಂದ ಟಾಪ್ 1000ದೊಳಗೆ ಸ್ಥಾನ ಪಡೆದ 10 ವಿದ್ಯಾರ್ಥಿಗಳು ಹಾಗೂ 10,000ದ ಒಳಗಡೆ ಸ್ಥಾನ ಪಡೆದ 60 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಸಂಸ್ಥೆಯ ಎಕ್ಸಿಕ್ಯೂಟಿವ್ ಡೀನ್ ಬಿ. ಎನ್. ನಾಗರಾಜು ಅವರು, ಸಂಸ್ಥೆಯ ಹೆಮ್ಮೆಯ ಸಾಧನೆಯನ್ನು ಹಂಚಿಕೊಂಡರು. “ಈ ಶೈಕ್ಷಣಿಕ ವರ್ಷದಲ್ಲಿ ಇಡೀ ಪ್ಯಾನ್- ಇಂಡಿಯಾ ಮಟ್ಟದಲ್ಲಿ ನಾರಾಯಣ ಸಂಸ್ಥೆಯು ಅತ್ಯುತ್ತಮ ಫಲಿತಾಂಶ ಪಡೆದಿದೆ. ಟಾಪ್ 100ರ ಒಳಗೆ ನಮ್ಮ 35 ರ್‍ಯಾಂಕ್‌ಗಳು ಹಾಗೂ 1000ದ ಒಳಗೆ 219 ಓಪನ್ ಕ್ಯಾಟಗರಿ ರ್‍ಯಾಂಕ್‌ಗಳು ಬಂದಿವೆ. ಕರ್ನಾಟಕದಲ್ಲಿ ನಮ್ಮ 30 ಶಾಲೆಗಳು ಮತ್ತು 28 ಪಿಯು, ಸಿಬಿಎಸ್‌ಇ ಕಾಲೇಜುಗಳಿದ್ದು, ಇ-ಟೆಕ್ನೊ, ಒಲಿಂಪಿಯಾಡ್ ಹಾಗೂ ಸಿಒಇ (COE – Centre of Excellence) ಪಠ್ಯಕ್ರಮದಡಿ ಸುಮಾರು 50,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2022ರಲ್ಲಿ ಆರ್.ಕೆ. ಶಿಶಿರ್ ಮೂಲಕ ಅಖಿಲ ಭಾರತ ಪ್ರಥಮ ರ್‍ಯಾಂಕ್ ತಂದುಕೊಟ್ಟಿದ್ದ ಇದೇ ಸಹಕಾರ ನಗರ ಕ್ಯಾಂಪಸ್, ಈ ವರ್ಷವೂ ದೇಶದಲ್ಲೇ 13ನೇ ರ್‍ಯಾಂಕ್ ಪಡೆದಿದೆ. ಕೇವಲ ಇದೇ ಕ್ಯಾಂಪಸ್‌ನಿಂದ ಈ ಬಾರಿ ಸುಮಾರು 150 ಐಐಟಿ ಮತ್ತು ಎನ್‌ಐಟಿ ಸೀಟುಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ” ಎಂದು ಹರ್ಷ ವ್ಯಕ್ತಪಡಿಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಹಕಾರ ನಗರ ನಾರಾಯಣ ಕ್ಯಾಂಪಸ್‌ನ ಪ್ರಾಂಶುಪಾಲರಾದ ಫಣೀಂಧರ್ ಅವರು, “ನಮ್ಮ ಕ್ಯಾಂಪಸ್‌ನ ಅತ್ಯುತ್ತಮ ಶೈಕ್ಷಣಿಕ ಪಠ್ಯಕ್ರಮ, ಶಿಕ್ಷಕರ ತರಬೇತಿ ಹಾಗೂ ಮಾರ್ಗದರ್ಶನ ಈ ಫಲಿತಾಂಶಕ್ಕೆ ನೇರ ಕಾರಣ. ನಮ್ಮ ಕೋರ್ಸ್‌ವರ್ಕ್ ಮಾಡ್ಯೂಲ್, ಮಾಕ್ ಟೆಸ್ಟ್ ಮತ್ತು ಶಿಕ್ಷಕ- ವಿದ್ಯಾರ್ಥಿಗಳ ನಡುವಿನ ಒಳಸಂಬಂಧ ಹಾಗೂ ಮೆಂಟರ್‌ಶಿಪ್ ವಿದ್ಯಾರ್ಥಿಗಳನ್ನು ಅಣಿಗೊಳಿಸಿದೆ. ಕಳೆದ 8 ವರ್ಷಗಳಲ್ಲಿ 100ರ ಒಳಗಿನ ರ್‍ಯಾಂಕ್‌ಗಳಲ್ಲಿ ಬಹುಪಾಲು ಸಾಧನೆ ನಮ್ಮದಾಗಿದೆ. ಐಐಟಿಯಂತಹ ಕ್ಲಿಷ್ಟಕರ ಪರೀಕ್ಷೆಯನ್ನು ಎದುರಿಸಲು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ದೀರ್ಘ ಕಾಲದ ಪರಿಶ್ರಮವೇ ಮುಖ್ಯ ಕಾರಣ” ಎಂದು ವಿವರಿಸಿದರು. ನಾರಾಯಣ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ನಿರ್ದೇಶಕರಾದ ಡಾ. ಸಿಂಧೂರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಐತಿಹಾಸಿಕ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳು, ಅವರ ಬೆನ್ನೆಲುಬಾಗಿ ನಿಂತ ಪೋಷಕರು ಹಾಗೂ ಬೋಧಕ ವರ್ಗದ ಸಾಮೂಹಿಕ ಯತ್ನವನ್ನು ಶ್ಲಾಘಿಸಿ, ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಟಾಪರ್ ಮನು ಪರಮೇಶ್ವರನ್ ಮಾತನಾಡಿ, ತಮ್ಮ ಯಶಸ್ಸಿನ ಗುಟ್ಟನ್ನು ಮತ್ತು ಅನುಭವವನ್ನು ಹಂಚಿಕೊಂಡರು. “ನಾನು ಕಳೆದ ಎರಡು ವರ್ಷಗಳಿಂದ ಸಹಕಾರ ನಗರದ ನಾರಾಯಣ ಕ್ಯಾಂಪಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನಾರಾಯಣ ಸಂಸ್ಥೆಯ ವ್ಯವಸ್ಥಿತ ಪಠ್ಯಕ್ರಮ ಹಾಗೂ ಅತ್ಯುತ್ತಮ ಬೋಧಕ ವರ್ಗದಿಂದಾಗಿ ನಾನು ಈ 13ನೇ ರ್‍ಯಾಂಕ್ ಪಡೆಯಲು ಸಾಧ್ಯವಾಯಿತು. ನಮ್ಮ ಶಿಕ್ಷಕರು ಅತ್ಯಂತ ಸಹಕಾರಿಯಾಗಿದ್ದರು ಮತ್ತು ಪ್ರತಿಯೊಂದು ವಿಷಯಗಳನ್ನು ಬಹಳ ಆಳವಾಗಿ ವಿವರಿಸುತ್ತಿದ್ದರು. ಪುನರಾವರ್ತಿತ ಬೋಧನೆ ಮತ್ತು ಮಾರ್ಗದರ್ಶನದಿಂದಾಗಿ ಪ್ರತಿಯೊಂದು ಅಧ್ಯಾಯದಲ್ಲೂ ಸಂಪೂರ್ಣವಾಗಿ ಹಿಡಿತ ಸಾಧಿಸಲು ಸಾಧ್ಯವಾಯಿತು. ನನ್ನ ಈ ರ್‍ಯಾಂಕ್ ಬಗ್ಗೆ ನನಗೆ ಅಪಾರ ಖುಷಿಯಿದೆ” ಎಂದು ಸಂತಸದಿಂದ ನುಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಸಂಭ್ರಮದಿಂದ ಪಾಲ್ಗೊಂಡಿದ್ದರು.

