Home Blog Page 34

ರಾಜ್ಯದ ಎಲ್ಲಾ ಅಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ ನಿರ್ಮಾಣಕ್ಕೆ ಕ್ರಮ

ಹೃದಯಾಘಾತಗಳ ಬಗ್ಗೆ ಜನತೆ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು – ಸಚಿವ  ಡಾ.ಶರಣ್ ಪ್ರಕಾಶ್ ಪಾಟೀಲ್

 

 ಬೆಂಗಳೂರು, ಆಗಸ್ಟ್  18, (ಕರ್ನಾಟಕ ವಾರ್ತೆ) : ರಾಜ್ಯದಲ್ಲಿ  ಹೆಚ್ಚುತ್ತಿರುವ ಹೃದಯಾಘಾತಗಳ ಬಗ್ಗೆ  ಜನತೆ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು. ವ್ಯಾಯಾಮ, ಪ್ರಾಣಾಯಾಮ, ಆಹಾರಪದ್ಧತಿ  ಹಾಗೂ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡರೆ ಯಾವುದೇ ಸಮಸ್ಯೆ  ಬರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ  ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು.

 ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ  ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ   ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳದ ಬಗ್ಗೆ ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಜಯದೇವ ಆಸ್ಪತ್ರೆಯಲ್ಲಿ ಜನರು ಪ್ರತಿನಿತ್ಯ ಬಂದು ಹೃದಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರ  ಪ್ರಮಾಣ ಶೇ.25ರಷ್ಟು ಏರಿಕೆಯಾಗಿದೆ ಎಂದು  ಮಾಹಿತಿ ನೀಡಿದರು.

 ವಿಶೇಷವಾಗಿ ಹಾಸನ ಜಿಲ್ಲೆಯಲ್ಲಿ ಹೃದಯಘಾತಗಳ ಸಂಖ್ಯೆ ಹೆಚ್ಚಳವಾಗಿದೆ ಎಂಬ ಆತಂಕ ಜನರಲ್ಲಿ  ಮೂಡಿದೆ. ಇದು ತಪ್ಪು ಗ್ರಹಿಕೆ. ವಾಸ್ತವವಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸರಾಸರಿ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಶೇ.5ರಿಂದ 6ರಷ್ಟು ಪ್ರಕರಣಗಳು ಹೃದಯಾಘಾತಕ್ಕೆ ಸಂಬಂಧಿಸಿದವು. ಈ ವರ್ಷವು ಇಷ್ಟೇ ಪ್ರಮಾಣದಲ್ಲಿ ಇದೆ ಎಂದು ಸಚಿವರು ಹೇಳಿದರು.

 ಬದಲಾದ ಜೀವನಶೈಲಿ, ಅಧಿಕ ಒತ್ತಡ, ಬೊಜ್ಜು, ಮದ್ಯಪಾನ, ಧೂಮಪಾನ, ಡ್ರಗ್ಸ್ ಸೇವನೆ, ಕುಟುಂಬದ ಹಿನ್ನಲೆ ಇತ್ಯಾದಿ ಕಾರಣಗಳಿಂದ ಹೃದಯಘಾತಗಳು ಸಂಭವಿಸಿವೆ. ಯಾವುದೋ ಒಂದು ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಜನತೆ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು.

ಕೋವಿಡ್ ನಂತರ ಹೃದಯಘಾತ  ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಗುಮಾನಿಯೂ ಇದೆ. ವಾಸ್ತವವಾಗಿ ಇದಕ್ಕೂ ಅದಕ್ಕೂ ಸಂಬಂಧವೇ ಇಲ್ಲ. ಪ್ರತಿದಿನ ವ್ಯಾಯಾಮ, ಪ್ರಾಣಯಾಮ, ಸರಿಯಾದ ಸಮಯಕ್ಕೆ ನಿದ್ದೆ, ಒತ್ತಡ ಇಲ್ಲದಿರುವುದು, ಖಿನ್ನತೆ ಒಳಗಾಗದೆ ಸಮತೋಲನ ಕಾಯ್ದುಕೊಂಡರೆ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದು ಸಚಿವರು ಸಲಹೆ ಕೊಟ್ಟರು.

 ಈ ಪ್ರಕರಣಗಳ ಕುರಿತಂತೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಕೆ ಎಸ್ ರವೀಂದ್ರನಾಥ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾರ್ಯಪಡೆಯನ್ನು ಸಹ ರಚಿಸಿತ್ತು.  ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಜನರ ಊಹೆಗೂ  ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಜನರು ಮೊದಲು ವದಂತಿಗಳಿಗೆ ಕಿವಿಗೊಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ :

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಜೊತೆ ಕಡ್ಡಾಯವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ತೆರೆಯಬೇಕೆಂಬುದು ನಮ್ಮ  ಸರ್ಕಾರದ ಸಿದ್ದಾಂತವಾಗಿದೆ. ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಈ ಆಸ್ಪತ್ರೆಗಳು ಕಾರ್ಯಾರಂಭ ಮಾಡಿವೆ.

 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಸ್ಥಾಪನೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚನೆ ಕೊಟ್ಟಿದ್ದಾರೆ.  ಈ ನಿಯಮವನ್ನು ನಾವು ಈಗಾಗಲೇ ಅಳವಡಿಸಿಕೊಂಡು ಕಾರ್ಯಾರಂಭ ಮಾಡಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲೂ ಸೂಪರ್ ಸ್ಪೆಷಾಲಿಟಿ ಜೊತೆಗೆ ಟ್ರಾಮಾ  ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದರು.

 ಬೆಂಗಳೂರು- ಮೈಸೂರು, ಕಲಬುರಗಿ, ಹುಬ್ಬಳ್ಳಿಯ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಿದೆ. ಇದೇ ರೀತಿ ಬಾಗಲಕೋಟೆ, ಯಾದಗಿರಿ, ರಾಯಚೂರಿನಲ್ಲೂ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಾಗುವುದು. ಬೀದರ್, ಕೊಪ್ಪಳ, ಬೆಳಗಾವಿಯಲ್ಲಿ ಎರಡರಿಂದ ಮೂರು ತಿಂಗಳೊಳಗೆ ಈ ಆಸ್ಪತ್ರೆಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಪಾಟೀಲ್  ತಿಳಿಸಿದ್ದಾರೆ.

ನಂಜನಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಆರಂಭಿಸಲು ಕ್ರಮ : ದಿನೇಶ್ ಗುಂಡೂರಾವ್

ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) : ನಂಜನಗೂಡು  ತಾಲ್ಲೂಕು ಆಸ್ಪತ್ರೆಯಲ್ಲಿ ಟ್ರಮಾ ಕೇರ್ ಸೇವೆಗಳನ್ನು ಆರಂಭಿಸುವ ಉದ್ದೇಶವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಾ. ಯತೀಂದ್ರ ಎಸ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ  ಆಸ್ಪತ್ರೆಗಳನ್ನು ರಾಷ್ಟ್ರೀಯ ಅಪಘಾತ ಮತ್ತು ಸುಟ್ಟಗಾಯಗಳ ಕಾರ್ಯಕ್ರಮದಡಿಯಲ್ಲಿ ಬಲಗೊಳಿಸಲು ರೂ. 10.00 ಕೋಟಿಗಳ ಕ್ರಿಯಾ ಯೋಜನೆಗೆ ಅನುಮೋದನ ನೀಡಲಾಗಿದೆ.

ದಿನಾಂಕ:  19.03.2025 ರಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯು ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುತ್ತದೆ. ಇದರಲ್ಲಿ ನಂಜನಗೂಡು ತಾಲ್ಲೂಕು ಆಸ್ಪತ್ರೆಗೆ ಅಗತ್ಯವಿರುವ ಉಪಕರಣಗಳನ್ನು ಸಹ ಪ್ರಸ್ತಾಪಿಸಲಾಗಿದೆ.  ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪಘಾತ ಮತ್ತು ಸುಟ್ಟ ಗಾಯಗಳ ತಡೆಗಟ್ಟುವಿಕೆ ಮತ್ತು ನಿರ್ವಹಣಾ ಕಾರ್ಯಕ್ರಮದ ಮಾರ್ಗಸೂಚಿಯನ್ವಯ – ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿನ ತುರ್ತು ಚಿಕಿತ್ಸಾ  ವಿಭಾಗವನ್ನು ಮೇಲ್ದರ್ಜೆಗೇರಿಸಿ ಅಪಘಾತಕ್ಕೆ ಒಳಗಾದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಹಾಗೂ ಅವಶ್ಯಕವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ತುರ್ತು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿರುತ್ತದೆ ಪ್ರತ್ಯೇಕ ಟ್ರಾಮಾ ಕೇರ್ ಸೆಂಟರ್‌ಗಳನ್ನು ಕಲ್ಪಿಸಬೇಕೆಂಬ ನಿಯಮವು ಮಾರ್ಗಸೂಚಿಯಲ್ಲಿ ಇಲ್ಲದಿರುವುದರಿಂದ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಲು ಜಾಗದ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.

ಯಲ್ಲಾಪುರ: ಪ. ಪಂ. ಹಾಗೂ ಇತರೆ ಸಮುದಾಯಗಳ ಮನೆಗಳಿಗೆ ವಿದ್ಯುತ್ ಒದಗಿಸಲು ಕ್ರಮ

ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) : ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಯಲ್ಲಾಪುರದ ಕಾಳಮ್ಮ ನಗರದಲ್ಲಿರುವ ಪರಿಶಿಷ್ಟ ಪಂಗಡದ ಮತ್ತು ಇತರೆ ಸಮುದಾಯಗಳ ಕೆಲವು ಕಚ್ಚಾ ಮನೆಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮವಹಿಸಲಾಗುವುದು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೂ ದಾಖಲಾತಿಗಳನ್ನು ಪಡೆದು ಕೂಡಲೇ ವಿದ್ಯುತ್ ಸಂಪರ್ಕ ನೀಡುವಂತೆ ಸೂಚನೆ ನೀಡಲಾಗುವುದು ಎಂದು ಇಂಧನ ಇಲಾಖೆ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶಾಂತರಾಮ ಬುಡ್ನ ಸಿದ್ದಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು,  ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಯಲ್ಲಾಪುರದ ಕಾಳಮ್ಮ ನಗರದಲ್ಲಿರುವ ಪರಿಶಿಷ್ಟ ಪಂಗಡದ ಮತ್ತು ಇತರೆ ಸಮುದಾಯಗಳ ಕೆಲವು ಕಚ್ಚಾ ಮನೆಗಳಿಗೆ (ಕಚ್ಚಾ ಮನೆ) ವಿದ್ಯುತ್ ಸಂಪರ್ಕ ನೀಡುವಂತೆ ಮನವಿಗಳು ಸ್ವೀಕೃತಗೊಂಡಿರುತ್ತವೆ. ಆದರೆ, ವಿದ್ಯುತ್ ಸಂಪರ್ಕ ನೀಡಲು KERC ನಿಯಮದಂತೆ ಅಗತ್ಯವಿರುವ ದಾಖಲಾತಿಗಳಾದ   ವಾರಸುದಾರಿಕೆ ರುಜುವಾತು/ ಮಾಲೀಕತ್ವದ ಪುರಾವೆ/ ಅನುಭವದ ರುಜುವಾತು/ ಸ್ಥಳೀಯ ಪ್ರಾಧಿಕಾರದ ಅನುಮತಿ ಪತ್ರ ಒದಗಿಸಿರದ ಕಾರಣ ಅರ್ಜಿ ನೊಂದಾವಣೆಗೊಂಡಿರುವುದಿಲ್ಲ. ಇದಲ್ಲದೇ, ಸದರಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದೆಂದು ಜಮೀನಿನ ವಾರಸುದಾರರೆಂದು ಹೇಳಿಕೊಂಡಿರುವವರು ಮನವಿ ಸಲ್ಲಿಸಿರುತ್ತಾರೆ. ಈ ಬಗ್ಗೆ ಪರಿಶೀಲಿಸಿ ಕೂಡಲೇ ಅಗತ್ಯ ದಾಖಲೆಗಳನ್ನು ಪಡೆದು ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸಂಬಂಧಿಸಿದವರಿಗೆ ತಿಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರವೇಶಾತಿ ಸಮಯದಲ್ಲಿ ಹೆಚ್ಚುವರಿ ಶುಲ್ಕ ವಸೂಲಾತಿ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ – ಸಚಿವ ಡಾ.ಎಂ.ಸಿ. ಸುಧಾಕರ್

ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ): ಕರ್ನಾಟಕ  ಪರೀಕ್ಷಾ ಪ್ರಾಧಿಕಾರದಲ್ಲಿ ಶುಲ್ಕ ಪಾವತಿ ಮಾಡಿದ ನಂತರ ಪ್ರವೇಶಾತಿ ಸಂರ್ಭದಲ್ಲಿ ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ಹೆಚ್ಚುವರಿ ಶುಲ್ಕ ವಸೂಲಾತಿ ಮಾಡಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ತಿಳಿಸಿದರು

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಶುಲ್ಕ ಪಾವತಿ ಮಾಡಿದ ನಂತರ ಪ್ರವೇಶಾತಿ ಸಂರ್ಭದಲ್ಲಿ ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಿಗದಿಪಡಿಸಿದ್ದಕ್ಕಿಂತ  ಹೆಚ್ಚಿನ ಯೂನಿವರ್ಸಿಟಿ ಶುಲ್ಕವನ್ನು ಪಾವತಿಸುವಂತೆ ಒತ್ತಾಯಿಸುತ್ತಿರುವುದಾಗಿ ಇಬ್ಬರು ಅಭ್ಯರ್ಥಿಗಳು ವಿಶ್ವವಿದ್ಯಾಲಯಗಳ ವಿರುದ್ಧ ಹಿಂದಿನ ಶೈಕ್ಷಣಿಕ ಸಾಲುಗಳಲ್ಲಿ, ಅಧ್ಯಕ್ಷರು, ಶುಲ್ಕ ನಿಯಂತ್ರಣ ಸಮಿತಿ ಇವರಿಗೆ CMR University, Hennur, Bagalur Main Road, Bangalore, ಮತ್ತು  Sharanabasava University, Kalaburgi ವಿರುದ್ದ ದೂರನ್ನು ಸಲ್ಲಿಸಿದ್ದರು. ಈ ಪ್ರಕರಣಗಳಲ್ಲಿ ವಿಚಾರಣೆ ನಡೆಸಿ, ಹೆಚ್ಚುವರಿಯಾಗಿ ಪಾವತಿಸಿರುವ ಶುಲ್ಕವನ್ನು ಅಭ್ಯರ್ಥಿಗಳಿಗೆ ಮರುಪಾವತಿಸಲು/ಮುಂದಿನ ಸಾಲಿಗೆ ಮರು ಹೊಂದಾಣಿಕೆ ಮಾಡಿಕೊಳ್ಳಲು ಆದೇಶ ಹೊರಡಿಸಲಾಗಿದೆ.

ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನೊಂದಣಿ ಶುಲ್ಕವಾಗಿ ರೂ.10,610 ನಿಗಧಿಪಡಿಸಿರುತ್ತದೆ. ಸರ್ಕಾರದಿಂದ ನಿಗಧಿಪಡಿಸಿರುವ ನಿಗಧಿಪಡಿಸಿರುವ ಬೋಧನಾ ಶುಲ್ಕ. ಅಭಿವೃದ್ಧಿ ಶುಲ್ಕ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ನೊಂದಣಿ ಶುಲ್ಕವನ್ನು ಒಳಗೊಂಡಂತೆ ವಿಶ್ವವಿದ್ಯಾಲಯವಾರು ಖಾಸಗಿ ವಿಶ್ವವಿದ್ಯಾಲಯಗಳ ಸರ್ಕಾರಿ ಕೋಟಾದ ಶೇ.40 ರಷ್ಟು ಸೀಟುಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪಾವತಿಸಬೇಕಾಗಿರುತ್ತದೆ.

CET ಮುಂದುವರಿದು, ಹೆಚ್ಚುವರಿ ಶುಲ್ಕದ ವಸೂಲಾತಿ ದೂರುಗಳು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ, ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಮೂಲಕ ಆಯ್ಕೆಯಾಗಿ ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿ ನಿಗಧಿಪಡಿಸುವ ಶುಲ್ಕದ ವಿವರಗಳನ್ನು ವಿಶ್ವವಿದ್ಯಾಲಯದ  (Website) ಅಪ್ಲೋಡ್ ಮಾಡಲು ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳು ಕುಲಸಚಿವರಿಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಿಂದ ದಿನಾಂಕ: :04.08.2025 ರಲ್ಲಿ ಸುತ್ತೋಲೆ ಮೂಲಕ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಸಿಂಧನೂರು ತಾಲ್ಲೂಕಿನ ರೈತರಿಗೆ 10 ಗಂಟೆ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಕ್ರಮ : ಸಚಿವ ಕೆ.ಜೆ. ಜಾರ್ಜ್

ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) : ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿನ ಸಿಂದನೂರು ತಾಲ್ಲೂಕಿನ ರೈತರ ಪಂಪ್ ಸೆಟ್ಟುಗಳಿಗೆ ನಿರಂತರವಾಗಿ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಭತ್ತ ನಾಟಿ ಸಮಯದಲ್ಲಿ 10 ಗಂಟೆಗಳ ಕಾಲ ವಿದ್ಯುತ್ ಪೂರೈಸಲು ರೈತರು ಮನವಿ ಸಲ್ಲಿಸಿದಲ್ಲಿ ವಿದ್ಯುತ್ ನಿಗಮದವರೊಂದಿಗೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು,   ಪ್ರಸ್ತುತ ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿನ ಸಿಂಧನೂರು ತಾಲ್ಲೂಕಿನ ರೈತರ ಪಂಪ್‌ಸೆಟ್ಟುಗಳಿಗೆ ನಿರಂತರವಾಗಿ 7 ಗಂಟೆಗಳ ಕಾಲ 3-ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಜೆಸ್ಕಾಂ ವ್ಯಾಪ್ತಿಯಲ್ಲಿ ಸಿಂಧನೂರು ತಾಲ್ಲೂಕು ವಿದ್ಯುತ್ ಉಪ-ವಿಭಾಗಕ್ಕೆ ಕ್ರೇನ್ ಒದಗಿಸುವ ಪ್ರಸ್ತಾವನೆ ಇದ್ದು, ಪರಿಶೀಲನಾ ಹಂತದಲ್ಲಿದೆ ಎಂದು ತಿಳಿಸಿದರು.

ಹೃದಯಘಾತಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಅರಿವು ಮೂಡಿಸಲು ಕ್ರಮ ವಹಿಸಲಾಗಿದೆ – ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) : ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಹೃದಯಘಾತಗಳ ಬಗ್ಗೆ ಪ್ರಕಟವಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಂಬಂಧ ಪ್ರಚಾರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಸಹ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಇಂದು ವಿಧಾನ ಪರಿಷತ್ ಪ್ರಶ್ನೋತ್ತರ  ಕಲಾಪದ ವೇಳೆ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು,  ಹೃದಯಾಘಾತ ಪ್ರಕರಣಗಳು ಅಧಿಸೂಚಿತ ರೋಗ ಎಂದು ಘೋಷಣೆಯಾಗದೆ ಇರುವುದರಿಂದ ಹೃದಯಾಘಾತ ಪ್ರಕರಣಗಳ ನಿಖರವಾದ ಮಾಹಿತಿ ಲಭ್ಯವಿರುವುದಿಲ್ಲ. ಆದರೆ, ಹಠಾತ್ ಹೃದಯಾಘಾತವನ್ನು ತಡೆಯಲು  ಡಾ. ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಮಾರ್ಚ್ 2023 ರಿಂದ ಪ್ರಾರಂಭಿಸಲಾಗಿರುತ್ತದೆ.

ಕಳೆದ 03 ವರ್ಷಗಳಲ್ಲಿ ಸಂಭವಿಸಿರುವ ಮರಣಗಳು ತೃತೀಯ ಹಂತದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಹಂತದಲ್ಲಿ ಮತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಈ ಎಲ್ಲಾ ಮರಣಗಳು Spokes & Hub  ನೊಂದಾಯಿಸಲ್ಪಟ್ಟಿರುತ್ತವೆ. ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಳೆದೆ 3 ವರ್ಷದಲ್ಲಿ ಹೃದಯಾಘಾತ ಸಂಭವಿಸಿರುವ ಪ್ರಕರಣಗಳ ಸಂಖ್ಯೆ 61299 ಇದರಲ್ಲಿ  45  ವರ್ಷಕ್ಕಿಂತ ಕಡಿಮೆ ವಯೆಸ್ಸಿನವರಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 472 ಎಂದು ವೈದಕೀಯ ಶಿಕ್ಷಣ ಇಲಾಖೆಯು ತಿಳಿಸಿದೆ.

 ರಾಜ್ಯದ ಯುವ ಸಮುದಾಯದಲ್ಲಿ  ತೀವ್ರ ಹೃದಯಾಘಾತದಿಂದ ಮರಣ ಪ್ರಕರಣಗಳು ವರದಿಯಾಗುತ್ತಿದ್ದು, ಈ ಬಗ್ಗೆ ಅಧ್ಯಯನ ನಡೆಸಲು ಡಾ|| ಕೆ.ಎಸ್. ರವೀಂದ್ರನಾಥ್, ನಿರ್ದೇಶಕರು, ಶ್ರೀ ಜಯದೇವ ಹೃದ್ರೋಗ ಸಂಸ್ಥೆ, ಬೆಂಗಳೂರು ಇವರ ನೇತೃತ್ವದಲ್ಲಿ  ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು  ಹೃದಯಾಘಾತ / ತೀವ್ರ ಹೃದಯಾಘಾತ ಪ್ರಕರಣಗಳಲ್ಲಿ ಶೇಕಡಾ 75% ಕ್ಕಿಂತ ಹೆಚ್ಚು ಜನರು ಒಂದಕ್ಕಿಂತ ಒಂದಕ್ಕಿಂತ ಹೆಚ್ಚು ಹೃದಯದ ಅಪಾಯಕಾರಿ ಅಂಶವನ್ನು ಹೊಂದಿದ್ದಾರೆ. ಅದರಲ್ಲಿ ಮುಖ್ಯವಾಗಿ ದೈಹಿಕ ಚಟುವಟಿಕೆಯಗಳಲ್ಲಿ ತೊಡಗದೆ ಇರುವುದು (ಜೀವನ ಶೈಲಿ ಬದಲಾವಣೆ), ಅನಾರೋಗ್ಯಕರ ಆಹಾರ ಪದ್ದತಿ, ಮಾನಸಿಕ ಒತ್ತಡ, ಅತಿಯಾದ ದೇಹದ ತೂಕ ಅಥವಾ ಬೊಜ್ಜುತನ, ಅತಿಯಾದ ಮದಪಾನ, ಮಧುಮೇಹ, ಧೂಮಪಾನ, ಅಧಿಕ ರಕ್ತದೊತ್ತಡ, ಕುಟುಂಬದ ಹೃದ್ರೋಗದ ಹಿನ್ನೆಲೆ ಹೊಂದಿರುತ್ತಾರೆ ಎಂದು ವರದಿಯಲ್ಲಿ ತಿಳಿಸಿದೆ.

ಹೃದಯ ಆರೋಗ್ಯ ಕಣ್ಗಾವಲು ಮೂಲಕ ಆಸ್ಪತ್ರೆಯ ಹೊರಗಿನ ಹಠಾತ್ ಸಾವುಗಳಿಗೆ ಕಡ್ಡಾಯ ಶವ ಪರೀಕ್ಷೆಗಳನ್ನು ನಡೆಸಲು ಕ್ರಮಕೈಗೊಳ್ಳುವುದು. ತ್ವರಿತ ಹೃದಯ ಚಿಕಿತ್ಸಾ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ECG ಯಂತ್ರಗಳು,  CPR ತರಬೇತಿ, ಸಾರ್ವಜನಿಕ ಸ್ಥಳಗಳಲ್ಲಿ AED ಗಳ ಸ್ಥಾಪನೆಗೆ ಕ್ರಮಕೈಗೊಳ್ಳುವುದು.ವಾಹನ ಚಾಲಕರಂತಹ ಅಪಾಯದ ಗುಂಪುಗಳಿಗೆ ಹೃದಯ ಕಾಯಿಲೆ ಬಗ್ಗೆ  ಆರೋಗ್ಯ ತಪಾಸಣೆಗಳನ್ನು ಹಾಗೂ ಜನಜಾಗೃತಿ ಅಭಿಯಾನಗಳನ್ನು ಆರಂಭಿಸಲು ಕ್ರಮಕೈಗೊಳ್ಳುವುದು. ಹೃದಯ ಆರೋಗ್ಯದ ಬಗ್ಗೆ ರಾಜ್ಯ ಮಟ್ಟದಲ್ಲಿ ಸಮಗ್ರ ಮತ್ತು ತ್ವರಿತ ಕ್ರಮ ತೆಗೆದುಕೊಳ್ಳಬೇಕೆಂದು ಶಿಫಾರಸ್ಸನ್ನು ಮಾಡಿರುತ್ತದೆ.

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿನ ಜಿಲ್ಲಾ ಆಸ್ಪತ್ರೆ ಮತ್ತು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಹೃದಯಾಘಾತ ಸಂಭವಿಸಿದಾಗ – ತುರ್ತು ಚಿಕಿತ್ಸೆ ನೀಡಲು ಅಗತ್ಯ ಔಷಧಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ತೀವ್ರ ಹೃದಯಾಘಾತ ಸಂಭವಿಸಿದಾಗ ಕೊರೊನರಿ ಸ್ಟಂಟ್ ಮತ್ತು ಕಾರ್ಡಿಯಕ್ ಬೈಪಾಸ್ ಸರ್ಜರಿಗಳಿಗೆ ಸೂಪರ್ ಸ್ಪೇಷಾಲಿಟಿ ತಜ್ಞರ ಅವಶ್ಯಕತೆ ಇರುವುದರಿಂದ ಸದರಿ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ (SAST) ನೊಂದಣಿ ಹೊಂದಿರುವ ತೃತೀಯ ಹಂತದ ಆಸ್ಪತ್ರೆಗಳಿಗೆ ಕಳುಹಿಸಿಕೊಡುವ ಕ್ರಮವಹಿಸಲಾಗಿರುತ್ತದೆ.

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬೆಂಗಳೂರು, ಮೈಸೂರು, ಕಲಬುರ್ಗಿ ಶಾಖೆಗಳಲ್ಲಿ ಹೃದಯಾಘಾತ ಸಂಭವಿಸಿದಾಗ ಕೊರೊನರಿ ಸ್ಟಂಟ್ ಮತ್ತು ಕಾರ್ಡಿಯಾಕ್ ಬೈಪಾಸ್‌ ಸರ್ಜರಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಮತ್ತು ಹೃದಯ ತ್ತು ಸ್ತಂಭನ ಪ್ರಕರಣಗಳಿಗೆ ಸಾರ್ವಜನಿಕರಲ್ಲಿ ಜಾಗೃತಿ – ಮೂಡಿಸಲು  ಗೃಹ ಆರೋಗ್ಯ ಯೋಜನೆ ಮೂಲಕ ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ಮತ್ತು ಹೃದಯಾಘಾತಕ್ಕೆ  ಕಾರಣವಾದ ಅಪಾಯಕಾರಿ ಅಂಶಗಳನ್ನು ಪತ್ತೆ ಮಾಡಲು 30 ವರ್ಷ ಮೇಲ್ಪಟ್ಟವರಿಗೆ ತಪಾಸಣೆ ಮಾಡಲು ಕ್ರಮವಹಿಸಲಾಗಿರುತ್ತದೆ.

ಡಾ. ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವಿಸ್ತರಿಸಲು ಕ್ರಮ ವಹಿಸಲಾಗುತ್ತಿದೆ. ಶಾಲೆಗಳಲ್ಲಿ, ಜಿಮ್‌ಗಳಲ್ಲಿ ಸಂಸ್ಥೆಗಳಲ್ಲಿ, ಸಾರ್ವಜನಿಕರಿಗೆ ಸಿ.ಪಿ.ಆ‌ರ್ ತರಬೇತಿ, ಜನಜಾಗೃತಿ ಹಾಗೂ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ ಸೂಚನೆ

ಬೆಂಗಳೂರು, ಆಗಸ್ಟ್ 18 (ಕರ್ನಾಟಕ ವಾರ್ತೆ): ಇಂದು ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಜ್ಞಾನ ದಾಸೋಹಿ ಡಾ:ಶರಣಬಸವಪ್ಪ ಅಪ್ಪ ಹಾಗೂ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳು ನಿಧನ ಹೊಂದಿರುವುದನ್ನು ತಿಳಿಸಿ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರು ವಿಧಾನ ಸಭೆಯಲ್ಲಿ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್ ನಲ್ಲಿ ಸಂತಾಪ ನಿರ್ಣಯವನ್ನು ಮಂಡಿಸಿ ಸಂತಾಪ ವ್ಯಕ್ತಪಡಿಸಿದರು.

ವಿಧಾನಸಭೆಯ ಸಚಿವರಾದ ಶಿವಾನಂದ ಪಾಟೀಲ್ ರವರು ಡಾ:ಶರಣಬಸವಪ್ಪ ಅಪ್ಪ ಹಾಗೂ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳು  ಸಂತಾಪ ಸೂಚನೆಗೆ ಬೆಂಬಲ ವ್ಯಕ್ತಪಡಿಸಿ ಡಾ:ಶರಣಬಸವಪ್ಪ ಅಪ್ಪ ಅವರು  14-11-1935ರಂದು ಜನಿಸಿದ್ದು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ನಂತರ ಅದೇ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಹಾಗೂ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು,  ಶರಣಬಸವೇಶ್ವರ ದೇವಸ್ಥಾನದ ದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿಯಾಗಿದ್ದ ಶ್ರೀಯುತರು ಆಧ್ಯಾತ್ಮ ವಿಷಯ ಸೇರಿದಂತೆ ಹಲವು ವಿಷಯಗಳಲ್ಲಿ ಅಪಾರ ಜ್ಞಾನ ಹೊಂದಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ಶ್ರೀಯುತರು ಶರಣಬಸವೇಶ್ವರ ವಿಶ್ವವಿದ್ಯಾಲಯ, ಶರಣಬಸವೇಶ್ವರ ರೆಸಿಡೆನ್ಸಿಯಲ್ ಪಬ್ಲಿಕ್ ಸ್ಕೂಲ್, ಅಪ್ಪ ಪಬ್ಲಿಕ್ ಸ್ಕೂಲ್, ಗೋದುತಾಯಿ  ಮಹಿಳಾ ಕಾಲೇಜು, ಎಂಜಿನಿಯರಿಂಗ್ ಕಾಲೇಜು  ಸೇರಿದಂತೆ 60 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಸುವ ಮೂಲಕ ಕಲಬುರಗಿಯಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದರು. 1963 ರಲ್ಲಿ ಅಖಿಲ ಭಾರತ ಶಿವಾನುಭವ ಮಂಟಪ ಸ್ಥಾಪನೆ, ದಾಸೋಹ ಜ್ಞಾನರತ್ನ ಸಾಹಿತಿಕ ಪಾಕ್ಷಿಕ ಪತ್ರಿಕೆಗಳನ್ನು ಪ್ರಾರಂಭಿಸಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಡ್ ಪ್ರಶಸ್ತಿಗಳಲ್ಲದೇ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಶ್ರೀ ಚಂದ್ರಶೇಖರನಾಥ ಸ್ವಾಮೀಜು ಅವರು ದಿ: 10-02-1945ರಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಹಳ್ಳಿಯೊಂದರಲ್ಲಿ ಜನಿಸಿದ್ದರು. ಬಿ.ಕಾಂ ಪದವೀಧರರಾಗಿದದ ಶ್ರೀಯುತರು ಬೆಂಗಳೂರಿನ ತಿರುಚ್ಚಿ ಕೈಲಾಸಾಶ್ರಮದಲ್ಲಿ ಸಂಸ್ಕೃತ ವೇದ ಅಧ್ಯಯನ ಮಾಡಿದ್ದರು.  1968ರಲ್ಲಿ ಆದಿಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದ ಅವರು 1983ರಲ್ಲಿ ಕೆಂಗೇರಿ ಬಳಿ 10 ಎಕರೆ ಜಮೀನಿನಲ್ಲಿ ಶ್ರೀ ಗುರು ಜ್ಞಾನ ಕೇಂದ್ರ ಟ್ರಸ್ಟ್ ಹೆಸರಿನಲ್ಲಿ ಪತ್ಯೇಕವಾಗಿ ಶಾಲೆ ಕಾಲೇಜು ಪ್ರಾರಂಭಿಸಿದ್ದರು.  ಶ್ರೀಯುತರು ಕಲ್ಯಾಣ ಕರ್ನಾಟಕದ ಬೆಳಕು  ಡಾ: ಶರಣಬಸವಪ್ಪ ಅಪ್ಪ ಅವರು ದಿ: 14-08-2025ರಂದು ನಿಧನ ಹೊಂದಿರುತ್ತಾರೆ. ಇವರ ನಿಧನವು ಇಡೀ ರಾಜ್ಯವು ಕಂಬನಿ ಮಿಡಿದಿದೆ. ಆಧ್ಯಾತ್ಮಿಕ ಗುರುಗಳಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು             ದಿ: 16-08-2025ರಂದು ನಿಧನ ಹೊಂದಿರುತ್ತಾರೆ. ಇಬ್ಬರು ಪರಮಪೂಜ್ಯರನ್ನು ಕಳೆದುಕೊಂಡ ಕರ್ನಾಟಕ ಬಡವಾಗಿದೆ ಎಂದು ತಿಳಿಸಿ ಈರ್ವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ತಿಳಿಸಿ ಸಂತಾಪಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಇಬ್ಬರು ಶರಣರು ವಿದ್ಯಾ ಹಾಗೂ ಅನ್ನ ದಾಸೋಹಕ್ಕೆ ಹಾಗೂ ಜನತೆಯ ದು:ಖ ದುಮ್ಮಾನಗಳಿಗೆ ಸದಾ ಸ್ಪಂದಿಸುತ್ತಿದ್ದರು. ತಮ್ಮ ಬೋಧನೆಗಳ ಮೂಲಕ ಜನರ ಸಮಸ್ಯೆಗಳಿಗೆ ತಮ್ಮ ಬೋಧನೆಗಳ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ಶರಣಬಸವಪ್ಪ ಅಪ್ಪ ಅವರು ಶರಣಬಸವೇಶ್ವರ ದೇವಸ್ಥಾನದ ದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿಯಾಗಿದ್ದರು. 60ಕ್ಕೂ ಹೆಚ್ಚು ಶಾಖೆಗಳನ್ನು ತೆರೆಯುವುದರ ಮೂಲಕ ಅಭೂತ ಸಾಧನೆ ಮಾಡಿದ್ದರು. 26 ಎಕರೆ ವಿಸ್ತೀರ್ಣದಲ್ಲಿ ಗೋಶಾಲೆ ನಿರ್ಮಾಣ, ಹೈದ್ರಾಬಾದ್ ಕರ್ನಾಟಕ  ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ.

ಚಂದ್ರಶೇಖರ ಸ್ವಾಮೀಜಿ ಅವರು 1968ರಲ್ಲಿ ಆದಿಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದ ಅವರು 1983ರಲ್ಲಿ ಕೆಂಗೇರಿ ಬಳಿ 10 ಎಕೆರೆ ಜಮೀನಿನಲ್ಲಿ ಶ್ರೀ ಗುರು ಜ್ಞಾನಕೇಂದರ ಟ್ರಸ್ಟ್ ಹೆಸರಿನಲ್ಲಿ ಪ್ರತ್ಯೇಕವಾಗಿ ಶಾಲೆ, ಕಾಲೇಜು ಪ್ರಾರಂಭಿಸಿದ್ದರು. 2002ರಲ್ಲಿ ಅದು ವಿಶ್ವ ಒಕ್ಕಲಿಗರ ಸಂಸ್ಥಾನ ಮಠ ಎಂದು ಪ್ರಚಾರಪಡೆಯಿತು. ಸನಾತನ ಸಂಸ್ಕೃತಿ ಹಾಗೂ ಪರಂಪರೆಗಳ ರಕ್ಷಕರಾಗಿದ್ದ ಶ್ರೀಯುತರು ಹಲವು ಸಾಮಾಜಿಕ ಚಳುವಳಿಗಳ ನೇತೃತ್ವ ವಹಿಸಿದ್ದರು. ಇಬ್ಬರೂ ಕೂಡ ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ತಿಳಿಸಿ ಸಂತಾಪಕ್ಕೆ ಬೆಂಬಲ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರುಗಳಾದ  ಅರವಿಂದ ಬೆಲ್ಲದ್, ಶರಣ್ ಕುಮಾರ್ ಕುಂದಾಪುರ, ಅರಗ ಜ್ಞಾನೇಂದ್ರ, ಅಲ್ಲಮಪ್ರಭು ಪಾಟೀಲ್, ಶರತ್ ಬಚ್ಚೇಗೌಡ,   ಜಿ.ಟಿ ದೇವೇಗೌಡ,  ಡಾ ಉಮೇಶ್ ಜಿ. ಜಾಧವ್, ಹಾಗೂ ಇನ್ನಿತರ ಶಾಸಕರು  ಡಾ:ಶರಣಬಸಪ್ಪ ಅಪ್ಪ ಹಾಗೂ ಚಂದ್ರಶೇಖರ ಸ್ವಾಮೀಜಿ ಇವರುಗಳು ಸಂತಾಪ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿ ತಮ್ಮ  ಸಂತಾಪ ವ್ಯಕ್ತಪಡಿಸಿದರು.

ವಿಧಾನಪರಿಷತ್ ನಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿರಾದ ಡಾ: ಶರಣ್ ಪ್ರಕಾಶ್ ರುದ್ರಪ್ಪ  ಪಾಟೀಲ್, ಅರಣ್ಯ ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರಾದ ಈಶ್ವರ್ ಖಂಡ್ರೆ, ಪರಿಷತ್ ಸದಸ್ಯರಾದ ತಳವಾರ ಸಾಬಣ್ಣ, ದಿನೇಶ್ ಗೂಳೀಗೌಡ, ಶಶಿಲ್ ನಮೋಶಿ ಅವರು ಬೆಂಬಲ ವ್ಯಕ್ತಪಡಿಸಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು.

ನಂತರ ಉಭಯ ಸದನಗಳಲ್ಲಿ ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡಿ, ನಂತರ ಸದನಲ್ಲಿ ಪ್ರಸ್ತಾಪಿತ ಸಂತಾಪ ಸೂಚನೆಯ್ನು ಮೃತಗಣ್ಯರ ಕುಟುಂಬಕ್ಕೆ ಕಳುಹಿಸಲಾಯಿತು.

ವಿಜಯನಗರ ಸಾಮ್ರಾಜ್ಯದ 20 ನೇ ವಂಶಸ್ಥ ತಿರುಮಲ ವೆಂಕಟ ದೇವರಾಯರ- “ಇನ್ ದಿ ಎಂಪೈರ್ ಆಫ್ ಗಾಡ್ ಕಿಂಗ್” ಪುಸ್ತಕ ಬಿಡುಗಡೆ*

ಹಂಪಿಯ ಪಾಳು ಬಿದ್ದ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಕ್ಕೆ ಸಂಕಲ್ಪ:ವಿಜಯನಗರ ಸಾಮ್ರಾಜ್ಯದ ವಂಶಸ್ಥ 19 ನೇ ಕೃಷ್ಣ ದೇವರಾಯ

ಬೆಂಗಳೂರು,ಆ.18; ವಿಜಯನಗರ ಸಾಮ್ರಾಜ್ಯದ ಗತ ವೈಭವ, ಹಂಪಿಯ ಇತಿಹಾಸ, ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಹಂಪಿಯಲ್ಲಿ ಪಾಳು ಬಿದ್ದಿರುವ ದೇವಸ್ಥಾನಗಳನ್ನು ಭಾರತೀಯ ಸರ್ವೇಕ್ಷಣಾಲಯದ ನಿಯಮಗಳನುಸಾರ ಪುನರುಜ್ಜೀವನಗೊಳಿಸಿ ನಿತ್ಯ ಪೂಜಾಕೈಂಕರ್ಯವನ್ನು ನಡೆಸಲು ಸಂಕಲ್ಪತೊಟ್ಟಿರುವುದಾಗಿ ವಿಜಯನಗರ ಸಾಮ್ರಾಜ್ಯದ ವಂಶಸ್ಥ 19 ನೇ ಕೃಷ್ಣ ದೇವರಾಯ ಹೇಳಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಮಿರಾಯಿ ಗ್ರೀನ್ಸ್ ನಲ್ಲಿ ರೋಟರಿ ಕ್ಲಬ್ ನಿಂದ ಆಯೋಜಿಸಲಾದ ವಿಜಯನಗರ ಸಾಮ್ರಾಜ್ಯದ 20 ನೇ ವಂಶಸ್ಥ, ಯುವ ಮತ್ತು ಕ್ರಿಯಾಶೀಲ ಬರಹಗಾರ ತಿರುಮಲ ವೆಂಕಟ ದೇವರಾಯರ ರಚಿತ “ಇನ್ ದಿ ಎಂಪೈರ್ ಆಫ್ ಗಾಡ್ ಕಿಂಗ್” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಹಂಪಿಯಲ್ಲಿ ವಿಜಯವಿಠಲ ಸೇರಿ ಕೆಲವೇ ದೇವಾಲಯಗಳಲ್ಲಿ ಪೂಜೆ ನೆರವೇರುತ್ತಿದೆ. ಉಳಿದಂತೆ ಸಾಸಿವೆಕಾಳು ಗಣಪ, ಕಡಲೆಕಾಳು ಗಣಪ ಸೇರಿ ಸಾಕಷ್ಟು ಗುಡಿಗಳಿವೆ. ಇಲ್ಲಿ ನಿತ್ಯ ಪೂಜೆ ನೆರವೇರಬೇಕು. ಈಗಾಗಲೇ ಪಂಡಿತರ ಜೊತೆ ಚರ್ಚಿಸಿದ್ದು, ಭಾರತೀಯ ಪುರಾತತ್ವ ಇಲಾಖೆಯ ನಿಯಮಗಳನ್ವಯ ಹಂಪಿಯಲ್ಲಿ ಈ ಹಿಂದೆ ನಡೆಯುತ್ತಿದ್ದ ಪೂಜಾ ವಿಧಿ ವಿಧಾನಗಳನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಇತರೆ ಎಎಸ್ಐ ಅಡಿ ಬರುವ ಪಾರಂಪರಿಕ ತಾಣಗಳಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

ನನ್ನ ಮಗ ಮೂರನೇ ವರ್ಷದಿಂದ ಪುಸ್ತಕ ಓದುವ ಬಗ್ಗೆ ಒಲವು ಹೊಂದಿದ್ದ. ವ್ಯಾಪಕ ಅಧ್ಯಯನ ಮಾಡುತ್ತಿದ್ದು, ಐರೋಪ್ಯ ಇತಿಹಾಸವನ್ನು ತಿಳಿದುಕೊಂಡಿದ್ದಾನೆ. ಇತಿಹಾಸ ಅಧ್ಯಯನ ಮಾಡಿರುವ ಈತ ಲಂಡನ್ ನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ಸ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಹಿಂದಿನ ಇತಿಹಾಸಕಾರರು ವಿಜಯನಗರದ ಬಗ್ಗೆ ಬರೆದಿರುವುದೆಲ್ಲವೂ ಐತಿಹಾಸಿಕ ಸತ್ಯ. ಈ ಕೃತಿಯಲ್ಲಿ ಇತಿಹಾಸಕ್ಕೆ ಕಥೆಯ ರೂಪ ಕೊಟ್ಟಿದ್ದಾನೆ. ಕಾಲೇಜು ಸಂದರ್ಭದಲ್ಲೂ ವಿಜಯನಗರದ ಬಗ್ಗೆ ಆಳವಾಗಿ ಅಧ್ಯಯನ ಮಾಡುತ್ತಿದ್ದ ಎಂದರು.

ಕೃತಿಕಾರ ಮತ್ತು ವಿಜಯನಗರ ಸಾಮ್ರಾಜ್ಯದ 20 ನೇ ವಂಶಸ್ಥ ತಿರುಮಲ ದೇವರಾಯ ಮಾತನಾಡಿ, ವಿಜಯನಗರದ ಇತಿಹಾಸವನ್ನು ಕಥನದ ರೂಪದಲ್ಲಿ ಬರೆದಿದ್ದು, ಇತಿಹಾಸದ ಬಗ್ಗೆ ಅಧ್ಯಯನ ಮಾಡುವವರಷ್ಟೇ ಅಲ್ಲದೇ ಈ ಕೃತಿ ಪ್ರತಿಯೊಬ್ಬರನ್ನು ಸೆಳೆಯುತ್ತದೆ.

ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ. ನಾನು ಹಂಪಿ, ಆನೆಗೊಂದಿಯಲ್ಲಿ ಆಡಿ ಬೆಳೆದಿದ್ದೇನೆ. ಇಲ್ಲಿನ ಇತಿಹಾಸವನ್ನು ಬಲ್ಲೆ. ಭಾರತವಷ್ಟೇ ಅಲ್ಲ ಇಡೀ ಪ್ರಪಂಚಕ್ಕೆ ಇಲ್ಲಿನ ಭವ್ಯ ಪರಂಪರೆ ಗೊತ್ತಾಗಬೇಕು ಎಂಬ ಕಾರಣದಿಂದ ಇಂಗ್ಲೀಷ್ ನಲ್ಲಿ ಕೃತಿ ರಚಿಸಿದ್ದೇನೆ ಎಂದರು.

ಆಗಿನ ವಿಜಯನಗರದ ಸಾಮ್ರಾಜ್ಯದ ಕಾಲದ ಘಟ್ಟದಲ್ಲಿ ಹೇಗಿತ್ತು ಎಂಬುದನ್ನು ತಿಳಿಸುವ ಉದ್ದೇಶ ತಮ್ಮದಾಗಿದೆ. ಇತಿಹಾಸದ ಪ್ಯಾಷನ್ ಇದ್ದರೆ ಮಾತ್ರ ಇತಿಹಾಸ ಓದಲು ಸಾಧ್ಯ. ಆದರೆ ಈ ಕೃತಿಯನ್ನು ಎಲ್ಲರೂ ಓದಬಹುದು. ಇದು ಆ ಕಾಲದ ವಿಷಯ. ಮುಂದಿನ ದಿನಗಳಲ್ಲಿ ಈ ಕೃತಿ ಆಧಾರಿಸಿ ಚಲನಚಿತ್ರ ನಿರ್ಮಿಸುವ ಗುರಿ ಹೊಂದಲಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಕೃತಿ ತರ್ಜುಮೆಯಾಗುತ್ತಿದೆ ಎಂದರು.

ರೋಟರಿ ಡಿಸ್ಟ್ರಿಕ್ ಗೌರ್ನರ್ ಬಿ.ಆರ್. ಶ್ರೀಧರ್ ಮಾತನಾಡಿ, ವಿಜಯನಗರದ ವಾಸ್ತುಶಿಲ್ಪ ಪ್ರತಿಯೊಬ್ಬರನ್ನು ಸೆಳೆಯುತ್ತದೆ. ಇಡೀ ಜಗತ್ತಿಗೆ ಇದು ಪ್ರೇರಣಾದಾಯಕ ತಾಣವಾಗಿದ್ದು, ಅಲ್ಲಿನ ವೈಶಿಷ್ಟ್ಯಕ್ಕೆ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿರುವುದು ವಿಶೇಷವಾದದ್ದು. ಹಂಪಿಯಲ್ಲಿ ಮತ್ತಷ್ಟು ರಚನಾತ್ಮಕ ಕೆಲಸಗಳನ್ನು ಮಾಡಲು ರೋಟರಿ ಸಂಸ್ಥೆ ಸಿದ್ಧವಾಗಿದೆ ಎಂದರು.

ರೋಟರಿ ಬನ್ನೇರುಘಟ್ಟ ವಿಭಾಗದ ಅಧ್ಯಕ್ಷರಾದ ಡಾ. ಕನ್ವಾಲ್ ಕಮ್ರಾ ಎಸ್ ಮಾತನಾಡಿ, ಹಂಪಿ ನಮ್ಮ ಇತಿಹಾಸದ ಒಂದು ಪ್ರಮುಖ ಮೈಲಿಗಲ್ಲು. ರಾಮ ಮತ್ತು ಹನುಮಂತ ಭೇಟಿ ಮಾಡಿದ ಮೊದಲ ತಾಣ ಎಂಬ ಐತಿಹ್ಯವಿದೆ. ಇದು ವೈಭವದ ಇತಿಹಾಸ ಹೊಂದಿದ್ದು, ನಮ್ಮ ಭರತ ಖಂಡಕ್ಕೆ ಇದು ಕಳಶಪ್ರಾಯವಾಗಿದೆ. ಹಂಪಿ ಒಂದು ಕಾಲದಲ್ಲಿ ಹೈಟೆಕ್ ನಗರವಾಗಿತ್ತು. ಇದು ನಮ್ಮ ದೇಶಕ್ಕೆ ಲೈಟ್ ಹೌಸ್ ಆಗಿದೆ. ನಮಗೆಲ್ಲ ಇದು ಸ್ಫೂರ್ತಿಯಾಗಿದೆ ಎಂದರು.

ಆರ್.ಬಿ.ಬಿ.ಆರ್ ಕಾರ್ಯದರ್ಶಿ ಸುರೇಶ್ ಪ್ರಕಾಶ್, ಬನ್ನೇರುಘಟ್ಟ ರೋಟರಿ ಕ್ಲಬ್ ಸದಸ್ಯರಾದ ರಾಮ್ ಕುಲಕರ್ಣಿ, ವಂದನಾ ಕುಲಕರ್ಣಿ, ಅನಿಲ್, ವಿವಿಧ ರೋಟರಿ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಶ್ರೀ ಕೃಷ್ಣ ಕವನ ಸ್ಪರ್ಧೆ

ಚಾಮರಾಜನಗರ: ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಆಗಸ್ಟ್ 31 ರಂದು ರಥದಬೀದಿಯಲ್ಲಿ ನಡೆಯಲಿರುವ 15ನೇ ವರ್ಷದ ಮೊಸರು ಮಡಿಕೆ ಒಡೆಯುವ ಉತ್ಸವದ ಅಂಗವಾಗಿ ಮೊಟ್ಟ ಮೊದಲ ಬಾರಿಗೆ ಶ್ರೀ ಕೃಷ್ಣ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಶ್ರೀ ಕೃಷ್ಣನ ಕುರಿತಾಗಿ ಸ್ವರಚಿತ ಕವನಗಳನ್ನು ರಚಿಸಲು ಅವಕಾಶವಿದ್ದು, ತಮ್ಮ ಹೆಸರುಗಳನ್ನು ಹಾಗೂ ಕವನಗಳನ್ನು ಈ ದೂರವಾಣಿ ಸಂಖ್ಯೆಗೆ ವಾಟ್ಸಾಪ್ ಮಾಡಬೇಕಾಗಿ ಕೋರಿಕೊಳ್ಳುತ್ತೇವೆ.
96117418 68

ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಗುವುದು ಎಂದು ಶ್ರೀಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದ್ದಾರೆ.

31ರ ಭಾನುವಾರ ಸಂಜೆ 3 ಗಂಟೆಗೆ ರಥದ ಬೀದಿಯಲ್ಲಿ ಜರುಗುವ ಮೊಸರು ಮಡಿಕೆ ಒಡೆಯುವ ಉತ್ಸವ ಅತ್ಯಂತ ವೈಭವದಿಂದ, ವಿಶೇಷವಾಗಿ ನಡೆಯಲಿದ್ದು ತಮ್ಮ ಮಕ್ಕಳನ್ನು ಶ್ರೀಕೃಷ್ಣ ಹಾಗೂ ರಾಧೆಯ ವೇಷಧಾರಿಗಳಾಗಿ ಆಗಮಿಸಿ 21 ಅಡಿ ಎತ್ತರದ ಮಡಿಕೆ ಮೊಸರು ಮಡಿಕೆ ಒಡೆಯುವ ಉತ್ಸವದಲ್ಲಿ ಪಾಲ್ಗೊಂಡು ಬೆಣ್ಣೆ ಹಾಗೂ ಮೊಸರನ್ನು ತೆಗೆಯುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಕೃಷ್ಣ ಪ್ರತಿಷ್ಠಾನ ಮನವಿ ಮಾಡಿಕೊಂಡಿದೆ.

*ಸಾರ್ವಜನಿಕ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿಯಿಂದ  ಕೃಷ್ಣ ಲೀಲೋತ್ಸವ, ಭಜನಾ ಸ್ಪರ್ಧೆ ಆಯೋಜನೆ* 

‘ಸಮಾಜವನ್ನು ಒಗ್ಗೂಡಿಸಲು ಭಜನಾ ಸ್ಪರ್ಧೆಗಳ ಪಾತ್ರ ಪ್ರಮುಖ’
*ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷ  ಡಾ.ವಾದಿರಾಜ ತಾಯಲೂರು ಅಭಿಮತ*
*ಸಾರ್ವಜನಿಕ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿಯಿಂದ  ಕೃಷ್ಣ ಲೀಲೋತ್ಸವದ ಪ್ರಯುಕ್ತ ಭಜನಾ ಸ್ಪರ್ಧೆ ಆಯೋಜನೆ*
ಬಸವನಗುಡಿಯ  ಗೋವರ್ಧನ ಕ್ಷೇತ್ರ ಪುತ್ತಿಗೆ ಮಠ ಮತ್ತು ಅಮೃತ ಶಿಶು ನಿವಾಸದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ  ಅಖಿಲ ಕರ್ನಾಟಕ ಮಟ್ಟದ  ಭಜನಾ ಸ್ಪರ್ಧೆಯನ್ನು ಅಖಿಲ ಕರ್ನಾಟಕ ಭಜನಾ ಪರಿಷತ್ತು ಮತ್ತು 20ನೇ ಸಾರ್ವಜನಿಕ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಸಹಯೋಗದೊಂದಿಗೆ  ಆಯೋಜಿಸಲಾಗಿತ್ತು .
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷ  ಡಾ.ವಾದಿರಾಜ ತಾಯಲೂರು ಚಾಲನೆ ನೀಡಿ ಸನಾತನ ಧರ್ಮ ಉಳಿವ ನಿಟ್ಟಿನಲ್ಲಿ  ಭಜನೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ . ವಿಭಜನೆಗೊಳ್ಳುತ್ತಿರುವ  ಈ ಸಂದರ್ಭದಲ್ಲಿ  ಸಮಾಜವನ್ನು ಒಗ್ಗೂಡಿಸಲು  ಇಂತಹ  ಸ್ಪರ್ಧೆಗಳು  ಅಗತ್ಯ ಎಂದು  ತಿಳಿಸಿದರು .
ದಾಸ ಸಾಹಿತ್ಯ ಚಿಂತಕ ಡಾ. ಅನಂತ ರಾವ್ ದಂಡಿನ್ , ಹಿರಿಯ ಪತ್ರಕರ್ತ, ವಿಕಾಸ ಕಾರ್ಯದರ್ಶಿ ಹನುಮೇಶ್ ಯಾವಗಲ್ ಸ್ಪರ್ದಿಗಳಿಗೆ ಪ್ರಮಾಣಪತ್ರ ವಿತರಿಸಿದರು.ಸಂಸ್ಕೃತಿ ಚಿಂತಕ  ಡಾ.ಗುರುರಾಜ ಪೋಶೆಟ್ಟಿಹಳ್ಳಿ ಧರ್ಮ ದೀಕ್ಷಾ ಪ್ರತಿಜ್ಞೆ ಬೋಧಿಸಿದರು. ಕಾರ್ಯಕ್ರಮದ ಆಯೋಜಕರಾದ  ಅಕ ಭ ಪ ದ ಡಾ ಕೆ ಜಿ ಮುರುಳಿಧರ ಶರ್ಮ ,ಸಂಘಟನಾ ಕಾರ್ಯದರ್ಶಿ ಟಿವಿ ಮಲ್ಲಿಕಾರ್ಜುನ , ತೀರ್ಪುಗಾರರಾದ  ಪದ್ಮ ಪ್ರಕಾಶ್ ,  ಸುಗುಣ ಬೆಳ್ಳೂರು  ಮೊದಲಾದವರು ಉಪಸ್ಥಿತರಿದ್ದರು