ಬೆಂಗಳೂರು: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡ್ತಿರುವವರ ಮೇಲೆ ಸ್ವಯಂಪ್ರೇರಿತ ಕೇಸ್ ಹಾಕ್ಬೇಕು ಎಂದು ಬಿಜೆಪಿ ಶಾಸಕ ಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಧರ್ಮಸ್ಥಳ ಅಸಹಜ ಸಾವು ಪ್ರಕರಣ ಸದನದಲ್ಲಿ ಉತ್ತರ ಕೊಡುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಇವತ್ತು ಸದನದಲ್ಲಿ ಗೃಹ ಸಚಿವರು, ಸಿಎಂ, ಡಿಸಿಎಂ ಸದನದಲ್ಲಿ ಉತ್ತರ ಕೊಡಬೇಕಿದೆ. ಧರ್ಮಸ್ಥಳ ಪ್ರಕರಣದಲ್ಲಿ ಬಹಳ ಸ್ಪಷ್ಟವಾಗಿ ಉತ್ತರ ಕೊಡಲಿ. ಅನಾಮಿಕ ವ್ಯಕ್ತಿಯ ಬಗ್ಗೆಯು ತನಿಖೆ ಆಗಲಿ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಅವರ ಮೇಲೆ ಸ್ವಯಂಪ್ರೇರಿತ ಕೇಸ್ ಹಾಕಬೇಕಿದೆ, ಹಿಂದೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್‍ನವರು ಕಾರಣ ಇಲ್ಲದೇ ಸುಮೋಟೋ ಕೇಸ್ ಹಾಕ್ತಾರೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡ್ತಿರುವವರ ಮೇಲೆ ಕೇಸ್ ಹಾಕಬೇಕು. ಪ್ರಕರಣದಲ್ಲಿ ಷಡ್ಯಂತ್ರ ಏನಾಗಿದೆ ಎಂದು ಹೇಳಬೇಕು. ಗಾಳಿಯಲ್ಲಿ ತೇಲಿಸುವ ಕೆಲಸ ಆಗಬಾರದು ಎಂದು ಆಗ್ರಹಿಸಿರುವರು.
ಅನಾಮಿಕ ವ್ಯಕ್ತಿಯು ಸುಪ್ರೀಂ ಕೋಟ್ರ್ಗೆ ಲಾಯರ್‍ಗಳನ್ನ ಇಟ್ಟುಕೊಂಡಿದ್ದು, ಇಷ್ಟ ಬಂದ ಹಾಗೆ ಕಥೆಯನ್ನ ಸೃಷ್ಟಿ ಮಾಡ್ತಿದ್ದಾರೆ. ಅನಾಮಿಕ ವ್ಯಕ್ತಿಯ ಮೂಲಕ ಸುಳ್ಳನ್ನೆ ಸತ್ಯವನ್ನಾಗಿ ಮಾಡಲು ಹೊರಟಿದ್ದಾರೆ. ಇದನ್ನ ಪಿಎಫ್‍ಐ, ಎಸ್‍ಡಿಪಿಐ ಮಾಡ್ತಿದೆ. ಅನಾಮಿಕ ವ್ಯಕ್ತಿ ಹಾಗೂ ಆತನ ಹಿಂದಿರುವ ವ್ಯಕ್ತಿಯ ಬಗ್ಗೆ ತನಿಖೆಯಾಗಲಿ ಎಂದು ಅಶ್ವತ್ಥನಾರಾಯಣ್ ಅವರು ಆಗ್ರಹಿಸಿದ್ದಾರೆ.
ಅಪಪ್ರಚಾರಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ: ಶಾಸಕ ಅಶ್ವಥ್ ನಾರಾಯಣ್ ಆಗ್ರಹ
ಅಂತೂ ಇಂತು ಮುಕ್ತಿ ಸಿಕ್ತು ಹೆಬ್ಬಾಳ ಫ್ಲೈಓವರ್!!! ಲೋಕಾರ್ಪಣೆ ಮಾಡಿದ ಸಿದ್ದರಾಮಯ್ಯ: ಡಿಕೆ ಶಿವಕುಮಾರ್!!!
ಹೆಬ್ಬಾಳ ನೂತನ ಮೇಲ್ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಲೋಕಾರ್ಪಣೆ ಮಾಡಿದರು. ಏ.ಖ.ಪುರಂನಿಂದ ಮೇಖ್ರಿ ಸರ್ಕಲ್ ಕಡೆ ಸಂಪರ್ಕಿಸುವ 700 ಮೀಟರ್ ಉದ್ದದ ಹೊಸ ಮೇಲ್ಸೇತುವೆಯನ್ನು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ವೇಳೆ ಸಚಿವರಾದ ಭೈರತಿ ಸುರೇಶ್, ಕೃಷ್ಣಭೈರೇಗೌಡ, ಶಾಸಕರಾದ ಎಸ್.ಆರ್.ವಿಶ್ವನಾಥ್, ಹ್ಯಾರಿಸ್, ನಟಿ ರಮ್ಯಾ ಉಪಸ್ಥಿತರಿದ್ದರು.
ಬಿಡಿಎ ಕಳೆದ 2 ವರ್ಷಗಳಿಂದ ಹೆಬ್ಬಾಳ ವಿಸ್ತರಿತ ಫ್ಲೈ ಓವರ್ ಕಾಮಗಾರಿ ನಡೆಸುತ್ತಾ ಇತ್ತು ಇದರ ಕಾಮಗಾರಿ ಪೂರ್ಣಗೊಂಡಿದೆ. ಇಂದು ಹೆಬ್ಬಾಳ ಪ್ಲೈ ಓವರ್ ಉದ್ಘಾಟನೆ ಮಾಡಲಾಗ್ತಿದೆ. ಉದ್ಘಾಟನೆಗೆ ಸಿದ್ಧತೆ ಆಗಿದ್ದು ಫ್ಲೈಓವರ್‍ಗೆ ಹೂವಿನ ಹಾರ ಹಾಕಿ ಸಿಂಗಾರ ಮಾಡಲಾಗಿದೆ. 700 ಮೀಟರ್ ಉದ್ದದ ಈ ಫ್ಲೈ ಓವರ್‍ನಿಂದ ಕೆ.ಆರ್ ಪುರಂ ಕಡೆಯಿಂದ ಮೇಖ್ರಿ ಸರ್ಕಲ್ ಕಡೆಗೆ ಸಾಗಲಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಬರುವುದಕ್ಕೆ ದ್ವಿಪಥ ರಸ್ತೆ ಮಾತ್ರ ಇದ್ದು. ಕೆ.ಆರ್ ಪುರ ಕಡೆಯಿಂದ ಬರುವ ರಸ್ತೆ ಇದನ್ನ ಸೇರಿಕೊಳ್ಳುತ್ತದೆ. ವಿಮಾನ ನಿಲ್ದಾಣ ಕಡೆಯಿಂದ ನಗರದ ಕಡೆಗೆ ಪ್ರಯಾಣಿಸುವ ವಾಹನಗಳಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಸಂಚಾರ ದಟ್ಟಣೆ ನಿವಾರಿಸಲು ಹೆಬ್ಬಾಳ ಫ್ಲೈಓವರ್ ಬಳ್ಳಾರಿ ರಸ್ತೆ, ವಿಮಾನ ನಿಲ್ದಾಣ ಮತ್ತು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತದೆ. ಫ್ಲೈ ಓವರ್ ಸಂಚಾರಕ್ಕೆ ಮುಕ್ತಗೊಂಡ ನಂತರ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ.
ಒಟ್ಟಾರೆ ಹೆಬ್ಬಾಳ ವಿಸ್ತರಿತ ಫ್ಲೈ ಓವರ್ ಇಂದು ಉದ್ಘಾಟನೆ ಗೊಂಡಿದ್ದು ಹೆಬ್ಬಾಳ ಸುತ್ತಮುತ್ತ, ಏರ್ ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಗೆ ಕೆಲಮಟ್ಟಿಗೆ ರಿಲೀಫ್ ಸಿಗಲಿದೆ.
ಕೆ.ಆರ್.ಪುರಂ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಸಂಚರಿಸಲು ನಿರ್ಮಿಸಿರುವ ಮೇಲ್ಸೇತುವೆ ಸಿದ್ದರಾಮಯ್ಯ ಅವರೊಂದಿಗೆ ಲೋಕಾರ್ಪಣೆಗೊಳಿಸಲಾಯಿತು. ಹೆಬ್ಬಾಳದ ಹೊಸ ಮೇಲ್ಸೇತುವೆ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿದೆ. 80 ಕೋಟಿ ರೂ. ವೆಚ್ಚದಲ್ಲಿ 700 ಮೀಟರ್ ಉದ್ದದ ಹೆಬ್ಬಾಳ ಫ್ಲೈಓವರ್ ನಿರ್ಮಾಣದಿಂದ ಹೆಬ್ಬಾಳದ ಟ್ರಾಫಿಕ್ ದಟ್ಟಣೆ ನಿವಾರಣೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹೆಬ್ಬಾಳ ಮೇಲ್ಸೇತುವೆಯಲ್ಲಿ ನನ್ನ ಯೆಜ್ಡಿ ರೋಡ್‍ಕಿಂಗ್ ಬೈಕ್ ಸವಾರಿ ಮಾಡುವ ಮೂಲಕ ಕಾಲೇಜು ದಿನಗಳನ್ನು ಮೆಲುಕು ಹಾಕಿದ್ದಿದೆ. ಬೆಂಗಳೂರಿನ ನಾಗರಿಕರೇ, ಜಾಗತಿಕವಾಗಿ ಗುರುತಿಸಿಕೊಂಡಿರುವ ನಮ್ಮ ಬೆಂಗಳೂರು ನಗರಕ್ಕೆ ಹೊಸರೂಪವನ್ನು ನೀಡಲು ನಾವು ಬದ್ಧರಿದ್ದೇವೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹ್ಯಾರಿಸ್‍ರವರು, ಕೃಷ್ಣ ಬೈರೇಗೌಡರವರು ಹಾಗೂ ನಗರಾಭಿವೃದ್ಧಿ ಸಚಿವರು ಹಾಗೂ ಹೆಬ್ಬಾಳ ಕ್ಷೇತ್ರದ ಜನಪ್ರಿಯ ಶಾಸಕ ಬೈರತಿ ಸುರೇಶ ಸಮ್ಮುಖದಲ್ಲಿ ಹೆಬ್ಬಾಳ ಮೇಲ್ಚೇತುವೆಯ ಅನಾವರಣ ಕಾರ್ಯಕ್ರಮಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಅನೇಕನೇಕ ನಮ್ಮ ಕಾಂಗ್ರೆಸ್ ಪಕ್ಷದ ನಾಯಕರು ಕಾರ್ಯಕರ್ತರುಗಳು ಹಾಗೂ ಸ್ಥಳೀಯ ನಾಗರೀಕರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಮೇಲ್ ಸೇತುವೆಯನ್ನು ಲೋಕಾರ್ಪಣೆ ಗೊಳಿಸಲಾಗಿದೆ.
ವೀರಹುತಾತ್ಮ ಮದನ್ ಲಾಲ್ ಧಿಂಗ್ರಾರವರ ಪುಣ್ಯಸ್ಮರಣೆ
ಚಾಮರಾಜನಗರ: ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ನೆನಪಿನಲ್ಲಿ ನಿರ್ಮಿಸಿರುವ ನಗರದ ಪ್ರಸಿದ್ಧ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಮತ್ತುಋಗ್ವೇದಿ ಯೂತ್ ಕ್ಲಬ್ ವತಿಯಿಂದ ವೀರಹುತಾತ್ಮ ಮದನ್ ಲಾಲ್ ಧಿಂಗ್ರಾರವರ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು. ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮದನ್ ಲಾಲ್ ಧಿಂಗ್ರಾರವರ ಕುರಿತು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಮದನ್ ಲಾಲ್ ಧಿಂಗ್ರಾ ರವರು ಕೇವಲ 18ನೇ ವರ್ಷದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಗಲ್ಲು ಶಿಕ್ಷೆಗೆ ಒಳಪಟ್ಟ ಅಪ್ರತಿಮ ವೀರ. ಅತ್ಯಂತ ಶ್ರೀಮಂತ ಮನೆತನದಲ್ಲಿ ಬೆಳೆದ ಮದನ್ ಲಾಲ್ ಇಂಗ್ಲೆಂಡಿನಲ್ಲಿ ವೀರ ಸಾವರ್ಕರ್ ಅವರ ಪ್ರಭಾವಕ್ಕೆ ಒಳಗಾಗಿ ದೇಶನಿಷ್ಠೆ ,ರಾಷ್ಟ್ರಭಕ್ತಿ ಹಾಗೂ ಬ್ರಿಟಿಷರ ವಿರುದ್ಧ ಹೋರಾಟವನ್ನು ನಡೆಸಿದ ಮಹಾನ್ ಕ್ರಾಂತಿಕಾರಿ. ಕೋಟ್ಯಾಂತರ ಯುವಕರಿಗೆ ಧೈರ್ಯ, ಸ್ಪೂರ್ತಿ ಹಾಗೂ ದೇಶಭಕ್ತಿಯ ಪ್ರತೀಕ ಮದನ್ ಲಾಲ್ ಧಿಂಗ್ರಾರವರು ಹಾಗು ಕ್ರಾಂತಿಕಾರರ ಇತಿಹಾಸ ಶಾಲೆ, ಕಾಲೇಜುಗಳ ಬೋಧನಾ ವಿಷಯವಾಗಬೇಕು ಎಂದರು.
ಶ್ರೀರಂಗಪಟ್ಟಣದ ಬೆಳವಾಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ದಿನೇಶ್ ಪೂರಿಗಾಲಿ ಮಾತನಾಡಿ ಜೈ ಹಿಂದ್ ಕಟ್ಟೆಯಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ರೂಪಿಸಿ ದೇಶಭಕ್ತಿಯ ಕಾರ್ಯಕ್ರಮಗಳಿಗೆ ಸದಾ ಕಾಲ ಅರ್ಥಗರ್ಭಿತವಾಗಿ, ಇತಿಹಾಸ ಪ್ರಜ್ಞೆಯನ್ನು ದೇಶಭಕ್ತಿಯ ಮೂಲಕ ಜಾಗೃತಿ ಮೂಡಿಸುತ್ತಿರುವ ಜೈ ಹಿಂದ್ ಪ್ರತಿಷ್ಠಾನ ಹೆಮ್ಮೆಯ ರಾಷ್ಟ್ರಭಕ್ತಿಯ ಸಂಸ್ಥೆಯಾಗಿದೆ. ಪ್ರತಿ ಮನೆಮನೆಗಳಲ್ಲೂ ದೇಶಭಕ್ತರ ಸ್ಮರಣೆ ಮಾಡಿಕೊಳ್ಳುವ ಮೂಲಕ ನಾವು ನಿಷ್ಠೆಯಿಂದ ಬದುಕುವ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಇಂಜಿನಿಯರ್ ಬೆಂಗಳೂರಿನ ಸತೀಶ್ ಮಾತನಾಡಿ ಯುವಕರಲ್ಲಿ ದೇಶದ ಇತಿಹಾಸವನ್ನು ತಿಳಿಸುವ ಕೆಲಸ ಮಾಡೋಣ. ಧರ್ಮ, ರಾಷ್ಟ್ರದ ಜಾಗೃತಿ ಹಾಗೂ ಸೇವಾಗುಣದ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳೋಣ ಎಂದು ತಿಳಿಸಿದರು. ಋಗ್ವೇದಿ ಯೂತ್ ಕ್ಲಬ್ ನ ಶರಣ್ಯ, ಶ್ರಾವ್ಯ, ಅಧಿತಿ ,ಸಾನಿಕ ಮುಂತಾದವರು ಉಪಸ್ಥಿತರಿದ್ದರು.
ಶ್ರೀಕೃಷ್ಣನ ವಿವಿಧ ಗುಣವೈಶಿಷ್ಟ್ಯಗಳು
೧. ಸಂಬಂಧಿಸಿದ ನದಿ : ಶ್ರೀಕೃಷ್ಣನೊಂದಿಗೆ ಯಮುನಾ ನದಿಯ ಅವಿನಾಭಾವ ಸಂಬಂಧವಿದೆ. ಯಮುನೆಯಲ್ಲಿ ಹೆಚ್ಚು ಕೃಷ್ಣತತ್ವವಿದೆ. ಅವಳ ಬಣ್ಣವು ಶ್ರೀಕೃಷ್ಣನಂತೆಯೇ ನುಸುಗಪ್ಪಾಗಿದೆ. ಯಮುನೆಯನ್ನು ‘ಕಾಲಿಂದಿ’ ಎಂದೂ ಕರೆಯುತ್ತಾರೆ.
೨. ಕುಂಡಲಿನಿಯಲ್ಲಿ ಸಂಬಂಧಿಸಿದ ಚಕ್ರಗಳು : ಕುಂಡಲಿನಿಯ ಅನಾಹತ ಚಕ್ರವು ಶ್ರೀಕೃಷ್ಣನೊಂದಿಗೆ ಸಂಬಂಧ ಹೊಂದಿದೆ.
೩. ಸಂಬಂಧಿಸಿದ ದಿನಗಳು : ಬುಧವಾರ ವಿಠ್ಠಲನ ದಿನವಾಗಿದೆ. ಕಲಿಯುಗದಲ್ಲಿ ಶ್ರೀಕೃಷ್ಣನ ಅವತಾರವೆಂದರೆ ಶ್ರೀ ವಿಠ್ಠಲ. ಶ್ರಾವಣದ ಕೃಷ್ಣ ಪಕ್ಷದಲ್ಲಿ ಬರುವ ಅಷ್ಟಮಿ ಅಂದರೆ ಗೋಕುಲಷ್ಟಮಿಯ ದಿನವು ಶ್ರೀಕೃಷ್ಣನೊಂದಿಗೆ ಸಂಬಂಧ ಹೊಂದಿದೆ. ಮಾರ್ಗಶಿರ್ಷ ಶುಕ್ಲ ಪಕ್ಷ ಏಕಾದಶಿಯಂದು ಬರುವ ‘ಗೀತಾ ಜಯಂತಿ’ ಕೃಷ್ಣನು ಅರ್ಜುನನಿಗೆ ಶ್ರೀಮದ್‌ಭಗವದ್ಗೀತೆಯ ಉಪದೇಶ ಮಾಡಿದ ದಿನ.
೪. ಭಗವಾನ್ ಕೃಷ್ಣನ ತತ್ವದ ಬಣ್ಣವು ಯೋಗ ಮಾರ್ಗಕ್ಕೆ ಅನುಗುಣವಾಗಿ ಭಿನ್ನವಾಗಿರುತ್ತದೆ : ಭಕ್ತಿಮಾರ್ಗದ ಪ್ರಕಾರ ಶ್ರೀಕೃಷ್ಣನ ತತ್ವದ ಬಣ್ಣ ನೀಲಿಯಾಗಿರುತ್ತದೆ. ಜ್ಞಾನಮಾರ್ಗದ ಪ್ರಕಾರ ಶ್ರೀಕೃಷ್ಣನ ತತ್ವದ ಬಣ್ಣ ಹಳದಿಯಾಗಿರುತ್ತದೆ. ಕರ್ಮಮಾರ್ಗದ ಪ್ರಕಾರ ಶ್ರೀಕೃಷ್ಣನ ತತ್ವದ ಬಣ್ಣ ಹಳದಿ-ಕೇಸರಿ ಬಣ್ಣದ್ದಾಗಿದೆ.
೫. ಪ್ರಿಯವಾದ ನೈವೈದ್ಯ : ಬೆಣ್ಣೆ, ಮೊಸರವಲಕ್ಕಿ ಮತ್ತು ಶಿರಾ ಶ್ರೀಕೃಷ್ಣನಿಗೆ ಪ್ರಿಯವಾದ ತಿನಿಸುಗಳು. ಉತ್ತರ ಭಾರತದ ವಿವಿಧ ದೇವಾಲಯಗಳಲ್ಲಿ ೫೬ ಭೋಗಗಳನ್ನು (ವಿವಿಧ ಸಿಹಿತಿಂಡಿಗಳು) ಶ್ರೀಕೃಷ್ಣನಿಗೆ ಅರ್ಪಿಸಲಾಗುತ್ತದೆ.
೬. ಆಯುಧಗಳು : ಸುದರ್ಶನ್ ಚಕ್ರ ಮತ್ತು ಪಾಂಚಜನ್ಯ ಎಂಬ ಶಂಖ ಅವನ ಆಯುಧಗಳಾಗಿವೆ.
ಸಂಬಂಧಿಸಿದ ದೇವಾಲಯಗಳು ಮತ್ತು ಜಾಗೃತ ದೇವಾಲಯಗಳು : ಗೋಕುಲ, ವೃಂದಾವನ, ಮಥುರೆ, ದ್ವಾರಕೆ ಮತ್ತು ಜಗನ್ನಾಥಪುರಿ ಭಗವಾನ್ ಕೃಷ್ಣನಿಗೆ ಸಂಬಂಧಿಸಿದ ದೇವಾಲಯಗಳಾಗಿವೆ. ಕೇರಳದ ಗುರುವಾಯೂರ್ ದೇವಸ್ಥಾನ, ಉಡುಪಿಯ ಶ್ರೀಕೃಷ್ಣ ದೇವಸ್ಥಾನ ಇವು ಕೃಷ್ಣನ ಜಾಗೃತ ದೇವಾಲಯಗಳು.
ಶ್ರೀಕೃಷ್ಣನ ವಿವಿಧ ಹೆಸರುಗಳು : ಕನ್ಹಯ್ಯ, ಕಾನ್ಹಾ, ಶ್ಯಾಮ್‌ಸುಂದರ, ಮುರಳೀಧರ, ಗಿರಿಧರ, ಕೇಶವ, ಮಾಧವ, ಮೋಹನ, ಮನಮೋಹನ, ಬನ್ಸಿವಾಲಾ, ಮಖಾಂಚೋರ, ರಾಧೇಶ್ಯಾಮ್, ಗೋವಿಂದ, ಗೋಪಾಲ, ಮುರಾರಿ, ಕೃಷ್ಣ, ದೇವಕೀನಂದನ, ಯಶೋದಾನಂದನ, ನಂದನಂದನ, ವಾಸುದೇವ, ದ್ವಾರಕಾಧೀಶ, ತ್ರಿಲೋಕನಾಥ, ಬಾಂಕೇಬಿಹಾರಿ, ಚಕ್ರಧರ, ನಂದಕಿಶೋರ, ಲಡ್ಡುಗೋಪಾಲ ಮುಂತಾದ ಅನೇಕ ಹೆಸರುಗಳು ಪ್ರಸಿದ್ಧವಾಗಿವೆ. ದೇವಕೀ, ಯಶೋದಾ ಮತ್ತು ನಂದರಾಜರ ಮಗನಾಗಿ ಅವನಿಗೆ ಕ್ರಮವಾಗಿ ದೇವಕೀನಂದನ, ಯಶೋದಾನಂದನ ಮತ್ತು ನಂದನಂದನ ಎಂಬ ಹೆಸರುಗಳು ಬಂದವು.
ವಸುದೇವ ಶ್ರೀಕೃಷ್ಣನ ಜನ್ಮ ತಂದೆ. ದೇವಕೀ ಶ್ರೀಕೃಷ್ಣನಿಗೆ ಜನ್ಮ ನೀಡಿದ ತಾಯಿ. ವಸುದೇವನು ಶ್ರೀಕೃಷ್ಣನನ್ನು ಮಥುರೆಯಿಂದ ಗೋಕುಲಕ್ಕೆ ಕರೆದೊಯ್ದಾಗ, ನಂದರಾಜ ಮತ್ತು ಯಶೋದೆ ಶ್ರೀಕೃಷ್ಣನನ್ನು ಪಾಲನೆ ಮಾಡಿದರು. ಆದ್ದರಿಂದ ಯಶೋದಾ ಶ್ರೀಕೃಷ್ಣನ ಸಾಕು ತಾಯಿ ಮತ್ತು ನಂದರಾಜ ಸಾಕು ತಂದೆಯಾದರು. ಆದ್ದರಿಂದ, ಶ್ರೀಕೃಷ್ಣನು ವಸುದೇವ, ದೇವಕಿ, ಯಶೋದಾ ಮತ್ತು ನಂದರಾಜರ ಮಗನೂ ಆಗಿದ್ದನು. ಶ್ರೀಕೃಷ್ಣ ವಸುದೇವನ ಮಗನಾಗಿರುವುದರಿಂದ ಅವನನ್ನು ‘ವಸುದೇವಸುತ’ ಎಂದೂ ಕರೆಯಲಾಗುತ್ತದೆ.
ಕೊಳಲನ್ನು ಮುರಳಿ ಎಂದೂ ಕರೆಯುವುದರಿಂದ ಅವನನ್ನು ‘ಮುರಳೀಧರ’ ಎಂದೂ ಕರೆಯುತ್ತಾರೆ. ಶ್ರೀಕೃಷ್ಣನು ಗೊಲ್ಲನಾಗಿ ಹಸುಗಳನ್ನು ರಕ್ಷಿಸಿದ್ದರಿಂದ ಅವನಿಗೆ ‘ಗೋಪಾಲ’ ಎಂಬ ಹೆಸರು ಬಂದಿತು. ಭಗವಾನ ಶ್ರೀಕೃಷ್ಣನನ್ನು ‘ಗೋವಿಂದ’ ಎಂದು ಕರೆಯಲಾಗುತ್ತದೆ, ಏಕೆಂದರೆ ಅವನು ಪ್ರತಿಯೊಂದು ಪ್ರಾಣಿಯ ಹೃದಯದಲ್ಲಿ ಆನಂದದ ರೂಪದಲ್ಲಿ ವಾಸಿಸುತ್ತಾನೆ. ಶ್ರೀಕೃಷ್ಣನು ಎಲ್ಲರ ಇಂದ್ರಿಯಗಳ ಅಂತಿಮ ಮಾರ್ಗದರ್ಶಿ. ಅದಕ್ಕಾಗಿಯೇ ಅವರನ್ನು ‘ಹೃಷಿಕೇಶ’ ಎಂದು ಕರೆಯಲಾಗುತ್ತದೆ. ‘ಹೃಷಿಕ್’ ಎಂದರೆ ಇಂದ್ರಿಯಗಳು. ಅವುಗಳ ಈಶ (ಒಡೆಯ) ಅಂದರೆ ಅವನೇ ಹೃಷಿಕೇಶ.
ಆಧಾರ : Sanatan.org/kannada
ಸಂಗ್ರಹ :ಶ್ರೀ. ವಿನೋದ್ ಕಾಮತ್
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : 9342599299 )
*ಅದ್ದೂರಿಯಾಗಿ ಜರುಗಿದ ʼಆಸ್ಟ್ರಲ್ ಸ್ಟಾರ್ ಕಿಡ್ಸ್ ಮತ್ತು ಆಸ್ಟ್ರಲ್ ಮಮ್ಮಿ & ಮೀʼ ಫ್ಯಾಷನ್ ಶೋ*

ಶ್ರೀ ಕಾಡು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ
ಶ್ರೀಕೃಷ್ಣನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ಇವತ್ತು ಶ್ರೀಕೃಷ್ಣ ಜನ್ಮಾಷ್ಟಮಿ.ಈ ಹಬ್ಬವನ್ನು ದೇಶ – ವಿದೇಶಗಳಲ್ಲೂ ಅತ್ಯಂತ ಭಕ್ತಿ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ.ಶ್ರೀಕೃಷ್ಣನು ವಿಷ್ಣು ದೇವನ 8ನೇ ಅವತಾರವಾಗಿದ್ದು,ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಭೂಮಿಯಲ್ಲಿ ಜನಿಸಿದರು ಎಂದು ಪ್ರತೀತಿ. ಈ ದಿನವನ್ನೇ ನಾವು ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ.ಶ್ರೀಕೃಷ್ಣ ಜನ್ಮಾಷ್ಟಮಿ ದಿನದ ಪೂಜೆಯು ಮನೆಗೆ ಶಾಂತಿಯನ್ನು, ಸಮೃದ್ಧಿಯನ್ನು, ಸಂತಾನ ಭಾಗ್ಯವನ್ನು ಮತ್ತು ಉತ್ತಮ ಆರೋಗ್ಯವನ್ನು ತರುತ್ತದೆ ಎನ್ನುವ ನಂಬಿಕೆಯಿದೆ.
ಮಕ್ಕಳು ಕೃಷ್ಣನನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.ಕೃಷ್ಣನ ಜೀವನ ಚರಿತ್ರೆಯಿಂದ ಮಕ್ಕಳಿಗೆ ಜೀವನದ ಮೌಲ್ಯವನ್ನು ತಿಳಿಸಬಹುದು.ಈ ಹಿನ್ನೆಲೆಯಲ್ಲಿ ಬಹುತೇಕ ತಾಯಿಯವರು ದೇವಕಿ ನಂದನ ಕೃಷ್ಣನ ವೇಷದಲ್ಲಿ ತಮ್ಮ ಮಕ್ಕಳಿಗೆ ವೇಷಭೂಷಣ ತೋಡಿಸಿ ಶೃಂಗರಿಸುತ್ತಾರೆ.ಮಕ್ಕಳಿಗೆ ಕೃಷ್ಣ ವೇಷ ತೊಡಿಸಿದಾಗ ಆ ನಿಷ್ಕಲ್ಮಷ ಮನಸ್ಸಿನ ಮಗು ಥೇಟ್ ಭಗವಾನ್ ಸ್ವರೂಪದಂತೆಯೇ ಕಾಣುವುದು.ಅದ್ರಂತೆ ಬೆಂಗಳೂರಿನ ವಿದ್ಯಾರಣ್ಯಪುರದ ಚಿಕ್ಕಬೆಟ್ಟಹಳ್ಳಿಯ ದಿಲೀಪ್ ಕುಮಾರ್ ಬಿ.ಜೆ ಹಾಗೂ ಅರುಣಾ ಶಿರಗುಪ್ಪಿ ಪುತ್ರ ಲಿಶಾನ್ ಡಿ ಜೈನ್ ಗೆ ಕೃಷ್ಣನ ಕಲರ್ ಪುಲ್ ಡ್ರೇಸಿಂಗ್ ಮಾಡಿದ್ದು,ಮುದ್ದು ಮುದ್ದಾಗಿ ಕಂಗೋಳಿಸುತ್ತಿದ್ದಾನೆ.
ಲಿಶಾನ್ ಶ್ರೀಕೃಷ್ಣನಾಗಿ ಜೋಕಾಲೆಯಲ್ಲಿ ಒಂದೆಡೆ ತೂಗುತ್ತಿದ್ದರೇ,ಗೋಪಿಕೆಯರಾದ ಅದ್ವಿಕಾ ಹಾಗೂ ಭುವಿಕಾ ಜೊತೆ ತುಂಟಾಟವಾಡುತ್ತಿದ್ದಾನೆ.ಹೂವಿನ ಪೇಟಾ ಅಥವಾ ರೂಮಾಲು ತೊಟ್ಟು ತಲೆಗೆ ನವಿಲು ಗಿರಿ ಇಟ್ಟುಕೊಂಡು ಮಿಂಚುತ್ತಿದ್ದಾರೆ.ಮತ್ತೊಂದೆಡೆ ಬೆಣ್ಣೆ ಕಡೆಯುವ ಮುರಾರಿ ವೇಷದಲ್ಲಿ ಲಿಶಾನ್ ಮಿಂಚಿದನು.ಈ ಪೋಟೋಶೂಟ್ ನ್ನು ಫ್ಯಾಷನ್ ಫಿಕ್ಸೆಲ್ ಸ್ಟುಡಿಯೋದಲ್ಲಿ ಶೂಟ್ ಮಾಡಲಾಗಿದೆ.
ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಅಂತಗಂಗ ಭಕ್ತರಾದ ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ರಾಮದುರ್ಗ ಮಾಧವೇಶಾಚಾರ್ಯರ ಆರಾಧನಾ ಮಹೋತ್ಸವ “
17.08.2025 ಭಾನುವಾರ – ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಅಂತಗಂಗ ಭಕ್ತರಾದ ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ರಾಮದುರ್ಗ ಮಾಧವೇಶಾಚಾರ್ಯರ ಆರಾಧನಾ ಮಹೋತ್ಸವ ”

” ಪರಮ ಭಾಗವತೋತ್ತಮರ ಪ್ರಿಯರೂ; ಪರಮ ವಿರಕ್ತರೂ; ಶ್ರೀ ರುದ್ರದೇವರ ಅಂಶ ಸಂಭೂತರೆಂದು ಖ್ಯಾತರೂ, ಶತಾಯುಷಿಗಳೂ ಆದ ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ರಾಮದುರ್ಗ ಮಾಧವೇಶಾಚಾರ್ಯರು ”
” ಪರಮ ಭಾಗವತೋತ್ತಮರು = ಶ್ರೀ ವಾಯುದೇವರು ”
” ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ರಾಮದುರ್ಗ ಮಾಧವೇಶಾಚಾರ್ಯರ ಸಂಕ್ಷಿಪ್ತ ಮಾಹಿತಿ ”
ಹೆಸರು :
ಶ್ರೀ ಮಾಧವೇಶಾಚಾರ್ಯರು
ತಂದೆ :
ಪೂಜ್ಯ ಶ್ರೀ ಶ್ರೀನಿವಾಸಾಚಾರ್ಯರು
ತಾಯಿ :
ಸಾಧ್ವೀ ರಮಾಬಾಯಿ
ಕಾಲ :
ಕ್ರಿ ಶ 1883 – 1984
ಅವತಾರ :
ಶಾಲಿವಾಹನ ಶಕೆ 1805 ಭಾದ್ರಪದ ಋಷಿ ಪಂಚಮೀ ( 1883 )
” ವಿದ್ಯಾಭ್ಯಾಸ ”
ಶ್ರೀ ಮಾಧವೇಶಾಚಾರ್ಯರು ಅವರ ತಂದೆಯವರಲ್ಲಿಯೇ ವ್ಯಾಕರಣ ಮತ್ತು ಸಮಗ್ರ ದ್ವೈತ ವೇದಾಂತವನ್ನು ಅಭ್ಯಾಸ ಮಾಡಿದರು.
” ಸಂಗೀತದ ವಿದ್ಯಾ ಗುರುಗಳು ”
ಸ್ವರಸಾಮ್ರಾಟ್ ಶ್ರೀ ಬಾಳಕೃಷ್ಣ ಬುವಾ., ಈಚಲಕರಂಜಿ
ಶ್ರೀ ಶ್ಯಾಮಸುಂದರದಾಸರು……
ಸಾಧಕರನು ಕರೆದು ಸಾದರದಲಿ ಮುಕ್ತಿ ।
ಹಾದಿಯಿದೆಂದು ಬೋಧಿಸಿ ಕೋಲೆ ।
ಹಾದಿಯಿದೆಂದು ಬೋಧಿಸದಂಥ ನಮ್ಮ ।
ಮಾಧವೇಶಾಚಾರ್ಯರ ಬಲಗೊಂಬೆ ಕೋಲೆ ।।
ನಿರ್ದೋಷ ಭಕ್ತಿಯಿಂದ ಮನಸ್ಸು ಶುದ್ಧಿ.
ಭಕ್ತಿ ದ್ವಾರ ಮುಕ್ತಿ.
ಮುಕ್ತಿ ಸಾಧ್ಯ.
ಭಕ್ತಿಯಿಂದ ಸದ್ಗತಿ ಎಂಬುದು ಶ್ರುತಿ ಸಿದ್ಧ.
ಭಕ್ತಿಯಿಂದ ಶ್ರೀ ಹರಿ ಪರಮಾತ್ಮನನ್ನು ಸರ್ವ ಕಾಲದಲ್ಲಿ ಪೂಜಿಸುವುದರಿಂದ ಜನನ – ಮರಣಾದಿ ದುಃಖ ಭಯಗಳ ಪರಿಹಾರ.
ಇದೇ ವಿಷಯವನ್ನು ಶ್ರೀ ಶ್ಯಾಮಸುಂದರದಾಸರು….
” ಮುಕ್ತಿ ಸಾಧನೆಗೆ ಭಕ್ತಿಯೇ ಹಾದಿ ”
ಎಂದು ಹೇಳುತ್ತಾ, ಈ ಹಾದಿಗೆ ಮಾರ್ಗದರ್ಶಕರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಮಾಧವೇಶಾಚಾರ್ಯರನ್ನು ಸ್ಮರಿಸಿ ನಮಸ್ಕರಿಸಿದ್ದಾರೆ.
ಶ್ರೀ ವಾಯುದೇವರನ್ನು ಉಪಾಸಿಸಿ ಅವರ ಅನುಜ್ಞೆಯಿಂದ ಅಲ್ಲಲ್ಲೇ ಇರತಕ್ಕ ಶ್ರೀ ಹರಿ ಸರ್ವೋತ್ತಮನನ್ನು ಸ್ಮರಿಸಬೇಕು.
ಕಾಲ ಕಾಲದಲ್ಲಿಯೂ ಸ್ಮರಣೆ ಮಾಡಬೇಕು.
ಹೀಗೆ ಅನುಸರಿಸಿದಲ್ಲಿ ಅನಿಷ್ಟ ನಿವೃತ್ತಿ, ಇಷ್ಟ ಪ್ರಾಪ್ತಿಯಾಗುವುದಲ್ಲದೆ ಸಂತತ ಶ್ರೀ ಹರಿ ಪರಮಾತ್ಮನ ಸ್ಮರಣೆಯಿಂದ ” ಮೋಕ್ಷ ಪಥ ” ಪಿಡಿದು, ” ಮುಕುಂದನ ದರ್ಶನ ” ಪಡೆಯುತ್ತಾನೆ.
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಮಾಧವೇಶಾಚಾರ್ಯರು ಭಾಗವತೋತ್ತಮರು.
ಶ್ರೀ ಹರಿಯ ಪ್ರೀತಿ ಪಾತ್ರರು.
ಜ್ಞಾನ – ಭಕ್ತಿ – ವೈರಾಗ್ಯದ ಸಾಕಾರ ಮೂರ್ತಿಗಳು.
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಮಾಧವೇಶಾಚಾರ್ಯರ ನಡೆ ನುಡಿಗಳಲ್ಲಿ ಭಾಗವತ ಧರ್ಮ ಅಡಿಗಡಿಗೆ ಕಾಣುತ್ತೇವೆ.
” ವೈರಾಗ್ಯ ನಿಧಿಗಳು ”
ಒಮ್ಮೆ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಮಾಧವೇಶಾಚಾರ್ಯರು ಶ್ರೀ ಸತ್ಯಧ್ಯಾನತೀರ್ಥರ ಸನ್ನಿಧಿಯಲ್ಲಿದ್ದಾಗ ನಡೆದ ಘಟನೆ ಹೀಗಿದೆ….
ಸ್ಥಳ :
ಕಾಶಿ ಕ್ಷೇತ್ರದ ಶ್ರೀ ಮಧ್ವಾಶ್ರಮ
ದಿನ :
ಕಾರ್ತೀಕ ಶುದ್ಧ ಏಕಾದಶೀ
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಮಾಧವೇಶಾಚಾರ್ಯರು ರಾಗಮಾಲಿಕೆಯಿಂದ ದ್ವಾದಶ ಸ್ತೋತ್ರ ರಾಗ ಆಲಾಪನೆ ಮಾಡಿದರು.
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಮಾಧವೇಶಾಚಾರ್ಯರ ಸಂಗೀತ ಮಾಧುರ್ಯಕ್ಕೆ – ಸಂಗೀತದ ಕಲೆಗೆ ಶ್ಯಾನುಭೋಗ ಮಠದ ಸತ್ಯಧ್ಯಾನತೀರ್ಥರು ಪರಮ ಸಂತುಷ್ಟರಾಗಿ ಶ್ರೀ ಆಚಾರ್ಯರಿಗೆ ಬಂಗಾರದ ಕಡಗ ಹಾಕಿ ಆಶೀರ್ವದಿಸಿದರು.
ಮರುದಿನ ಪ್ರಾತಃ ಕಾಲದಲ್ಲಿ ಸತ್ಯಾಧ್ಯಾನರ ಸಮಕ್ಷಮದಲ್ಲಿ ಶ್ರೀ ಮಾಧವೇಶಾಚಾರ್ಯರು ಆ ಬಂಗಾರದ ಕಂಕಣವನ್ನು ಸತ್ಪಾತ್ರನಾದ ಬ್ರಾಹ್ಮಣನಿಗೆ ಕೃಷ್ಣಾರ್ಪಣ ಬುದ್ಧಿಯಿಂದ ದಾನ ಮಾಡಿದರು.
ಶ್ರೀ ಮಾಧವೇಶಾಚಾರ್ಯರು ಎಂಥಾ ವೈರಾಗ್ಯ ನಿಧಿಗಳು ಎನ್ನುವುದಕ್ಕೆ ಇದು ಜ್ವಲಂತ ನಿದರ್ಶನ!
” ಶ್ರೀ ಆಚಾರ್ಯರ ಉಪದೇಶಾಮೃತವನ್ನು ಭಕ್ತರಿಗಾಗಿ “…….
” ಪರಮಪೂಜ್ಯ ಶ್ರೀ ಮಾಧೇವೇಶಾಚಾರ್ಯರ ವದನಾರವಿಂದದಲ್ಲಿ ಹೊರ ಹೊಮ್ಮಿದ ಏಕಾದಶೀ ಮಹಾತ್ಮೆ…..
” ಹನ್ನೊಂದು ಇಂದ್ರಿಯ ನಿಗ್ರಾಕ್ಕಾಗಿ ಹನ್ನೊಂದನೇ ದಿನದ ವ್ರತವನ್ನು ಶ್ರೀ ಸರ್ವಜ್ಞಾಚಾರ್ಯರು ನಿರೂಪಿಸಿದ್ದಾರೆ.
ಅಂಬರೀಷ ಕಾರ್ತೀಕ ಶುದ್ಧದಿಂದ ಏಕಾದಶೀ ವ್ರತವನ್ನು ಪ್ರಾರಂಭಿಸಿ 24 ಏಕಾದಶಿಯಲ್ಲಿ ಅಪರೋಕ್ಷ ಹೊಂದಿದನು.
ದಶಮೀ ದಿವಸ ಸಾತ್ವಿಕ ಆಹಾರ ಸ್ವೀಕರಿಸಬೇಕು.
ಏಕಾದಶೀ ದಿವಸ ಲೌಕಿಕ ಕಾರ್ಯ ಮಾಡಬಾರದು.
ಏಕಾದಶ ಇಂದ್ರಿಯಗಳಿಂದ ಭಗವತ್ಕಾರ್ಯವನ್ನೇ ಮಾಡಬೇಕು.
ಪರೀಕ್ಷಾರ್ಥ ದೂರ್ವಾಸರು ಅಂಬರೀಷನಲ್ಲಿ ಅತಿಥಿಗಳಾಗಿ ಬಂದು ಪಾರಣಿಗೆ ವ್ಯಾಳೆ ಮೀರಿಸಿದರು.
ಶಾಸ್ತ್ರದಲ್ಲಿ ಹೇಳಿದ್ದು ದೇವರ ಆಜ್ಞಾಯೆಂದು ಸರಿಯಾದ ವ್ಯಾಳೆಗೆ ತೀರ್ಥ ತೆಗೆದುಕೊಂಡು ಪಾರಣಿ ಮುಗಿಸಿದನು.
ದೂರ್ವಾಸರು ಶ್ಯಾಪ ಕೊಡಲು ಶ್ರೀ ವಿಷ್ಣುವಿನ ಸುದರ್ಶನವು ದೂರ್ವಾಸರ ಬೆನ್ನು ಹತ್ತಿತು.
” ಸುದರ್ಶನ ” ಯೆಂದರೆ …..
” ಸಚ್ಛಾಸ್ತ್ರ ಜ್ಞಾನ ಅಥವಾ ಅಪರೋಕ್ಷ “.
ಇದರಂತೆ ಸರ್ವರೂ 24 ತಾಸು ಈದಿನ ಭಗವನ್ಮಹಾತ್ಮೆಯಲ್ಲೇ ಕಾಲ ಕಳೀಬೇಕು.
ಲೌಕಿಕ ಕಾರ್ಯಕ್ಕೆ ಆಸ್ಪದ ಕೊಡಬಾರದು.
ರಾತ್ರಿ 12 ಘಂಟೆ ನಂತರ ಹರಿವಾಣ ಸೇವಾ.
1. ರಾತ್ರಿ ನಿದ್ರೆ ಬ್ಯಾಡಾ
2. ಹಗಲು ಅನ್ನ ಬ್ಯಾಡಾ
ಏಕಾದಶೀ ದಿನ ಬಿಟ್ಟು ಉಳಿದ ದಿನಗಳಲ್ಲಿ ಈ ಪ್ರಕಾರ ನಿಯಮದಿಂದ ಇರತಕ್ಕದ್ದು, ನಡೆಯತಕ್ಕದ್ದು.
1. ಆಹಾರದ ವೇಳೆ 3 ತಾಸು
2. ನಿದ್ರಾ 5 ತಾಸು
3. ಉದ್ಯೋಗ 8 ತಾಸು
4. ದೇವರ ಕೆಲಸ 8 ತಾಸು
ಹೀಗೆ ನಡೆದರೆ ಶ್ರೀ ಹರಿ ಪರಮಾತ್ಮನ ಸಮೀಪದಲ್ಲಿ ವಾಸಕ್ಕೆ ಆಸ್ಪದವಾಗುವದು.
” ಉಪಾಸನಾಧಿಕಾರ ” ಬರುವುದು ಎಂದರ್ಥ!!
” ಮಹತ್ವದ ಘಟನೆಗಳು ”
1. ಆದವಾನಿ, ಧಾರವಾಡ ( ಶ್ರೀ ರಾಯರಿಗೆ ಮತ್ತು ಶ್ರೀ ಪ್ರಾಣದೇವರಿಗೆ ), ಬೆಳಗಾವಿ, ಶ್ರೀ ಕ್ಷೇತ್ರ ಗಯಾ ( ವಿಷ್ಣು ಪಾದಕ್ಕೆ ), ಗದಗ ಮುಂತಾದ ಕಡೆ ಶ್ರೀ ಹರಿಗೆ ಕೋಟಿ ತುಳಸೀ ಅರ್ಚನೆ ಮಾಡಿದರು.
2. ವಾಸ ಪ್ರಸ್ಥಾಶ್ರಮಿಗಳಿಗಾಗಿ ” ಮುಮುಕ್ಷುಮ್ ” ಯೆಂಬ ಆಶ್ರಮವನ್ನು ರಾಯಚೂರಿನ ಹತ್ತಿರ ಇರುವ ಕೃಷ್ಣಾ ಸ್ಟೇಷನ್ ಹತ್ತಿರ ಸ್ಥಾಪಿಸಿದರು.
3. ಬೆಳಗಾವಿಯಲ್ಲಿ ಸಂಸಾರದಲ್ಲಿ ವಿರಕ್ತರಾದ ಜನರ ಮನಸ್ಸಿಗೆ ಶಾಂತಿ ಉಂಟು ಮಾಡುವುದಕ್ಕಾಗಿ ” ಹರೇ ರಾಮಾಶ್ರಮ ” ಸ್ಥಾಪಿಸಿದರು.
4. ಶ್ರೀ ವರದೇಂದ್ರತೀರ್ಥರ ಸನ್ನಿಧಾನದಲ್ಲಿ ” ಸಾರೋದ್ಧಾರ ಪ್ರವಚನ ”
5. ಶಿರವಾರ, ಕುರುಕುಂದಿಯಲ್ಲಿ ” ಸಂಕ್ಷಿಪ್ತ ಶಾಸ್ತ್ರಾರ್ಥ ಪ್ರಕರಣ ” ಪ್ರವಚನ
6. ಶಿರವಾರ ಮತ್ತು ದೇವದುರ್ಗದಲ್ಲಿ ” ವೈರಾಗ್ಯ ಪ್ರಕರಣ ಗುಣ ನಿವೃತ್ತಿ ” ಕುರಿತು ಪ್ರವಚನ
7. ಪೂಜ್ಯ ಸುಳಾದಿ ಕುಪ್ಪೆರಾಯರು ಶ್ರೀ ಆಚಾರ್ಯರ ” ಸಾರೋದ್ಧಾರದ ಸಾರ ” ವನ್ನು ಬರೆದು ಶ್ರೀ ಆಚಾರ್ಯರಿಗೆ ಕ್ರಿ ಶ 1950 – 51 ರಲ್ಲಿ ತೋರಿಸಿದರು.
8. ಶ್ರೀ ಕ್ಷೇತ್ರ ಕುಸಮೂರ್ತಿಯ ಶ್ರೀ ಕೃಷ್ಣ ದ್ವೈಪಾಯನರ ಮೂಲ ಬೃಂದಾವನ ಸನ್ನಿಧಾನದಲ್ಲಿ ” ಸಂಕ್ಷೇಪ ಶಾಸ್ತ್ರಾರ್ಥ ಪ್ರಕರಣ ಮತ್ತು ಧರ್ಮೋಪದೇಶ ಪ್ರಕರಣವನ್ನು ಹೇಳಿದರು.
9. ಕ್ರಿ ಶ 1951 – 52 ರಲ್ಲಿ ಕೃಷ್ಣಾದಲ್ಲಿ ” ಸಾರೋದ್ಧಾರದ ಗುರು ವಿಚಾರಣ ಪ್ರಕರಣ, ಅಪರೋಕ್ಷ ಗುಣ ನಿವೃತ್ತಿ ಪ್ರಕರಣವನ್ನು ಮತ್ತು ಬಿಂಬೋಪಾಸನ ಪ್ರಕರಣವನ್ನು ಹೇಳಿದರು.
10. ಛಾವಣಿ ಮುಕ್ಕಾಮಿಯಲ್ಲಿ ” ಇಂದ್ರಿಯ ಜಯ ಪ್ರಕರಣ ” ವನ್ನು ಹೇಳಿದರು.
11. ಕ್ರಿ ಶ 1958 ರಲ್ಲಿ ಶ್ರೀ ಅಥಣಿ ಭೀಮದಾಸರೊಂದಿಗೆ ಕಾಶಿ ಯಾತ್ರೆ
12. ಕ್ರಿ ಶ 1960 – 61 ರಲ್ಲಿ ಅಥಣಿ ಶ್ರೀ ರಾಯರ ಮಠವನ್ನು ಸ್ವೀಕರಿಸದ್ದಾರೆ
13. ಕ್ರಿ ಶ 1972 ರಲ್ಲಿ ಅಥಣಿ ಶ್ರೀ ರಾಯರ ಮಠವನ್ನು ಶ್ರೀ ಚಚಡಿಯವರಿಗೆ ಒಪ್ಪಿಸಿ ಕಾಶಿಗೆ ಪ್ರಯಾಣ.
14. ಕ್ರಿ ಶ 1983 ರಲ್ಲಿ ಗಂಗಾ ನದಿಗೆ ಮಹಾಪುರ ಬಂದು ಊರಲ್ಲಿ ನೀರು ಹೊಕ್ಕಿದ್ದರಿಂದ ಹನುಮಾನ್ ಘಾಟಿನ ಶ್ರೀ ಕೃಷ್ಣ ಮಂದಿರದಲ್ಲಿ ವಾಸಿಸುತ್ತಿದ್ದ ಪೂಜ್ಯ ಆಚಾರ್ಯರ ಪಲ್ಲಂಗದ ಬುಡಕ್ಕೆ ಗಂಗಾ ಪ್ರವಾಹ ಉಕ್ಕೇರಿ ಬಂತು.
ಅವರು ಅಲ್ಲಿಯೇ ಗಂಗಾದೇವಿಯನ್ನು ಪೂಜಿಸಿ, ಪ್ರಾರ್ಥಿಸಿ ಸ್ನಾನ ಮಾಡಿದರು.
ಪರಮ ವಿರಕ್ತರೂ, ಜ್ಞಾನಿಗಳೂ, ಶ್ರೀ ಪರಮಾತ್ಮನಾದ ಬಿಂದೂ ಮಾಧವನ ಏಕಾಂತ ಭಕ್ತರಾದ ಶ್ರೀ ಮಾಧವೇಶಾಚಾರ್ಯರ ದರ್ಶನಕ್ಕಾಗಿ ಭಾಗೀರಥಿ ತಾನೇ ಬಹು ಸಂಭಮದಿಂದ ಉಕ್ಕೇರಿ ಬಂದಳು.
ಕಾರಣ ಶ್ರೀ ಮಾಧವೇಶಾಚಾರ್ಯರು ” ಶ್ರೀ ರುದ್ರದೇವರ ಅಂಶ ಸಂಭೂತ ” ರೆಂದು ಹಿರಿಯರ ಅಭಿಪ್ರಾಯವಿದೆ!!
” ಸಮಕಾಲೀನರು ”
ಶ್ರೀ ಶ್ಯಾಮಸುಂದರದಾಸರು, ಶ್ರೀ ಸುಳಾದಿ ಕುಪ್ಪೆರಾಯರು, ಶ್ರೀ ಉಪ್ಪಲಿ ಗುರುಮಧ್ವರಾಯರು, ಶ್ರೀ ಕಾಶಿದಾಸರು ಮತ್ತು ನಮ್ಮೇಳರ ಚಿರ ಪರಿಚಿತರಾದ ವಿದ್ವಾನ್ ಗಯಾ ರಾಮಾಚಾರ್ಯ ಮಂತ್ರಾಲಯ.
” ನಿರ್ಯಾಣ ”
ಶಾಲಿವಾಹನ ಶಕೆ 1906 ಶ್ರಾವಣ ಬಹುಳ ನವಮಿ ಮೇಲೆ ದಶಮಿ ಬಂದಾಗ ಮಧ್ಯಾಹ್ನ 4 ಗಂಟೆಗೆ ಕಾಶಿಯ ಹನುಮಾನ್ ಘಾಟಿನಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ಹರಿ ನಾಮ ಸ್ಮರಣೆ ಮಾಡುತ್ತಾ ತಮ್ಮ ಇಹಲೋಕ ಯಾತ್ರೆ ಮುಗಿಸಿ ” ವೈಕುಂಠಕ್ಕೆ ಪ್ರಯಾಣ ” ಬೆಳೆಸಿದರು ( ಕ್ರಿ ಶ 1984 ).
ಶ್ರೀ ಆಚಾರ್ಯರ ಉತ್ತರ ಕ್ರಿಯೆಗಳನ್ನು ಅವರ ಶಿಷ್ಯರಾದ ಶ್ರೀ ಟೋಣಪಿ ಗೋಪಾಲಾಚಾರ್ಯರು ನೆರವೇರಿಸಿದರು.
ಆಚಾರ್ಯ ನಾಗರಾಜು ಹಾವೇರಿ …
ಮಾಧವೇಶರು ಮಾಧವಾoಘ್ರಿ ಭಜಕರು !
ಮಾಧವೇಶರ ಭಕ್ತಿಯಿಂ ನೆನೆದರೆ !
ಮಾಧವ ವೆಂಕಟನಾಥ ಒಲಿವಾ !!
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
ರಕ್ಷಾಬಂಧನ: ಪರಸ್ಪರ ಸೌಹಾರ್ದ, ಭಾವೈಕ್ಯತೆ, ಏಕತೆಯ ಸ್ವರೂಪವಾಗಿ ನಮ್ಮೆಲ್ಲರ ಸದಾ ಸಂತೋಷವಾಗಿಡಲಿ
ಚಾಮರಾಜನಗರ: ರಕ್ಷಾಬಂಧನ ಭಾರತೀಯ ಸಂಸ್ಕೃತಿಯ ಮೇರು ತತ್ವ. ಪ್ರಪಂಚವೇ ಒಂದು ಕುಟುಂಬ ಎಂದು ಭಾವಿಸಿದ ಭಾರತೀಯ ಸನಾತನ ಧರ್ಮದ ಮೌಲ್ಯವನ್ನು ಜಗತ್ತಿಗೆ ಎಂದಿಗೂ ಬಿಂಬಿಸುತ್ತಿರುವುದು ಭಾರತವೆಂದು ಹೆಮ್ಮೆಯಿಂದ ಹೇಳಬಹುದು ಎಂದು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ನಗರದ ಜೈ ಹಿಂದ್ ಪ್ರತಿಷ್ಠಾನ ಹಾಗು ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ರಕ್ಷಾಬಂಧನವೂ ಸ್ನೇಹ ,ವಿಶ್ವಾಸ ,ನಂಬಿಕೆ ,ಗೌರವ ಪರಸ್ಪರ ಅರ್ಥ ಮಾಡಿಕೊಳ್ಳುವುದು ಹಾಗೂ ಬದುಕಿನ ಸಂಪೂರ್ಣ ಪೂರ್ಣತೆಯ ಶ್ರೇಷ್ಠ ಬಂಧನವಾಗಿದೆ. ಭಾರತದ ಪುರಾಣಗಳಲ್ಲಿ ಮಹಾಕಾವ್ಯಗಳಲ್ಲಿ ರಕ್ಷಾಬಂಧನದ ಅನೇಕ ಮಹತ್ವಪೂರ್ಣವಾದ ಮಾರ್ಗದರ್ಶನ ಮೌಲ್ವಿಕ ದರ್ಶನ ನಮಗೆ ದೊರಕುತ್ತದೆ. ಶ್ರೀ ಕೃಷ್ಣ ಪರಮಾತ್ಮ ಹಾಗೂ ದ್ರೌಪದಿಯ, ಕೃಷ್ಣ ಸುಧಾಮರ ಚಿತ್ರಣಗಳು ನಮಗೆ ಸದಾ ಸರಿದಾರಿಯಲ್ಲಿ ಹೋಗಲು ಸಹಕಾರಿಯಾಗಿದೆ. ರಕ್ಷಾಬಂಧನದ ಅರ್ಥಪೂರ್ಣವಾದ ತತ್ವವನ್ನು ಯುವಕರಿಗೆ ಮತ್ತು ಮನೆಮನೆಗಳಿಗೆ ತಲುಪಿಸುವ ಕಾರ್ಯವಾಗಬೇಕು .ಪ್ರತಿ ಮನೆಗಳಲ್ಲೂ ಮನಸ್ಸುಗಳು ಪ್ರೀತಿಯಿಂದ ಸ್ನೇಹದಿಂದ ಬೆಳೆಯುವ ವಾತಾವರಣ ಸೃಷ್ಟಿಯಾಗಬೇಕು. ಸಾಹಿತ್ಯದ ಚಿಂತನೆ ಪುರಾಣಗಳ! ಅರ್ಥ ಇತಿಹಾಸ ತಿಳಿಸುವ ಸಂಘಟನೆಗಳು ಹೆಚ್ಚಾಗಬೇಕು ಎಂದು ತಿಳಿಸಿದರು.
ರಕ್ಷಾಬಂಧನವನ್ನು ಕಟ್ಟುವ ಮೂಲಕ ಪರಸ್ಪರ ಸೌಹಾರ್ದ ,ಭಾವೈಕ್ಯತೆ ,ಏಕತೆಯ ಸ್ವರೂಪವಾಗಿ ರಕ್ಷೆಯು ನಮ್ಮೆಲ್ಲರನ್ನು ಸದಾ ಕಾಲ ಸಂತೋಷವಾಗಿ ಇಡಲಿ ಎಂದು ಶಾರದಾ ಅಭಿಯಾನದ ವತ್ಸಲಾ ರಾಜಗೋಪಾಲ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ ಶರಣ್ಯ ,ಶ್ರಾವ್ಯ ,ಸಿಂಚನ ,ಸಾನಿಕ ,ಮಾಲಾ, ಸರಸ್ವತಿ ಮುಂತಾದವರು ಉಪಸ್ಥಿತರಿದ್ದರು.
ಸಾಹಿತ್ಯ ಲೋಕದ ಅಪರೂಪದ ಹಾಗೂ ಜನಪ್ರಿಯವಾದ ಹೆಸರು ಟಿ ಪಿ ಕೈಲಾಸಂ.
ಚಾಮರಾಜನಗರ: ಕನ್ನಡ ಸಾಹಿತ್ಯ ಲೋಕದ ಅಪರೂಪದ ಹಾಗೂ ಜನಪ್ರಿಯವಾದ ಹೆಸರು ಟಿ ಪಿ ಕೈಲಾಸಂ. ಕನ್ನಡಕೊಬ್ಬನೆ ಕೈಲಾಸಂ ಕನ್ನಡಿಗರ ಹೆಮ್ಮೆಯೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಟಿಪಿ ಕೈಲಾಸಂ ಕೊಡುಗೆಗಳ ಕುರಿತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಕೈಲಾಸಂ ರವರ ನಾಟಕ ಮತ್ತು ಕವನಗಳ ರಚನೆ ವಿಶೇಷವಾದ ಕನ್ನಡ ಸಾಹಿತ್ಯದ ಅಮೂಲ್ಯ ಸಂಪತ್ತು. ಅವರ ನಾಟಕಗಳಲ್ಲಿ ವಿಡಂಬನೆ ,ಹಾಸ್ಯ ಹಾಗೂ ಮೌಲ್ಯಗಳ ಸಮಗ್ರ ಚಿಂತನೆ ಅಡಗಿದೆ. ಅವರ ಕವನಗಳು ಹಾಗೂ ನಾಟಕಗಳ ರಚನೆ ಕನ್ನಡ ಭಾಷಾ ಪ್ರಯೋಗದ ಹೊಸತನವಾಗಿದೆ. ಕೇಳಲು ಆಕರ್ಷಕವಾಗಿರುವ ಭಾಷೆ, ಹೆಸರುಗಳು ಅದರ ವಿಶೇಷವಾದ ಅರ್ಥಗಳು ,ಕನ್ನಡಿಗರ ಅಮೂಲ್ಯ ಆಸ್ತಿ. ಜಾರ್ಜ್ ಬರ್ನಾಡ್ ಷಾ ನಾಟಕಗಳಿಂದ ಪ್ರಭಾವಿತರಾಗಿ ಅದೇ ರೀತಿಯ ನಾಟಕ ರಚನೆಯನ್ನು ರಚಿಸಿದವರು . ಕಾನ್ಸ್ಟಂಟಿ ನೋಪಲ್ ಕವನವನ್ನು ಇಂಗ್ಲೀಷ್ ಸಂಗೀತಗಾರ ಹೊಸ ರಾಗದಲ್ಲಿ ಹಾಡಿದ್ದನ್ನು ಸವಾಲಾಗಿ ಸ್ವೀಕರಿಸಿ ಅದೇ ರಾಗದಲ್ಲಿ ಕೋಳಿಕೆ ರಂಗ ಹಾಡು ರಚಿಸಿ ಇಡೀ ಜಗತ್ತಿಗೆ ಕನ್ನಡ ಸಾಹಿತ್ಯದ ಹೊಸತನವನ್ನು ನೀಡಿ ನಿಬ್ಬೆರಗಾಗುವಂತೆ ಮಾಡಿದ ಕೈಲಾಸಂ ರವರ ಪ್ರತಿ ಸಾಹಿತ್ಯ ನಿರ್ಮಲವಾದ, ಹೃದಯಪೂರ್ವಕವಾದ ಅವರ ಹಾಸ್ಯ ಮನಸ್ಸಿಗೆ ಮುದ ನೀಡುತ್ತದೆ ಎಂದು ತಿಳಿಸಿದರು .
ಕೈಲಾಸಂರವರ ನಾಟಕಗಳಾದ ಟೊಳ್ಳುಗಟ್ಟಿ, ಬಹಿಷ್ಕಾರ ,ನಮ್ ಬ್ರಾಹ್ಮಣಿಕೆ, ಅಮ್ಮಾವ್ರ ಗಂಡ ,ಪೋಲಿ ಕಿಟ್ಟಿ, ವೈದ್ಯನ ವ್ಯಾದಿ ,ಹಾಗೆಯೇ ಕವನ ಸಂಕಲನಗಳಾದ ತಿಪ್ಪಾರಳ್ಳಿ, ಕೋಳಿಕೆ ರಂಗ, ನಂಜಿ ನನ್ನ ಅಪರಂಜಿ, ಕಾಶಿಗೆ ಹೋದ ನಮ್ ಭಾವ, ಬೋರನ ಬಾರ ಕನ್ನಡಿಗರ ಮನೆ ಮಾತಾಗಿದೆ ಎಂದರು.
ಬರಹಗಾರ ಎಸ್ ಲಕ್ಷ್ಮಿ ನರಸಿಂಹ ಕೈಲಾಸಂ ಬಗ್ಗೆ ಮಾತನಾಡಿ ಹಾಸ್ಯ ವಿಡಂಬನೆಯ ಮೂಲಕ ಸದಾ ಕಾಲ ನೆನೆಸಿಕೊಳ್ಳುವ ಕರ್ನಾಟಕ ಪ್ರಹಸನ ಪಿತಾಮಹರಾಗಿ ರಂಗಭೂಮಿಗೆ ಅಪಾರ ಕೊಡುಗೆಯನ್ನು ನೀಡಿದವರು. ಉನ್ನತ ಶಿಕ್ಷಣ ಪಡೆದ ಕೈಲಾಸಂ ರವರು ಉತ್ತಮ ಜ್ಞಾನಿಗಳು .ಕ್ರೀಡಾಪಟುಗಳು ಆಗಿದ್ದವರು. ಕನ್ನಡ ಸಾಹಿತ್ಯ ಲೋಕಕ್ಕೆ ಕೈಲಾಸಂ ರವರ ಸಾಹಿತ್ಯದ ನುಡಿಗಳು ಕನ್ನಡದ ನೋಡಿ ಮುತ್ತುಗಳಾಗಿ ಇದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ, ಮಹೇಶ್ ಗೌಡ ,ಪರಶಿವಪ್ಪ, ಮಂಜುನಾಥ್, ಮಾದೇವ ಶೆಟ್ಟಿ, ಲೋಕೇಶ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
