ವಿದ್ಯಾರ್ಥಿಗಳಲ್ಲಿ ಗಣಿತ ವಿಷಯದ ಅರಿವು, (Knowledge of Mathematical Content) ಆಸಕ್ತಿ ಹಾಗೂ ಸೃಜನಾತ್ಮಕ ಕಲಿಕೆಯ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ನಿವೃತ್ತ ಶಿಕ್ಷಕರಾದ ಎಂ. ಶಂಕರ (M.Shankar) ರವರು ರಚಿಸಿದ “Innovative Mathematics Resource Book” (ನೂತನ ಗಣಿತದ ಸಂಪನ್ಮೂಲ ಪುಸ್ತಕ) ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಬೆಂಗಳೂರಿನ ಶ್ರೀ ಜಯರಾಮ ಸೇವಾ ಮಂಡಳಿ (Sri Jayarama Seva Mandali) ಯಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ದ ಶ್ರೀ ವೀರೇಶಾನಂದ ಸರಸ್ವತಿ ಅವರು ದಿವ್ಯ ಸಾನ್ನಿಧ್ಯ ವಹಿಸಿ, “ಶಿಕ್ಷಣವೆಂಬುದು ಕೇವಲ ಅಂಕಗಳಿಗಾಗಿ ಮಾತ್ರವಲ್ಲ; ಅದು ಬದುಕಿನ ಮೌಲ್ಯಗಳನ್ನು ರೂಪಿಸುವ ಶಕ್ತಿ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗಣಿತದ ಭಯವನ್ನು ದೂರ ಮಾಡಿ ವಿಷಯದತ್ತ ಆಸಕ್ತಿ ಬೆಳೆಸಲು ಇಂತಹ ಸಂಪನ್ಮೂಲ ಪುಸ್ತಕಗಳ ಅಗತ್ಯತೆ ಇದೆ ಎಂದು ತಿಳಿಸಿದರು.
ಪ್ರಯೋಗ ಸಂಸ್ಥೆಯ ಸ್ಥಾಪಕರು ಹಾಗೂ ಮುಖ್ಯ ಮಾರ್ಗದರ್ಶಕರಾದ ಡಾ. ಹೆಚ್. ಎಸ್. ನಾಗರಾಜ ಅವರು ಪುಸ್ತಕದ ವೈಶಿಷ್ಟ್ಯಗಳನ್ನು ಪರಿಚಯಿಸಿ, ನೂತನ ಕಲಿಕಾ ವಿಧಾನಗಳು, ಸರಳ ನಿರೂಪಣೆ ಹಾಗೂ ವಿದ್ಯಾರ್ಥಿ ಸ್ನೇಹಿ ಮಾದರಿಗಳ ಮೂಲಕ ಈ ಕೃತಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಲೇಖಕರಾದ ಎಂ. ಶಂಕರ ಅವರು ತಮ್ಮ ಬೋಧನಾ ಅನುಭವಗಳನ್ನು ಹಂಚಿಕೊಂಡು, ವಿದ್ಯಾರ್ಥಿಗಳಿಗೆ ಸುಲಭ ಹಾಗೂ ಆಸಕ್ತಿದಾಯಕ ರೀತಿಯಲ್ಲಿ ಗಣಿತ ಕಲಿಯಲು ಈ ಕೃತಿ ಸಹಾಯಕವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

