BENGALURU : ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ (Department of Public Libraries) ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಪುಸ್ತಕ ಖರೀದಿ ಅವ್ಯವಹಾರಗಳಿಗೆ ಇಲಾಖೆಯ ನೂತನ ಆಯುಕ್ತರಾದ ಜಿ.ಜಗದೀಶ್ (G.Jagadish) ಅವರು ತಡೆ ನೀಡುವ ಮೂಲಕ ದಿಟ್ಟತನ ಮೆರೆದಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದು, ಇತ್ತೀಚೆಗಷ್ಟೇ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡಿರುವ ಜಿ.ಜಗದೀಶ್ ರವರು ಇಲಾಖೆಯಲ್ಲಿನ ಅಕ್ರಮಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಭೂಗಳ್ಳರ ವಿರುದ್ಧ ಬುಲ್ಡೋಜರ್ ಬಳಸಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ಮತ್ತು ನಿವೇಶನಗಳನ್ನು ಅತಿಕ್ರಮಣಕಾರರಿಂದ ವಾಪಸ್ಸು ಪಡೆದು ದಿಟ್ಟ ಅಧಿಕಾರಿ ಎನಿಸಿಕೊಂಡಿರುವ ಜಗದೀಶ್ ರವರು, ಇದೀಗ ಗ್ರಂಥಾಲಯ ಇಲಾಖೆಯನ್ನೂ ಸುವ್ಯವಸ್ಥೆಗೆ ತರಲು ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ಎರಡು ಪ್ರಕಾಶನಗಳ ಪುಸ್ತಕ ಖರೀದಿ ತಡೆಹಿಡಿಯಲು ಸುತ್ತೋಲೆ ಹೊರಡಿಸಿದ್ದು, ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ಪ್ರಕಾಶಕರ ಅಕ್ರಮ ಒಳಸಂಚಿನಿಂದಾಗಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಗಳ ನಷ್ಟವಾಗುತ್ತಿರುವುದು ಕಂಡುಬಂದಿದೆ. ಈ ಹಿಂದೆ ಸರ್ಕಾರವು ಇಲಾಖೆಯ ಹಿಂದಿನ ನಿರ್ದೇಶಕರನ್ನು ಅಮಾನತುಗೊಳಿಸಿ ತನಿಖೆ ಕೈಗೊಂಡಿದ್ದರೂ, ಕೆಲವು ಪ್ರಕಾಶಕರು ತಮ್ಮ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸಿದ್ದರು. ಇದೀಗ ಇಲಾಖೆಯ ಪುಸ್ತಕ ಖರೀದಿಯಲ್ಲಿನ ಅಕ್ರಮವನ್ನು ಬಯಲಿಗೆಳೆದಿರುವ ಆಯುಕ್ತರು, ಪ್ರಮುಖವಾಗಿ ಎರಡು ಪ್ರಕಾಶನ ಸಂಸ್ಥೆಗಳ ವಿರುದ್ಧ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ.
ಅಲ್ಲದೆ, ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೆ ಮೆ. ಸೃಷ್ಠಿ ಪಬ್ಲಿಕೇಷನ್ಸ್ ಮತ್ತು ಮೆ. ದೇಸಿ ಪುಸ್ತಕ ಪ್ರಕಾಶನ ಸಂಸ್ಥೆಗಳ ಪುಸ್ತಕ ಖರೀದಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ತಡೆಹಿಡಿಯಲು ಇಲಾಖೆಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸುತ್ತೋಲೆ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆಯುಕ್ತರ ಈ ದಿಢೀರ್ ಮತ್ತು ದಿಟ್ಟ ಕ್ರಮವು ಇಲಾಖೆಯಲ್ಲಿ ಅವ್ಯವಹಾರ ನಡೆಸುತ್ತಿದ್ದ ಕೆಲವು ಪ್ರಕಾಶಕರು ಹಾಗೂ ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ. ಕೇವಲ ಇಷ್ಟಕ್ಕೇ ನಿಲ್ಲಿಸದೆ, ಮುಂದಿನ ದಿನಗಳಲ್ಲಿ ಇಲಾಖೆಯಲ್ಲಿ ಆರೋಪ ಎದುರಿಸುತ್ತಿರುವ ಎಲ್ಲಾ ಪ್ರಕಾಶನ ಸಂಸ್ಥೆಗಳ ವಿರುದ್ಧವೂ ಹಂತ-ಹಂತವಾಗಿ ಪ್ರಾಥಮಿಕ ವಿಚಾರಣೆಯನ್ನು ಕೈಗೊಂಡು ಕಾನೂನು ಕ್ರಮ ಜರುಗಿಸಲು ಆಯುಕ್ತರು ನಿರ್ಧರಿಸಿದ್ದಾರೆ. ಇಲಾಖೆಯಲ್ಲಿ ಪಾರದರ್ಶಕತೆ ತರಲು ಮತ್ತು ಸರ್ಕಾರದ ಹಣ ಪೋಲಾಗುವುದನ್ನು ತಡೆಯಲು ಈ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

