ಕಾವೇರಿ ನದಿಯ (Cauvery River) ಮೇಲಿನ ಮೇಕೆದಾಟು ಯೋಜನೆಗೆ (Mekedatu Project) ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ. ನ್ಯಾಯಾಲಯದ (HighCourt) ತೀರ್ಪನ್ನು ಗೌರವಿಸದೆ, ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ನೀಡದಂತೆ ಜಲಶಕ್ತಿ ಸಚಿವಾಲಯಕ್ಕೆ ಸೂಚಿಸುವಂತೆ ತಮಿಳುನಾಡಿನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಪ್ರಧಾನಿ ಮೋದಿ (PM MOdi) ಯವರನ್ನು ಭೇಟಿಮಾಡಿ ಮನವಿ ಮಾಡಿರುವುದನ್ನು ಹಾಗೂ ಮೇಕೆದಾಟು ಯೋಜನೆಯ ವಿಚಾರದಲ್ಲಿ ಕಾನೂನು ಕ್ರಮ ತ್ವರಿತಗೊಳಿಸುವಂತೆ ರಾಜ್ಯದ ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನು ಕನ್ನಡ ಗೆಳೆಯರ ಬಳಗವು ತೀವ್ರವಾಗಿ ಖಂಡಿಸುತ್ತದೆ.
ಕಾವೇರಿ ನದಿಯ ನೀರನ ವಿಚಾರದಲ್ಲಿ ತಮಿಳರ ದಬ್ಬಾಳಿಕೆ ಇಂದು ನಿನ್ನೆಯದಲ್ಲಿ. ೧೩ನೇ ಶತಮಾನದ ಕೇಶಿರಾಜನ `ಶಬ್ದಮಣಿ ದರ್ಪಣ’ದಲ್ಲಿ`ಕಾವೇರಿಯ ಕಾಲನ್ ಆ ತಿಗುಳನೇಂ ಕಡಂಗೊಂಡನೋ, ಬಡ್ಡಿಗೊಂಡನೋ‘ ಎಂಬ ಮಾತು ಬರುತ್ತದೆ. ಅಂದಿನಿಂದ ಇಂದಿನವರೆಗೂ ತಮಿಳುನಾಡು ಕರ್ನಾಟಕದ ಹಿತಕ್ಕೆ ಅಡ್ಡಿ ಪಡಿಸುತ್ತಲೇ ಬಂದಿದೆ. ನ್ಯಾಯಾಧಿಕರಣದ ತಮಿಳುನಾಡು ಪರಿ ತೀರ್ಪಿನ ವಿರುದ್ಧ ನಡೆದ ಹೋರಾಟದಿಂದ ಸ್ವಲ್ಪ ನ್ಯಾಯ ದೊರೆತಿದೆ. ಆದರೆ, ಆಳುವವರು ಕರ್ನಾಟಕದ ಹಿತಕ್ಕಿಂತ ರಾಜಕೀಯ ಲಾಭಕ್ಕೆ ಆಧ್ಯಯತೆ ಕೊಡುತ್ತಿರುವುದು ದುರಂತ.
ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡು 17 ವರ್ಷಗಳ ನಂತರ 2024ರಲ್ಲಿ ವಿವಾದಿತ ಹೋಗೆನಕಲ್ ಕುಡಿಯುವ ನೀರಿನ 2ನೆಯ ಹಂತದ ಯೋಜನೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಾಗ ಅದನ್ನು ಕರ್ನಾಟಕ ಸರ್ಕಾರ ವಿರೋಧಿಸಲಿಲ್ಲ. ಈಗ ವಿಜಯ್ ಅವರ ಈ ನಿಲುವನ್ನು ವಿರೋಧಿಸಿಲ್ಲ. ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ಕಾರವೇ ಇರುವುದು ಕಾರಣವಿರಬಹುದೇ ಎಂಬ ಅನುಮಾನ ಬರುತ್ತದೆ. (‘ಕರ್ನಾಟಕಕ್ಕೆ ಮಹಾದಾಯಿಯ ಒಂದು ಹನಿ ನೀರನ್ನು ಕೊಡುವುದಿಲ್ಲ’ ಎಂದು 2009ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದನ್ನು ಗಮನಿಸಬೇಕು). ಪ್ರಜಾಪ್ರಭುತ್ತವದಲ್ಲಿ ಜನರ ಹಿತ ಮುಖ್ಯವಾಗಬೇಕೆ ವಿನಃ ಆಳುವ ಪಕ್ಷದ್ದಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇಂದ್ರದ ವಿರುದ್ಧ ಮಾತನಾಡುವುದರಲ್ಲಿ ತೋರುವ ಉತ್ಸಾಹವನ್ನು ತಮಿಳುನಾಡಿನ ಕರ್ನಾಟಕ ವಿರೋಧಿ ದೋರಣೆಯನ್ನು ಖಂಡಿಸಲು ಏಕೆ ತೋರುವುದಿಲ್ಲ?. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಮಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಮೌನ ವಹಿಸಿದ್ದಾರೆ. ಈ ವರ್ಷ ಮಳೆಯ ಅಭಾವ ಆಗುವ ಸಾಧ್ಯತೆಯಿದ್ದು ಕರ್ನಾಟಕದ ಹಿತ ಕಾಯಲು ಕನ್ನಡ ಸಂಘಟನೆಗಳೇ ಮುಂದಾಗಬೇಕೆಂದು ಕನ್ನಡ ಗೆಳೆಯರ ಬಳಗ ಭಾವಿಸುತ್ತದೆ. ಬಿಜೆಪಿಯವರೂ ಕನ್ನಡದ ಹಿತಕ್ಕಿಂತ ಪಕ್ಷದ ಲಾಭಕ್ಕೆ ಒತ್ತುಕಟ್ಟ ನಿದರ್ಶನಗಳಿವೆ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕರಾದ ರಾ.ನಂ. ಚಂದ್ರಶೇಖರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

