ರಾಜ್ಯಸರ್ಕಾರದ ಶಿಷ್ಟಾಚಾರ ಇಲಾಖೆ ವ್ಯಾಪ್ತಿಗೆ ಬರುವ ಕುಮಾರ ಕೃಪಾ (Kumara Krupa Guest House) ಅತಿಥಿಗೃಹ ಮುಖ್ಯಮಂತ್ರಿ (Chief Minister) ಡಿ.ಕೆ.ಶಿವಕುಮಾರ್ (DK Shivakumar) ಅವರ ಅಧಿಕೃತ ನಿವಾಸವಾಗಿ ಮಾರ್ಪಡಿಸುವ ಸಂಬಂದ ನವೀಕರಣ ಕಾಮಗಾರಿ ಆರಂಭವಾಗಿದೆ

ಕುಮಾರಕೃಪಾ ಅತಿಥಿಗೃಹ ಪಾರಂಪರಿಕ ಕಟ್ಟಡವಾಗಿದ್ದು 12 ಕೋಣೆಗಳಿವೆ ಹಾಗೂ ಕುಮಾರ ಕೃಪಾ ಅನೆಕ್ಸ್ ಕಟ್ಟಡದಲ್ಲಿ 23 ಕೋಣೆಗಳಿವೆ ಇವೆರಡು ಕಟ್ಟಡಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧಿಕೃತ ಸರ್ಕಾರಿ ನಿವಾಸದ ಭಾಗವಾಗಲಿವೆ
ಕುಮಾರಕೃಪಾ ಅತಿಥಿ ಗೃಹದ ನವೀಕರಣ ಕಾರ್ಯ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸರ್ಕಾರಿ ನಿವಾಸವನ್ನು ಇಲ್ಲಿಗೆ ಬದಲಾಯಿಸಲಿದ್ದಾರೆ.
ವಾಸ್ತು ಶಾಸ್ತ್ರದ ಪ್ರಕಾರ ಉತ್ತರದಿಕ್ಕಿನಿಂದ ಮನೆಗೆ ಪ್ರವೇಶ ಮಾಡಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸರ್ಕಾರಿ ನಿವಾಸವನ್ನು ಕುಮಾರಕೃಪಾಗೆ ಶಿಫ್ಟ್ ಮಾಡಲು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅಂದಿನ ಮೈಸೂರು ದಿವಾನರಾದ ಕೆ. ಶೇಷಾದ್ರಿ ಅಯ್ಯರ್ ಅವರು 1885 ಮತ್ತು 1897 ರಲ್ಲಿ ತಮ್ಮ ಖಾಸಗಿ ನಿವಾಸಕ್ಕಾಗಿ ಈ ಕಟ್ಟಡವನ್ನು ನಿರ್ಮಿಸಿ ಅದಕ್ಕೆ ಕುಮಾರ ಕೃಪಾ ಎಂದು ಹೆಸರು ಇಡುತ್ತಾರೆ.
ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ರಾಷ್ಟ್ರಪಿತ ಮಹಾತ್ಮಾಗಾಂಧಿಯವರು ಬೆಂಗಳೂರಿಗೆ ಬಂದಾಗ ಕುಮಾರಕೃಪಾ ಅತಿಥಿ ಗೃಹದಲ್ಲಿ ವಾಸ್ತಾವ್ಯ ಮಾಡುತ್ತಿದ್ದರು.
ಬೌದ್ದ ಧರ್ಮಗುರು ದಲಾಯಿಲಾಮ ಅವರು ಹಲವುಬಾರಿ ಇಲ್ಲಿ ಉಳಿದುಕೊಂಡಿದ್ದರು. ಪ್ರಧಾನಮಂತ್ರಿ ರಾಜೀವ್ ಗಾಂಧಿಯವರು ತಮ್ಮ ಕೊನೆಯ ಸುದ್ದಿಗೋಷ್ಠಿ ಕುಮಾರಕೃಪಾ ಅತಿಥಿ ಗೃಹದಲ್ಲಿ ನಡೆಸಿದ್ದರು. ಬಿಜೆಪಿ ವರಿಷ್ಠ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಬೆಂಗಳೂರಿಗೆ ಬಂದಾಗ ಇಲ್ಲಿಯೇ ವಾಸ್ತವ್ಯ ಮಾಡುತ್ರಿದ್ದರು ಎಂದು ಕುಮಾರ ಕೃಪಾ ಅತಿಥಿಗೃಹದ ಹಿರಿಯ ಸಿಬ್ಬಂದಿಗಳು ಹೇಳುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸವನ್ನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಧರ್ಮಸಿಂಗ್ ಅವರು ಅನುಗ್ರಹ ವನ್ನು ತಮ್ಮ ಸರ್ಕಾರಿ ನಿವಾಸಕ್ಕಾಗಿ ಆಯ್ಕೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಕುಮಾರಕೃಪ ಅತಿಥಿಗೃಹವನ್ನು ಮುಖ್ಯಮಂತ್ರಿಗಳ ನಿವಾಸ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ.

